ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ನಲ್ಲಿ 2021ರಲ್ಲಿ ಸ್ಥಗಿತಗೊಂಡಿದ್ದ ರೇಡಿಯೋಥೆರಪಿ(ವಿಕಿರಣ ಚಿಕಿತ್ಸೆ) ಮತ್ತೆ ಪುನಾರಂಭಗೊಂಡಿದೆ. ಬಹುಮುಖ್ಯವಾಗಿ ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗಲಿದೆ.
ವಿವಿಧ ಕಾರಣಕ್ಕೆ ಕ್ಯಾನ್ಸರ್ ಕೇಂದ್ರದ ಚಟುವಟಿಕೆ ನಿಲ್ಲಿಸಲಾಗಿತ್ತು. ಪರಿಣಾಮ ರೋಗಿಗಳು ಬೆಂಗಳೂರು ಮತ್ತು ಮೈಸೂರಿಗೆ ಅಲೆದಾಡಬೇಕಿತ್ತು. ಮಾತ್ರವಲ್ಲದೆ ಇದರಿಂದ ಆರ್ಥಿಕ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಮತ್ತೆ ಕೇಂದ್ರ ಪ್ರಾರಂಭಿಸುವಂತೆ ಒತ್ತಾಯ ಕೇಳಿಬರುತ್ತಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ರವಿಕುಮಾರ್ ಗಣಿಗ ಅವರ ಮಾರ್ಗದರ್ಶನ ಹಾಗೂ ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಪ್ರಯತ್ನದ ಫಲವಾಗಿ ವಿಕಿರಣ ಚಿಕಿತ್ಸೆಯನ್ನು ನೀಡುವ ಪ್ರಕ್ರಿಯೆಗೆ ಮರುಚಾಲನೆ ಸಿಕ್ಕಿದೆ.
ಕ್ಯಾನ್ಸರ್ ರೋಗಿಗಳಿಗೆ ವಿವಿಧ ಹಂತದಲ್ಲಿ ರೇಡಿಯೋಥೆರಪಿ ನೀಡಲಾಗುತ್ತದೆ. ಆದರೆ ಮಿಮ್ಸ್‌ನಲ್ಲಿ ಈ ಚಿಕಿತ್ಸೆ ನೀಡಲು ತಜ್ಞರ ಕೊರತೆ ಇತ್ತು. ಇದರಿಂದಾಗಿ ರೆಡಿಯೋಥೆರಪಿ ನೀಡುವ ಕೋಬಾಲ್ಟ್ ಕೇಂದ್ರ ಸ್ಥಗಿತವಾಗಿತ್ತು. ವಿಕಿರಣ ಚಿಕಿತ್ಸೆ ಮತ್ತೆ ಆರಂಭಿಸಬೇಕೆಂಬ ದೃಢ ನಿರ್ಧಾರದೊಂದಿಗೆ ಆಟಾಮಿಕ್ ಎನರ್ಜಿ ರೆಗ್ಯುಲೇಟರಿ ಬೋರ್ಡ್(ಎಇಆರ್‌ಬಿ) ಅನುಮತಿ ಪಡೆದುಕೊಂಡು ಹೆಚ್ಚುವರಿ ವೇತನ ಪಾವತಿಸಿ ಹೊರಗುತ್ತಿಗೆ ಆಧಾರದ ಮೇಲೆ ರೇಡಿಯೇಶನ್ ಆಂಕೋಲಜಿಸ್ಟ್, ಮಹಾರಾಷ್ಟ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರೇಡಿಯೇಶನ್ ಸೇಫ್ಟಿ ಆಫೀಸರ್ ಹಾಗೂ ಇಬ್ಬರು ತಾಂತ್ರಿಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಯಿತು. ನಂತರ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಯಂತ್ರಗಳನ್ನು ಪರಿಶೀಲಿಸಿ ಚಿಕಿತ್ಸೆ ಪ್ರಾರಂಭ ಮಾಡಲಾಗಿದೆ.
ಕಳೆದ ಐದಾರೂ ದಿನದಿಂದ ಚಿಕಿತ್ಸೆ ನಡೆಯುತ್ತಿದ್ದು, ದಿನಕ್ಕೆ ಆರದಿಂದ ಏಳು ಜನರು ಬಂದು ರೇಡಿಯೋಥೆರಪಿ ಮಾಡಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನದಲ್ಲಿ ಈ ಸಂಖ್ಯೆ ಹೆಚ್ಚಾಗಲಿದೆ. ಹಿಂದೆ ಪ್ರತಿದಿನ ಸುಮಾರು 40 ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಬುಧವಾರ ಕೋಬಾಲ್ಟ್ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ರವಿಕುಮಾರ್ ಗಣಿಗ ಪರಿಶೀಲನೆ ನಡೆಸಿ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಅಂತೆಯೇ ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯಶಸ್ವಿಯಾಗಿ ನಿರ್ವಹಣೆ ಮಾಡುವಂತೆ ಸಲಹೆ ನೀಡಿದರು.
ರೇಡಿಯೋಥೆರಪಿ ಪ್ರಾರಂಭವಾಗಿರುವುದರಿಂದ ಕ್ಯಾನ್ಸರ್ ಕೇಂದ್ರವೂ ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ. ಇದಕ್ಕೆ ಪೂರಕ ಎನ್ನುವಂತೆ ಕಾಮಗಾರಿ ಅಂತಿಮ ಹಂತದಲ್ಲಿದೆ. ಇದಾದ ಬಳಿಕ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಾಗುವುದು. ಸಂಕ್ರಾಂತಿ ವೇಳೆಗೆ ಕ್ಯಾನ್ಸರ್ ಕೇಂದ್ರ ಪ್ರಾರಂಭಿಸಲಾಗುವುದು ಎಂದು ರವಿಕುಮಾರ್ ಗಣಿಗ ಹೇಳಿದರು.
16 ಕೋಟಿ ರೂ ವೆಚ್ಚದಲ್ಲಿ ಕ್ರಿಟಿಕಲ್ ಸೆಂಟರ್
ವಿವಿಧ ಕಾರಣಕ್ಕೆ ಅಪಾಯದ ಸ್ಥಿತಿಯಲ್ಲಿರುವ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡುವ ನಿಟ್ಟಿನಲ್ಲಿ 16 ಕೋಟಿ ರೂ ವೆಚ್ಚದಲ್ಲಿ ಮಿಮ್ಸ್‌ನಲ್ಲಿ ಕ್ರಿಟಿಕಲ್ ಕೇರ್ ಸೆಂಟರ್ ಪ್ರಾರಂಭಿಸಲಾಗುತ್ತಿದೆ. ಈ ಕಾಮಗಾರಿಗೆ ಶಾಸಕ ರವಿಕುಮಾರ್ ಗಣಿಗ ಭೂಮಿ ಪೂಜೆ ನೆರವೇರಿಸಿದರು.
ಇದು 50 ಹಾಸಿಗೆಯುಳ್ಳ ಕೇಂದ್ರವಾಗಿದ್ದು, ತೀವ್ರ ನಿಗಾ ವಹಿಸಬೇಕಾದ ರೋಗಿಗಳನ್ನು ಮೊದಲು ಇಲ್ಲಿಗೆ ದಾಖಲು ಮಾಡಿ ಚಿಕಿತ್ಸೆ ಕೊಡಲಾಗುತ್ತದೆ. ನವೆಂಬರ್ ಅಂತ್ಯಕ್ಕೆ ಈ ಕಾಮಗಾರಿ ಪೂರ್ಣಗೊಳ್ಳಬೇಕೆನ್ನುವುದಿದೆ. ಕಟ್ಟಡ ನಿರ್ಮಾಣ ಕೆಲಸ ಮುಗಿದ ಬಳಿಕ ಯಂತ್ರೋಪಕರಣ ಹಾಗೂ ವೈದ್ಯರು, ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಮಿಮ್ಸ್‌ಗೆ ಮಂಡ್ಯ ಮಾತ್ರವಲ್ಲದೆ ರಾಮನಗರ, ತುಮಕೂರು ಜಿಲ್ಲೆಯ ಕೆಲ ಭಾಗದಿಂದ ರೋಗಿಗಳಿಗೆ ಬರುತ್ತಿದ್ದಾರೆ. ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಮಿಮ್ಸ್‌ನಲ್ಲಿ 800 ಹಾಸಿಗೆಯಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ಆದರೆ 1,200 ಹಾಸಿಗೆಯಲ್ಲಿ ಚಿಕಿತ್ಸೆ ನೀಡಲು ಸೌಲಭ್ಯ ಬೇಕಿದೆ. ಈ ಹಿನ್ನೆಲೆಯಲ್ಲಿ ಮಿಮ್ಸ್‌ನ ಉನ್ನತೀಕರಣ ಮಾಡಬೇಕಿದ್ದು, ಈ ಸಂಬಂಧ ಇತ್ತೀಚೆಗೆ ಸಚಿವರೊಂದಿಗೆ ಸಭೆ ಮಾಡಿ ಚರ್ಚಿಸಲಾಗಿದೆ. ಕ್ರಿಟಿಕಲ್ ಕೇರ್ ಸೆಂಟರ್‌ಗೆ 16 ಕೋಟಿ ರೂ ನೀಡಲಾಗಿದೆ. ಇದಲ್ಲದೆ 8 ಕೋಟಿ ರೂ ವೆಚ್ಚದಲ್ಲಿ ಇನ್ನಷ್ಟು ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು.
ವೈದ್ಯಕೀಯ ಕಾಲೇಜನ್ನೇ ಜಿಲ್ಲಾಸ್ಪತ್ರೆಯನ್ನಾಗಿ ಮಾಡಿಕೊಳ್ಳಲಾಗಿದೆ. ಮಿಮ್ಸ್‌ಗೆ ಸೇರಿದ ಜಾಗದಲ್ಲಿ ತಮಿಳು ಕಾಲನಿ ನಿವಾಸಿಗಳು ವಾಸ ಮಾಡುತ್ತಿದ್ದಾರೆ. ಆ ಜಾಗವನ್ನು ಬಿಟ್ಟುಕೊಡಬೇಕೆಂದು ಸಂಘಟನೆಗಳು ಹೋರಾಟ ಮಾಡುತ್ತಿವೆ. ತಮಿಳು ಕಾಲನಿ ನಿವಾಸಿಗಳಿಗೆಂದು 600 ಮನೆ ನಿರ್ಮಾಣ ಮಾಡಲಾಗಿದೆ. ಆದರೆ ಅವರು ಅಲ್ಲಿಗೆ ಹೋಗಲು ಸಿದ್ಧವಿಲ್ಲ. ಬದಲಿಗೆ ಬೇರೆ ನಿವೇಶನ ನೀಡಬೇಕೆಂದು ಕೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ನ್ಯಾಯಾಲಯಕ್ಕೆ ಅಫಿಡೇವಿಟ್ ಸಲ್ಲಿಸಿದ್ದು, ಅಲ್ಲಿಯೇ ತೀರ್ಮಾನವಾಗಲಿದೆ. ಎಷ್ಟೇ ದಿನವಾದರೂ ಒತ್ತುವರಿ ಜಾಗವನ್ನು ಬಿಟ್ಟುಕೊಡಲೇಬೇಕು. ನ್ಯಾಯಾಲಯದಲ್ಲಿ ಯಾವುದೇ ತೀರ್ಮಾನವಾದರೂ ಎಲ್ಲರೂ ಅದಕ್ಕೆ ಬದ್ಧವಾಗಿರಬೇಕು. ತಮಿಳು ಕಾಲನಿ ನಿವಾಸಿಗಳ ಬೇಡಿಕೆಗೆ ಸ್ಪಂದಿಸಲಾಗುವುದು. ಅವರಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಮಾತನಾಡಿ, ಕ್ರಿಟಿಕಲ್ ಕೇರ್ ಸೆಂಟರ್ ಮಹತ್ವದ ಯೋಜನೆ. ಇದರಿಂದ ರೋಗಿಗಳಿಗೆ ಅನುಕೂಲವಾಗಲಿದೆ. ಮಿಮ್ಸ್‌ನಲ್ಲಿ ಸಾರ್ವಜನಿಕರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಶಾಸಕ ರವಿಕುಮಾರ್ ಗಣಿಗ ಬೆಂಬಲವಾಗಿ ನಿಂತಿದ್ದಾರೆ ಎಂದರು.
ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ಮುಡಾ ನಿರ್ದೇಶಕ ಕೃಷ್ಣ, ನಗರಸಭೆ ಸದಸ್ಯ ಶ್ರೀಧರ್, ನಾಮ ನಿರ್ದೇಶಿತ ಸದಸ್ಯ ಹರೀಶ್, ಕಾಂಗ್ರೆಸ್ ಮುಖಂಡರಾದ ಅಭಿಲಾಷ್, ಅರುಣ್, ಪ್ರದೀಪ್ ಇತರರಿದ್ದರು.