ಮೈಸೂರು: ಲ್ಯಾಂಡ್‌ಡೆವಲೆಪ್‌ಮೆಂಟ್ ಹಾಗೂ ಷೇರು ವಹಿವಾಟಿನಲ್ಲಿ ಲಕ್ಷ ಲಕ್ಷ ರೂ. ಸಂಪಾದಿಸಬಹುದು ಎಂದು ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ರೂ. ವಂಚಿಸಿರುವುದಾಗಿ ದೂರು ನೀಡಲಾಗಿದೆ.
ರಾಜೇಂದ್ರನಗರದ ಗಜೇಂದ್ರ ವಂಚನೆಗೆ ಒಳಗಾಗಿ ಈಗ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಆಲನಹಳ್ಳಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಆರ್.ನಗರ ತಾಲೂಕು ಚೀರನಹಳ್ಳಿ ಮೂಲದ ಪೇದೆ ಶಿವಕುಮಾರ್ ಸೇರಿದಂತೆ 7 ಜನರ ವಿರುದ್ಧ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಂಕ್‌ನಿಂದ ನಿವೃತ್ತಿ ಹೊಂದಿದ ಬಳಿಕ ಅಂಕನಹಳ್ಳಿಯಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಗಜೇಂದ್ರ ಅವರನ್ನು ಆಲನಹಳ್ಳಿ ಠಾಣೆಯ ಪೇದೆ ಶಿವಕುಮಾರ್ 2022 ರಲ್ಲಿ ಸಂಪರ್ಕಿಸಿ ಲ್ಯಾಂಡ್ ಡೆವಲಪ್ ಮೆಂಟ್ ಹಾಗೂ ಷೇರು ವಹಿವಾಟಿನ ಬಗ್ಗೆ ಆಸಕ್ತಿ ತುಂಬಿದ್ದಾರೆ. ದಟ್ಟಗಳ್ಳಿಯಲ್ಲಿರುವ ಯೂನಿವರ್ಸಲ್ ಡೆವಲಪರ್ಸ್ ಕಚೇರಿಗೆ ಕರೆದೊಯ್ದು ಜಮೀನು ಖರೀದಿಸಿ ನಿವೇಶನಗಳನ್ನಾಗಿ ಪರಿವರ್ತಿಸಿ ಹೇರಳವಾಗಿ ಸಂಪಾದಿಸಬಹುದು ಹಾಗೂ ಷೇರು ವಹಿವಾಟಿನಲ್ಲಿ ಹಣ ಹೂಡಿ ಹೆಚ್ಚಿನ ಲಾಭಾಂಶ ಗಳಿಸಬಹುದು ಎಂದು ನಂಬಿಸಿದ್ದಾರೆ.
ಈಗಾಗಲೇ ರಾಮನಗರ, ಸಕಲೇಶಪುರದಲ್ಲಿ ಜಮೀನು ಖರೀದಿಸಿ ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡುವ ಪ್ರಾಜೆಕ್ಟ್ ನಡೆಯುತ್ತಿರುವ ನಂಬಿಸಿದ್ದಾರೆ. ಈ ವಹಿವಾಟಿನಲ್ಲಿ ನಿವೃತ್ತ ಡಿಸಿಪಿ ಮಲ್ಲಿಕಾರ್ಜುನಪ್ಪ ಹಾಗೂ ಶಿಕ್ಷಣ ಇಲಾಖೆಯ ಹೊನ್ನಪ್ಪ ಸಹ ಹಣ ಹೂಡಿಕೆ ಮಾಡಿ ಲಕ್ಷಾಂತರ ಹಣ ಸಂಪಾದಿಸುತ್ತಿದ್ದಾರೆ ಎಂದು ಹೇಳಿದರಾರೆ. ಪೇದೆ ಶಿವಕುಮಾರ್ ತಾನೂ ಹಣ ಹೂಡಿರುವುದಾಗಿ ಹಾಗೂ ಹೂಡಿದ ಹಣಕ್ಕೆ ತಾನು ಗ್ಯಾರಂಟಿ ಎಂಬ ಮಾತನ್ನು ನಂಬಿದ ಗಜೇಂದ್ರ ಅವರು ಹೂಡಿಕೆ ಮಾಡಿದ್ದರು ಎನ್ನಲಾಗಿದೆ.
ಮೊದಲು ಎರಡು ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ನಂತರ ಯೂನಿವರ್ಸಲ್ ಡೆವಲಪರ್ಸ್‌ನಲ್ಲಿ ಐಡಿ ಕ್ರಿಯೇಟ್ ಮಾಡುವುದಾಗಿ ನಂಬಿಸಿ ಗಜೇಂದ್ರ ಅವರಿಂದ ಆಧಾರ್ ಕಾರ್ಡ್, ಪಾನ್‌ಕಾರ್ಡ್ ಹಾಗೂ ಪಾಸ್‌ಬುಕ್‌ಗಳನ್ನ ಪಡೆದಿದ್ದಾರೆ. ವಂಚಕರ ಮಾತು ನಂಬಿದ ಗಜೇಂದ್ರ ಹಂತ ಹಂತವಾಗಿ ಲಕ್ಷಾಂತರ ರೂ. ಹೂಡಿಕೆ ಮಾಡಿದ್ದಾರೆ. ಇದೇ ವೇಳೆ ಗಜೇಂದ್ರ ಅವರ ಅರಿವಿಗೆ ಬರದಂತೆ ಬ್ಯಾಂಕ್‌ನಿಂದ ಸಹ ಲಕ್ಷಾಂತರ ರೂ. ಹಣ ವರ್ಗಾವಣೆ ಮಾಡಿದಲ್ಲದೇ ಇವರ ಅನುಮತಿ ಪಡೆಯದೆ ಷೇರು ವಹಿವಾಟಿನಲ್ಲಿ ತೊಡಗಿಸಿದ್ದಾರೆ.
ವಹಿವಾಟಿನಲ್ಲಿ ನಷ್ಟ ಉಂಟಾದರೆ ಕಂಪನಿಯೇ ಭರಿಸುತ್ತದೆ ಎಂಬ ಭರವಸೆ ನೀಡಿದ ಹಿನ್ನಲೆ ಗಜೇಂದ್ರ ಅವರು ಹಣ ಹೂಡಿದ್ದಾರೆ. ಕೆಲವೇ ದಿನಗಳಲ್ಲಿ ಇವರ ಜಾಲದಲ್ಲಿ ಸಿಲಿಕಿರುವ ಅನುಭವ ಗಜೇಂದ್ರ ಅವರಿಗೆ ಮನದಟ್ಟಾಗಿದೆ. ಹಣ ಹಿಂದಿರುಗಿಸುವಂತೆ ಒತ್ತಾಯಿಸಿದಾಗ ಒಂದು ತಿಂಗಳ ಗಡುವು ಕೇಳಿದ್ದಾರೆ. ಪೇದೆ ಶಿವಕುಮಾರ್ ಸಹ ಕ್ರಮ ಕೈಗೊಂಡರೆ ತನ್ನ ಕೆಲಸಕ್ಕೆ ತೊಂದರೆ ಆಗುತ್ತದೆ ಎಂದು ಅಲವತ್ತುಕೊಂಡಿದ್ದಾರೆ.
ತಮ್ಮ ಹಣ ಹಿಂದಿರುಗಿಸುವಂತೆ ಎಷು ್ಟಬಾರಿ ಮನವಿ ಮಾಡಿದರೂ ಆರೋಪಿಗಳಿಂದ ಸೂಕ್ತ ಸ್ಪಂದನೆ ದೊರೆತಿಲ್ಲ. ಹೀಗಾಗಿ ಗಜೇಂದ್ರ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ದಟ್ಟಗಳ್ಳಿಯಲ್ಲಿರುವ ಯೂನಿವರ್ಸಲ್ ಡೆವಲಪರ್ಸ್ ಹೆಸರಲ್ಲಿ ಗಜೇಂದ್ರ ಅವರಿಗೆ ವಂಚಿಸಿದ್ದಾರೆ. ಕನಕದಾಸ ನಗರದ ಉಮೇಶ್, ಪೊಲೀಸ್ ಪೇದೆ ಶಿವಕುಮಾರ್,ದಟ್ಟಗಳ್ಳಿಯ ಕೃಷ್ಣಮೂರ್ತಿ, ಕೇರ್ಗಳ್ಳಿಯ ಮಲ್ಲಿಕಾರ್ಜುನ್, ಕುಂಬಾರಕೊಪ್ಪಲಿನ ಹೇಮಂತ್‌ಕುಮಾರ್, ದಟ್ಟಗಳ್ಳಿಯ ಜ್ಯೋತಿ ಹಾಗೂ ದೀಪಾ ವಿರುದ್ದ ಪ್ರಕರಣ ದಾಖಲಾಗಿದೆ.