ಜಿಲ್ಲೆ

ಕರ್ನಾಟಕ-ಆಂಧ್ರ ಗಡಿರೇಖೆ ಮರು ಸರ್ವೇ ಮಾಡಿ:ಶಾಸಕ ನಾರಾ ಭರತ್‌ರೆಡ್ಡಿ ಒತ್ತಾಯ

ಬಳ್ಳಾರಿ: ಕರ್ನಾಟಕ- ಆಂಧ್ರಪ್ರದೇಶದ ಗಡಿ ಗುರುತಿಸುವ ಸಮೀಕ್ಷೆಯಲ್ಲಿ ತಾಂತ್ರಿಕ ದೋಷಗಳಿದ್ದು, ಮತ್ತೊಮ್ಮೆ ಸಮೀಕ್ಷೆ ನಡೆಸುವ ಮೂಲಕ ರಾಜ್ಯದ ಗಡಿಯನ್ನು ರಕ್ಷಿಸಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಸರ್ಕಾರವನ್ನು ಒತ್ತಾಯಿಸಿದರು.

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಶೇಷ ಅಧಿವೇಶನದಲ್ಲಿ ಸೋಮವಾರ ಭಾಗಿಯಾಗಿ ಪ್ರಶ್ನೋತ್ತರ ವೇಳೆಯಲ್ಲಿ ಸರ್ಕಾರದ ಗಮನ ಸೆಳೆದರು.

ಈ ಹಿಂದೆ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದ ಸಂದರ್ಭ ನಡೆದ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದ, ಆಂಧ್ರಪ್ರದೇಶದಲ್ಲಿ ಗಣಿ ಗುತ್ತಿಗೆ ಹೊಂದಿದ್ದ ಕೆಲವರ ಕುತಂತ್ರದಿಂದ ಅವೈಜ್ಞಾನಿಕ ಸಮೀಕ್ಷಾ ಮಾದರಿ (ಯುನಿಲ್ಯಾಟರಲ್ ಸರ್ವೆ)ಯಿಂದಾಗಿ ಹಾಗೂ ಈ ಹಿಂದಿನ ಜಿಲ್ಲಾಧಿಕಾರಿಗಳಿಗೆ ಮಾಹಿತಿಯನ್ನೇ ನೀಡದೇ ಸರ್ವೇ ಆಫ್ ಇಂಡಿಯಾ ಅಂತಿಮಗೊಳಿಸಿರುವ ಸಮೀಕ್ಷೆಯಿಂದ ರಾಜ್ಯದ ಗಡಿಗೆ ಅನ್ಯಾಯ ಆಗಲಿದೆ ಎಂದರು.

ಈ ಹಿಂದೆ 2009ರಲ್ಲಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಸುಪ್ರೀಂ ಕೋರ್ಟ್ ಸಮೀಕ್ಷೆಗೆ ಆದೇಶ ನೀಡಿತ್ತು, ಆದರೆ ಈಗ ಅಂತಿಮವಾಗಿರುವ ಸಮೀಕ್ಷೆಯನ್ನು ಒಪ್ಪಲಾಗದು. ಮತ್ತೊಮ್ಮೆ ಸಮೀಕ್ಷೆ ಆಗಬೇಕು ಹೇಳಿದರು.

ಈಗ ಮತ್ತೊಮ್ಮೆ ಗಡಿ ಸಮೀಕ್ಷೆಗೆ ಸರ್ಕಾರ ಮುಂದಾಗಬೇಕು. ಗ್ರಾಮ ಗಡಿ, ತಾಲೂಕು ಗಡಿ ಗುರುತಿಸುವ ಮೂಲಕ ಕರ್ನಾಟಕ ಆಂಧ್ರದ ಗಡಿ ಗುರುತಿಸುವ ಕೆಲಸ ಆಗಬೇಕು. ಈ ಮೂಲಕ ನಾಡಿನ ನೆಲದ ರಕ್ಷಣೆ ಆಗಬೇಕು ಎಂದು ತಿಳಿಸಿದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯಿಸಿ, ಕರ್ನಾಟಕ- ಆಂಧ್ರ ಗಡಿ ಗುರುತಿಸುವ ಸಮೀಕ್ಷೆಗೆ ಸಂಬಂಧಿಸಿ ಈಗಾಗಲೇ ಸರ್ಕಾರದ ಗಮನಕ್ಕೆ ಇದ್ದು, ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಈಗಾಗಲೇ ನಾನು ಮೂರು ವಾರಗಳ ಹಿಂದೆಯೇ ಅಧಿಕಾರಿಗಳ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದು, ಈಗಿರುವ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಳ್ಳಲಾಗುವುದು ಎಂದರು.

ಸರ್ವೇ ಆಫ್ ಇಂಡಿಯಾದ ಜನರಲ್ ಅವರ ನೇತೃತ್ವದಲ್ಲಿ ಎರಡೂ ರಾಜ್ಯಗಳ ಅಧಿಕಾರಿಗಳ ಅಭಿಪ್ರಾಯ ಪಡೆದು, ಕರ್ನಾಟಕದ ಅಭಿಪ್ರಾಯದಂತೆಯೇ ಸರ್ವೇ ನಡೆದಿದೆ. ಹೀಗಿದ್ದಾಗ್ಯೂ ಈಗ ಆಗಿರುವ ಸರ್ವೇಯಲ್ಲಿನ ದೋಷಗಳನ್ನು ಪತ್ತೆ ಮಾಡಲು ತಜ್ಞರ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ, ಖರಗಪುರದ ಐಐಟಿಯ ತಜ್ಞರನ್ನು ಸಲಹೆಗಾರರನ್ನಾಗಿ ನೇಮಿಸಲು ತೀರ್ಮಾನಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು.

ರಾಜ್ಯದ ಗಡಿಗೆ ಅಂಟಿಕೊಂಡಂತೆ ಆಂಧ್ರಪ್ರದೇಶದಲ್ಲಿ ಗಣಿ ಗುತ್ತಿಗೆ ಪಡೆದಿರುವ ಕೆಲವರು ಈ ಹಿಂದೆ ರಾಜ್ಯದ ಗಡಿಯನ್ನು ಒತ್ತುವರಿ ಮಾಡಿ, ಅಕ್ರಮ ಗಣಿಗಾರಿಕೆ ನಡೆಸಿದ್ದರು. ಗಡಿ ಒತ್ತುವರಿ ಬಗ್ಗೆ ಹಾಗೂ ಗಡಿ ಗುರುತಿಸುವಂತೆ ಕೋರಿ 2009ರಲ್ಲಿ ಸುಪ್ರೀಂ ಕೋರ್ಟಿಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ಗಡಿ ಗುರುತಿಸಲು ಆದೇಶಿಸಿತ್ತು.