ನುಗ್ಗೇಹಳ್ಳಿ: ಚನ್ನರಾಯಪಟ್ಟಣದ ಮೇಘಲಕೇರಿಯಲ್ಲಿ ಶಿಥಿಲಗೊಂಡಿರುವ ಪುರಾಣ ಪ್ರಸಿದ್ಧ ಶ್ರೀ ಕಾಡುಬಸವೇಶ್ವರಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇಗುಲಗಳು ಜೀರ್ಣೋದ್ಧಾರಗೊಳಿಸಿದರೆ ಕ್ಷೇತ್ರದ ಶಕ್ತಿ ಹೆಚ್ಚಾಗುತ್ತದೆ ಎಂದು ನೊಣವಿನಕೆರೆ ಸೋಮನಕಟ್ಟೆ ಕಾಡುಸಿದ್ದೇಶ್ವರ ಮಠದ ಶ್ರೀಕರಿ ವೃಷಭ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ಸಮೀಪದ ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಶ್ರೀ ಕಾಡುಬಸವೇಶ್ವರ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿ ದೇಗುಲಗಳು ಪಟ್ಟಣದ ಮಧ್ಯಭಾಗದಲ್ಲಿವೆ. ಶಿಥಿಲಾವಸ್ಥೆಯಲ್ಲಿರುವ ಕಾರಣ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗುತ್ತಿದೆ. ಭಕ್ತರು ಸಹಕಾರ ನೀಡಿ ಜೀರ್ಣೋದ್ಧಾರಗೊಳಿಸಿದರೆ ಈ ಎರಡು ಮೂಲ ದೇವರುಗಳ ಶಕ್ತಿ ಹೆಚ್ಚಾಗಿ ಭಕ್ತರ ಸಂಖ್ಯೆಯು ಮುಂದಿನ ದಿನಗಳಲ್ಲಿ ಹೆಚ್ಚಾಗುತ್ತದೆ. ಇದರಿಂದ ಈ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ ಎಂದರು. ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಮೇಘಲಕೇರಿಯ ಎಲ್ಲ ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿ, ಅವರಿಂದಲೂ ಜೀರ್ಣೋದ್ಧಾರಕ್ಕೆ ನೆರವು ಸಹಕಾರ ಕೇಳಲು ಸಭೆ ನಡೆಸುತ್ತೇನೆ ಎಂದರು.
ಕಾಡುಬಸವೇಶ್ವರ ಸ್ವಾಮಿ ಶ್ರೀ ಆಂಜನೇಯಸ್ವಾಮಿ ಎರಡು ದೇವಾಲಯಗಳ ಜೀರ್ಣೋದ್ಧಾರಕ್ಕೆ ಸರ್ಕಾರ ಹಾಗೂ ಭಕ್ತಾದಿಗಳಿಂದ ಹೆಚ್ಚಿನ ಸಹಕಾರ ಕೊಡಿಸುವ ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೇ ಎನ್.ಪರಮೇಶ್, ಉದ್ಯಮಿ ಪ್ರಭುಸ್ವಾಮಿ, ಮುಖಂಡರಾದ ತೋಟಿ ನಾಗರಾಜ್, ಎನ್.ಆರ್.ಕೃಪಾ ಶಂಕರ್, ಮಾವಿನಹಳ್ಳಿ ಸುರೇಶ್, ಬಿ.ಸಿ.ಚೆನ್ನೇಗೌಡ, ಸಂತೆ ಶಿವರ ಚಿರಂಜೀವಿ, ಶಿವಸ್ವಾಮಿ, ಟಿ.ಎಂ.ಗಿರೀಶ್, ರುದ್ರಸ್ವಾಮಿ, ಕುಮಾರಸ್ವಾಮಿ, ನಾರಾಯಣಗೌಡ, ರೆಚಿಹಳ್ಳಿ ದಯಾನಂದ್, ಅಂಗಡಿ ಪ್ರದೀಪ್, ತಾವರೆಕೆರೆ ಮಂಜು, ಇತರರು ಇದ್ದರು.