ಜಿಲ್ಲೆ

ಸ್ಥಗಿತಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪುನರಾರಂಭ: ಡಿಸಿಎಂ ಶಿವಕುಮಾರ್ ಹೇಳಿಕೆ

ಆರ್.ತುಳಸಿಕುಮಾರ್

ಬೆಂಗಳೂರು: ರಾಜಧಾನಿಯಲ್ಲಿ ಸ್ಥಗಿತಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪುನರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ, ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಸಂತನಗರದ ಅಯ್ಯಪ್ಪಸ್ವಾಮಿ ದೇವಾಸ್ಥಾನದ ಬದಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಜಯಮಹಲ್ ಪ್ಯಾಲೇಸ್ ರಸ್ತೆಯ ಅಗಲೀಕರಣ ಹಾಗೂ ಅಂಡರ್‌ಗ್ರೌಂಡ್ ಕೇಬಲ್ ಅಳವಡಿಕೆ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲಾಖೆಗಳಿಂದ ಅನುಮತಿ ಪಡೆದು ಸ್ಥಗಿತವಾಗಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿರುವುದಾಗಿ ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ನಡೆದಿವೆ. ಈ ರಸ್ತೆಯಲ್ಲಿ ಮುಂದೆ ಯಾರೂ ಕೂಡ ರಸ್ತೆಅಗೆತ ಮಾಡದೆ ಕೇಬಲ್ ಲೈನ್ ಅಳವಡಿಸಲು ಅವಕಾಶ ಕಲ್ಪಿಸಲಾಗಿದೆ. ಅವುಗಳನ್ನು ಯಾರೂ ಉಪಯೋಗಿಸುತ್ತಿಲ್ಲ. ನಾವು ಎಲ್ಲೆಲ್ಲಿ ಈ ವ್ಯವಸ್ಥೆ ಕಲ್ಪಿಸಿದ್ದೇವೋ, ಅಲ್ಲೆಲ್ಲ ಇದರ ಕಾನೂನುಬದ್ಧವಾಗಿ ಉಪಯೋಗಿಸಿಕೊಳ್ಳಬೇಕು. ನಗರದ ಅಂದ ಹೆಚ್ಚಿಸಲು ಕೇಬಲ್ಗಳನ್ನು ಅಂಡರ್ ಗ್ರೌಂಡ್‌ನಲ್ಲಿ ತೆಗೆದುಕೊಂಡು ಹೋಗುವುದು ಅತ್ಯಗತ್ಯ ಎಂದರು.

ಬಾಕಿ ಬಿಲ್ ಪಾವತಿಗೆ ಕ್ರಮ:

ನಗರದಲ್ಲಿ ಅಮೃತ್ ಯೋಜನೆಯಡಿ ಐದು ಸಾವಿರ ಕೋಟಿ ರೂ. ವೆಚ್ಚದ 352 ಪ್ಯಾಕೇಜ್ ಕಾಮಗಾರಿಗಳ ಪೂರ್ಣಗೊಳಿಸಲು ತಿಳಿಸಲಾಗಿದೆ. ವಿವಿಧ ಕಾಮಗಾರಿಗಳ ತನಿಖೆ ಮುಂದುವರಿದಿದ್ದು, ಇನ್ನಷ್ಟೇ ವರದಿ ಸಲ್ಲಿಕೆಯಾಗಬೇಕಿದೆ. 675 ಕೋಟಿ ರೂ. ಮೊತ್ತದ ಬಿಲ್ ಪಾವತಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಸುಮಾರು ಶೇ.50-75 ಬಿಲ್ ಪಾವತಿ ಮಾಡಲಾಗಿದೆ. 432 ಕೋಟಿ ರೂ. ಬಿಬಿಎಂಪಿ ಅನುದಾನ ಕೂಡ ಬಿಡುಗಡೆ ಮಾಡಲಿದ್ದು, ಉಳಿದ ಬಾಕಿ ಮೊತ್ತವನ್ನು ಶೀಘ್ರ ಪಾವತಿಸಲಾಗುವುದು ಎಂದು ತಿಳಿಸಿದರು.

ಎಸ್‌ಐಟಿ ತನಿಖೆ ಕುರಿತು ಕೇಳಲಾದದ ಪ್ರಶ್ನೆಗೆ, ತನಿಖೆ ನಡೆಯುತ್ತಿದೆ. ಪೂರ್ಣಗೊಂಡ ನಂತರ ಅದರ ವರದಿ ಸಲ್ಲಿಕೆಯಾಗಲಿದೆ. ಅದಕ್ಕಾಗಿ ನಾವು ಸ್ವಲ್ಪ ಪ್ರಮಾಣದ ಬಿಲ್ಗಳನ್ನು ಪಾವತಿ ಮಾಡುತ್ತಿದ್ದೇವೆ ಎಂದು ಡಿಸಿಎಂ ಶಿವಕುಮಾರ್ ಸಮಜಾಯಿಷಿ ನೀಡಿದರು.

ಈ ವೇಳೆ ಶಾಸಕ ರಿಜ್ವಾನ್ ಅರ್ಷದ್, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಇತರ ಹಿರಿಯ ಅಧಿಕಾರಿಗಳಿದ್ದರು.

7ರಂದು ವರ್ತುಲ ರಸ್ತೆಗೆ ಭೇಟಿ:

ಮಹಾನಗರದಲ್ಲಿ ಬೀಳುವ ಮಳೆ ನೀರು ರಸ್ತೆಯ ಮೇಲೆ ನಿಲ್ಲದೆ ಒಳಚರಂಡಿ ಮೂಲಕ ಹರಿದುಹೋಗಬೇಕು. ಅದಕ್ಕಾಗಿ ಈಗಾಗಲೇ ಅನುಮತಿ ನೀಡಿರುವ ಕಾಮಗಾರಿಗಳನ್ನು ಪುನರಾರಂಭಿಸಲಿದ್ದೇವೆ. ರಸ್ತೆಗುಂಡಿಗಳ ಬಗ್ಗೆ ಸಾರ್ವಜನಿಕರು ಅಧಿಕಾರಿಗಳಿಗೆ ಮಾಹಿತಿ ನೀಡಿದರೆ, ಕೂಡಲೇ ಅವುಗಳನ್ನು ಸರಿಪಡಿಸಲಾಗುವುದು. ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ರಸ್ತೆಗುಂಡಿಗಳನ್ನು ಗುರುತಿಸಲು ಚರ್ಚೆ ನಡೆದಿದೆ. ಆದ್ಯತೆ ಮೇರೆಗೆ ಈ ಕೆಲಸ ಮಾಡಬೇಕಾಗಿದೆ. ತಿಂಗಳು 7ರಂದು ವರ್ತುಲ ರಸ್ತೆಗೆ ಭೇಟಿ ನೀಡಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ತಿಳಿಸಿದರು.