ಜಿಲ್ಲೆ

ಮುಂಬೈ-ಹುಬ್ಬಳ್ಳಿ ಇಂಡಿಗೋ 6ಇ ವಿಮಾನ ಪುನರಾರಂಭ

ಹುಬ್ಬಳ್ಳಿ : ಮುಂಬೈ-ಹುಬ್ಬಳ್ಳಿ- ಮುಂಬೈ ಮಧ್ಯೆ ಇಂಡಿಗೋ 6ಇ ವಿಮಾನಯಾನ ಸೌಲಭ್ಯ ಜುಲೈ 15ರಿಂದ ಪುನಾರಂಭಗೊಳ್ಳಲಿದೆ.

ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರ ಮನವಿ ಮೇರೆಗೆ ಇಂಡಿಗೋ 6 ಇ ವಿಮಾನ ಸಂಚಾರವನ್ನು ಮತ್ತೆ ಪ್ರಾರಂಭಿಸಲು ನಾಗರಿಕ ವಿಮಾನಯಾನ ಸಚಿವಾಲಯ ನಿರ್ಧರಿಸಿದೆ.

ಇಂಡಿಗೋ 6 ಇ ನಿರ್ವಹಣೆಗೆ ಸಚಿವ ಪ್ರಲ್ಹಾದ ಜೋಶಿ ಅವರು ಈ ಹಿಂದೆ ನಾಗರಿಕ ವಿಮಾನಯಾನ ಸಚಿವಾಲಯದ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಸಚಿವಾಲಯ ಇದೀಗ ವಿಮಾನ ಸಂಚಾರ ಪುನರಾರಂಭಕ್ಕೆ ಕ್ರಮ ಕೈಗೊಂಡಿದೆ.

ಮುಂಬೈ-ಹುಬ್ಬಳ್ಳಿ-ಮುಂಬೈ ಮಧ್ಯೆ ಜುಲೈ 15 ರಿಂದ ದೈನಂದಿನ ವಿಮಾನಗಳು ನಿರಂತರವಾಗಿ ಕಾರ್ಯ ನಿರ್ವಹಿಸಲಿವೆ ಎಂದು ಸಚಿವ ಪ್ರಲ್ಹಾದ ಜೋಶಿ ಟ್ವಿಟರ್ ಮೂಲಕ ಈ ಅಗತ್ಯ ಮಾಹಿತಿ ಹಂಚಿಕೊಂಡಿದ್ದಾರೆ.

ಇಂಡಿಗೋ ವಿಮಾನ ಮಧ್ಯಾಹ್ನ 3 ಗಂಟೆಗೆ ಮುಂಬೈನಿಂದ ಹೊರಟು, ಸಂಜೆ 4.10ಕ್ಕೆ ಹುಬ್ಬಳ್ಳಿ ತಲುಪಲಿದೆ. ಸಂಜೆ 4.40ಕ್ಕೆ ಹುಬ್ಬಳ್ಳಿಯಿಂದ ನಿರ್ಗಮಿಸಿ, ಸಂಜೆ 5.50ಕ್ಕೆ ಮುಂಬೈ ತಲುಪಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ.

ತಮ್ಮ ಪ್ರಸ್ತಾವನೆ ಪುರಸ್ಕರಿಸಿ ಇಂಡಿಗೋ ವಿಮಾನ ಸಂಚಾರ ಪುನರಾರಂಭ ವ್ಯವಸ್ಥೆ ಕಲ್ಪಿಸಿದ ಭಾರತೀಯ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಚಿವ ಪ್ರಲ್ಹಾದ ಜೋಶಿ ಅವರು ಧನ್ಯವಾದ ಸಲ್ಲಿಸಿದ್ದಾರೆ.