ಹಾಸನ: ನಗರದಲ್ಲಿ ಕರೊನಾ ಸೇರಿ ಇತರ ಸಾಂಕ್ರಾಮಿಕ ಕಾಯಿಲೆ ಹರಡುವ ಆತಂಕ ಆವರಿಸಿರುವ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಬೀದಿಬದಿ ವ್ಯಾಪಾರವನ್ನು ನಿರ್ಬಂಧಿಸಿದ್ದಾರೆ.
ಮಾ.11 ರಿಂದ ಒಂದು ವಾರ ಬೀದಿ ಬದಿ ವ್ಯಾಪಾರ ಮಾಡದಂತೆ ಎಲ್ಲ ವ್ಯಾಪಾರಿಗಳಿಗೆ ಮಂಗಳವಾರ ಸೂಚನೆ ನೀಡಿದ್ದು, ಈ ವಿಚಾರದಲ್ಲಿ ನಿರ್ಲಕ್ಷೃ ವಹಿಸಿದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ. ಮಹಾಮಾರಿ ಕರೊನಾಗೆ ಭಯಪಟ್ಟಿರುವ ಬೀದಿ ಬದಿ ವ್ಯಾಪಾರಿಗಳು ಸಹ ಆರೋಗ್ಯ ಇಲಾಖೆ ಹಾಗೂ ನಗರಸಭೆಯ ನಿರ್ಧಾರವನ್ನು ಮುಕ್ತ ಕಂಠದಿಂದ ಸ್ವಾಗತಿಸಿದ್ದು ವಾರದ ಮಟ್ಟಿಗೆ ವ್ಯಾಪಾರ ವಹಿವಾಟನ್ನು ನಿಷೇಧಿಸಿದ್ದಾರೆ.
ಉಪಾಹಾರ, ಊಟ, ಹಣ್ಣಿನ ಹಾಗೂ ಐಸ್‌ಕ್ರೀಂ ಅಂಗಡಿಗಳಿಂದ ತುಂಬಿರುತ್ತಿದ್ದ ರಸ್ತೆಗಳು ಬುಧವಾರ ಬಿಕೋ ಎನ್ನುತ್ತಿದ್ದವು. ಆರ್‌ಸಿ ರಸ್ತೆ, ಸಹ್ಯಾದ್ರಿ ವೃತ್ತ, ಎಂ.ಜಿ.ರಸ್ತೆ, ಸಾಲಗಾಮೆ, ಡೇರಿ ವೃತ್ತ, ರೈಲ್ವೆ ನಿಲ್ದಾಣ, ಸಂತೆಪೇಟೆ, ಹೊಸ ಬಸ್ ನಿಲ್ದಾಣ ಹಾಗೂ ಇತರ ಮುಖ್ಯ ರಸ್ತೆಗಳಲ್ಲಿ ಬೀದಿ ಬದಿ ಅಂಗಡಿಗಳು ಸ್ಥಗಿತಗೊಂಡ್ದಿವು. ಅಂಗಡಿಗಳು ವ್ಯಾಪಾರ ಸ್ಥಗಿತಗೊಂಡಿರುವ ವಿಚಾರ ತಿಳಿಯದೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟಕ್ಕೆ ಬಂದು ಹೋಗುವವರ ಸಂಖ್ಯೆ ಹೆಚ್ಚಾಗಿತ್ತು. ಬೀದಿ ಬದಿ ಅಂಗಡಿಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ಜನದಟ್ಟಣೆ ಹೆಚ್ಚಾಗಿತ್ತು.
ನಗರಸಭೆಯಿಂದ ತೆರವು: ಮಂಗಳವಾರ ಸಂಜೆ 4 ಗಂಟೆಗೆ ಬೀದಿ ಬದಿ ವ್ಯಾಪಾರಿಗಳ ಹತ್ತಿರಕ್ಕೆ ತೆರಳಿದ್ದ ನಗರಸಭೆ ಅಧಿಕಾರಿಗಳು ಎಲರನ್ನೂ ಒಟ್ಟಿಗೆ ಸೇರಿಸಿ ಒಂದು ವಾರದವರೆಗೆ ತಮ್ಮ ವ್ಯಾಪಾರ ಸ್ಥಗಿತಗೊಳಿಸುವಂತೆ ಸೂಚಿಸಿದ್ದರು. ಕರೊನಾ ವೈರಸ್ ಹರಡುತ್ತಿರುವ ವ್ಯಾಪ್ತಿ ಹಾಗೂ ಅದರ ದುಷ್ಪರಿಣಾಮ ಕುರಿತು ವ್ಯಾಪಾರಿಗಳಲ್ಲಿ ಅರಿವು ಮೂಡಿಸಿದ್ದರು. ಜನರು ಗುಂಪು ಗುಂಪಾಗಿ ನಿಲ್ಲುವುದರಿಂದ ಸಾಂಕ್ರಾಮಿಕ ರೋಗ ಬಹುಬೇಗನೆ ಹರಡುವ ಸಾಧ್ಯತೆ ಹೆಚ್ಚಿದೆ. ರಸ್ತೆ ಧೂಳು, ಅಶುಚಿತ್ವ, ಕುಡಿಯುವ ನೀರಿನಲ್ಲಿ ವ್ಯತ್ಯಾಸವಾಗುವುದರಿಂದ ಕಾಯಿಲೆ ಅಂಟಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಆರೋಗ್ಯ ಇಲಾಖೆಯ ಕಾಳಜಿಗೆ ಸಾರ್ವಜನಿಕರೂ ಸಹಕರಿಸಬೇಕೆಂದು ನಗರಸಭೆ ಆಯುಕ್ತ ಆರ್. ಕೃಷ್ಣಮೂರ್ತಿ ಮನವಿ ಮಾಡಿದ್ದರು.
ಹೀಗಿದ್ದರೂ ನಗರದ ಕೆಲವೆಡೆ ಬೀದಿ ಬದಿ ವ್ಯಾಪಾರಿಗಳು ಎಂದಿನಂತೆ ಅಂಗಡಿ ತೆರೆಯಲು ಮುಂದಾದ್ದರಿಂದ ಸಿಬ್ಬಂದಿ ಒತ್ತಾಯದಿಂದ ಬಾಗಿಲು ಹಾಕಿಸಬೇಕಾಯಿತು.
ಕರೊನಾ ಶಂಕೆ, ತಪಾಸಣೆ: ನಿರಂತರ ಕೆಮ್ಮು ಹಾಗೂ ಶೀತದಿಂದ ಬಳಲುತ್ತಿದ್ದ ಬೇಲೂರು ತಾಲೂಕಿನ ಅರೇಹಳ್ಳಿ ಮೂಲದ ಯುವಕನಿಗೆ ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಯಿತು. ಹದಿನೈದು ದಿನಗಳ ಹಿಂದೆ ದುಬೈನಿಂದ ಆಗಮಿಸಿದ್ದ 28 ವರ್ಷದ ಯುವಕನ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಆತ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾನೆ.