ಮಂಗಳೂರು: ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಹಾಗೂ ಮುಂದಿನ ದಿನಗಳಲ್ಲಿ ಸಾಮರಸ್ಯದ ಗತ ವೈಭವವನ್ನು ಪುನರ್ ಸ್ಥಾಪನೆ ಮಾಡುವ ಸಂಕಲ್ಪವನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಿದ್ದಾರೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಜನರು ಕಾಂಗ್ರೆಸ್‌ಗೆ ಮತದಾನ ಮಾಡುವ ಮೂಲಕ ಆಶೀರ್ವಾದ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಬಡ ಜನರ ಮನೆ ಬೆಳಗಲು ಸಹಕಾರಿಯಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಆಡಳಿತ ಹಾಗೂ ಬಿಜೆಪಿ ಆಡಳಿತದ ಅವಧಿಯಲ್ಲಿ ಮಾಡಿದ್ದ ಅಭಿವೃದ್ಧಿಯನ್ನು ತುಲನೆ ಮಾಡಿ ಜನರ ಎದುರು ಇಡಲಾಗಿದೆ ಎಂದರು.
ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪಕ್ಷದ ಪರವಾಗಿ ಕುಟುಂಬದಂತೆ ಕೆಲಸ ಮಾಡಿದ್ದಾರೆ. ಕಾರ್ಯಕರ್ತರು ವಿಶೇಷ ರೀತಿಯಲ್ಲಿ ಮತದಾರರ ಮನವೊಲಿಸಿದ್ದಾರೆ. ಕಾಂಗ್ರೆಸ್‌ನ ಸಾಧನೆ, ಅಭಿವೃದ್ಧಿ, ಗ್ಯಾರಂಟಿ ಜತೆಗೆ ಪ್ರೀತಿ ಹಂಚುವ ಕೆಲಸ ಮಾಡಿದ್ದಾರೆ. ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಭೇಟಿ ಮಾಡಿದಾಗ ಜನರಲ್ಲಿ ಉತ್ಸಾಹ ಕಂಡು ಬಂದಿದೆ. ವಿರೋಧ ಪಕ್ಷದವರ ಅಪಪ್ರಚಾರಕ್ಕೆ ಜನ ಕಿವಿಗೊಟ್ಟಿಲ್ಲ ಎಂದವರು ಹೇಳಿದರು.
ಬಿಜೆಪಿಯವರು ಮತದಾನದ ವೇಳೆ ಹತಾಶೆಯಿಂದ ಕೆಲವು ಕಡೆ ಸಂಘರ್ಷ ಉಂಟು ಮಾಡಲು ಯತ್ನಿಸಿದರು. ಆದರೆ ಫಲಪ್ರದವಾಗಿಲ್ಲ. ಚುನಾವಣೆಯಲ್ಲಿ ಸೋಲು-ಗೆಲುವು ನಿಶ್ಚಿತ. ನಾವು ಎಲ್ಲಿಯೂ, ಯಾರನ್ನೂ ದ್ವೇಷ ಮಾಡಿಲ್ಲ. ಶಾಂತಿ ಕದಡಿದರೆ ಬಡವರ ಮಕ್ಕಳು ಕೇಸ್ ಆಗಿ ಜೈಲು ಸೇರಿದರೆ ಅದನ್ನು ಅನುಭವಿಸುವುದು ಅವರ ಕುಟುಂಬದವರು. ಈ ಹಿಂದೆ ನಡೆದ ಇಂತಹ ಘಟನೆಗಳು ಮರುಕಳಿಸದಂತೆ ಮಾಡುವುದೇ ನಮ್ಮ ಉದ್ದೇಶ ಎಂದರು.
1.20 ಲಕ್ಷ ಮತಗಳಿಂದ ಗೆಲುವು
ಈ ಬಾರಿಯ ಚುನಾವಣೆ ನಿಜವಾದ ಪ್ರಜಾಪ್ರಭುತ್ವದ ಹಬ್ಬದ ವಾತಾವರಣ ಕಂಡು ಬಂತು. ಸುಮಾರು 1.20 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸುವುದು ನಿಶ್ಚಿತ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಪ್ರತೀ ಬ್ಲಾಕ್‌ಗಳಲ್ಲಿ ಸಭೆ ನಡೆಸಲಾಗುವುದು. ಕಾಂಗ್ರೆಸ್ ಸೇರ್ಪಡೆಗೆ ಆದ್ಯತೆ ನೀಡಲಾಗುವುದು ಎಂದು ಪದ್ಮರಾಜ್ ಹೇಳಿದರು.
ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಮುಖಂಡರಾದ ಶುಭೋದಯ ಆಳ್ವ, ಮೊಹಮ್ಮದ್ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ಹಾಗೂ ಯಶಸ್ವಿಯಾಗಿ ಮತದಾನವಾಗಿದೆ. ಇದಕ್ಕೆ ಶ್ರಮಿಸಿದ ಜಿಲ್ಲಾಡಳಿತ, ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಮತದಾರರಿಗೆ ಕೃತಜ್ಞತೆ. ನಿಜವಾದ ರೀತಿಯಲ್ಲಿ ಪ್ರಜಾಪ್ರಭುತ್ವದ ಹಬ್ಬ ನಡೆದಿದೆ.
ಪದ್ಮರಾಜ್ ಆರ್.ಪೂಜಾರಿ
ಕಾಂಗ್ರೆಸ್ ಅಭ್ಯರ್ಥಿ