ಹಸಲರು ಸಮುದಾಯಕ್ಕೆ ಪೌಷ್ಟಿಕ ಆಹಾರ ಕಿಟ್ ಮರು ಆರಂಭಿಸುವಂತೆ ಒತ್ತಾಯಿಸಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಒಕ್ಕೂಟದ ಪದಾಧಿಕಾರಿಗಳು ಸಾಗರದಲ್ಲಿ ಪ್ರತಿಭಟನೆ ನಡೆಸಿದರು. ರಾಮಣ್ಣ, ಶಿವಾನಂದ ಕುಗ್ವೆ, ಲಕ್ಷ್ಮಮ್ಮ, ಮಂಜುಳಾ ಇತರರಿದ್ದರು. 
ಜಿಲ್ಲೆ

ಪೌಷ್ಟಿಕ ಆಹಾರ ಕಿಟ್ ಯೋಜನೆ ಮರು ಆರಂಭಿಸಿ

Shivamogga - Desk - Vinayakumar D B

ಸಾಗರ: ಬುಡಕಟ್ಟು ಹಸಲರು ಸಮುದಾಯಕ್ಕೆ ನೀಡುತ್ತಿದ್ದ ಪೌಷ್ಟಿಕ ಆಹಾರ ವಿತರಣೆ ಯೋಜನೆಯನ್ನು ಮರು ಪ್ರಾರಂಭಿಸುವಂತೆ ಒತ್ತಾಯಿಸಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿ, ನಗರದ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರ ನೀಡುತ್ತಿದ್ದ ಪೌಷ್ಟಿಕ ಆಹಾರದ ಕಿಟ್ ವಿತರಣೆಯನ್ನು ಜೂನ್‌ನಿಂದ ನಿಲ್ಲಿಸಲಾಗಿದೆ. ಹಸಲರು ಸಮುದಾಯಕ್ಕೆ ಜೂನ್‌ನಿಂದ ಡಿಸೆಂಬರ್ ತಿಂಗಳವರೆಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಗುತಿತ್ತು. ಕೇಂದ್ರ ಸರ್ಕಾರ ವರ್ಷಪೂರ್ತಿ ಸಮುದಾಯಕ್ಕೆ ಆಹಾರ ಕಿಟ್ ನೀಡಬೇಕು ಎಂದು ಆದೇಶ ಮಾಡಿದೆ. ಆದರೆ ರಾಜ್ಯ ಸರ್ಕಾರ ಜೂನ್‌ನಿಂದ ಸಂಪೂರ್ಣವಾಗಿ ಕಿಟ್ ಕೊಡುವುದನ್ನೇ ನಿಲ್ಲಿಸಿಬಿಟ್ಟಿದೆ. 10 ಕೆ.ಜಿ ಕೊಡುತ್ತಿದ್ದ ಅಕ್ಕಿಯನ್ನು 5 ಕೆ.ಜಿಗೆ ಇಳಿಸಿ ಅನ್ಯಾಯ ಮಾಡಿದೆ. ಕೇಂದ್ರ ಸರ್ಕಾರದ ಆದೇಶದಂತೆ ಎಲ್ಲ ಧಾನ್ಯಗಳನ್ನು ನೀಡಬೇಕು. ಜತೆಗೆ ಆರು ತಿಂಗಳ ಬದಲು ವಿರ್ಷವಿಡೀ ನೀಡಬೇಕು ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ರಾಮಣ್ಣ ಹಸಲರು ಒತ್ತಾಯಿಸಿದರು.
ಅರಣ್ಯಮೂಲ ಬುಡಕಟ್ಟು ವಾಸಿಗಳಿಗೆ ಅರಣ್ಯಹಕ್ಕು ಕಾಯ್ದೆಯಡಿ ಹೆಚ್ಚಿನ ಭೂಮಿ ಮಂಜೂರು ಮಾಡುವಂತೆ ಒತ್ತಾಯಿಸಿ ಗಾಂಧಿ ಜಯಂತಿ(ಅ.2)ಯಂದು ಸಾಗರದಿಂದ ಶಿವಮೊಗ್ಗಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ಹಸಲರು ಸಮುದಾಯಕ್ಕೆ ನೀಡಿರುವ ಆಹಾರದ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಬಾರದು. ಪೌಷ್ಟಿಕ ಆಹಾರಕ್ಕಾಗಿ ಒಕ್ಕೂಟ ನಿರಂತರ ಹೋರಾಟ ಮಾಡುತ್ತಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ವಾಸಿಸುವ 12 ಬುಡಕಟ್ಟು ಸಮುದಾಯದ ಹೋರಾಟದಿಂದ ಆಹಾರ ಕಿಟ್ ಅನ್ನು ಸರ್ಕಾರ ನೀಡಿತ್ತು. ಇದೀಗ ಅದನ್ನು ನಿಲ್ಲಿಸಿರುವ ಕ್ರಮ ಖಂಡನೀಯ. ಎಂದಿನಂತೆ ಆಹಾರ ಕಿಟ್ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಪ್ರಮುಖರಾದ ಲಕ್ಷ್ಮಮ್ಮ, ಮಂಜುಳಾ, ಶೋಭಾ, ಕಮಲಾಕ್ಷಿ, ಈಶ್ವರ, ಕೃಷ್ಣಮೂರ್ತಿ, ನಾಗರತ್ನ, ರವೀಂದ್ರ, ಎಂ.ಸಿ.ಸುಂದರಪ್ಪ, ಈಶ್ವರ, ನಾರಾಯಣಪ್ಪ, ಗೌರಿ, ಗಂಗಾಧರ, ಎಂ.ಬಿ.ಮಂಜಪ್ಪ, ಸೋಮಾವತಿ, ಸುಂದರಪ್ಪ ಇತರರಿದ್ದರು.