ಜಿಲ್ಲೆ

ಆರೈಕೆದಾರರಿಗೆ ನೆಮ್ಮದಿ ತಂದ ‘ಆರೋಗ್ಯಧಾಮ’: ಮಿಮ್ಸ್‌ನಲ್ಲಿ ವಿಶ್ರಾಂತಿ ಕೊಠಡಿ ನಿರ್ಮಾಣ

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳನ್ನು ಆರೈಕೆ ಮಾಡಲು ಜತೆಗೆ ಬರುವ ಸಂಬಂಧಿಕರು ಎದುರಿಸುತ್ತಿದ್ದ ದೊಡ್ಡ ಸಮಸ್ಯೆಗೆ ‘ಆರೋಗ್ಯ ಧಾಮ’ ಪರಿಹಾರ ನೀಡಲಿದೆ.

ಮಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯಲು ಪ್ರತಿನಿತ್ಯ ಸಾವಿರಾರೂ ರೋಗಿಗಳು ಬರುತ್ತಾರೆ. ಇವರನ್ನು ಆರೈಕೆ ಮಾಡಲು ಸಂಬಂಧಿಕರು ಬರುತ್ತಾರೆ. ಈ ರೀತಿ ಬರುವ ಆರೈಕೆದಾರರು ರಾತ್ರಿ ಹೊತ್ತು ತಂಗಲು ಅನಾನೂಕೂಲವಾಗಿತ್ತು. ಅದರಲ್ಲಿಯೂ ಮಹಿಳೆಯರ ಪರಿಸ್ಥಿತಿ ಹೇಳತೀರದಂತಾಗುತ್ತಿತ್ತು. ಇದೀಗ ಈ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಜಿಲ್ಲಾಧಿಕಾರಿ ಡಾ.ಕುಮಾರ ಅವರ ದೂರದೃಷ್ಟಿ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲೆಂದು ‘ಆರೋಗ್ಯ ಧಾಮ’ ನಿರ್ಮಿಸಲಾಗಿದೆ.

ಮಿಮ್ಸ್ ಆಸ್ಪತ್ರೆ ಆವರಣದ ಹೆರಿಗೆ ವಾರ್ಡ್ ಮುಂಭಾಗ 34*56 ಚದರ ಅಡಿಯ ದೊಡ್ಡ ವಿಶ್ರಾಂತಿ ಕೊಠಡಿ ನಿರ್ಮಾಣ ಮಾಡಲಾಗಿದೆ. ಈ ಕೊಠಡಿಯಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗಿದೆ. ವಿದ್ಯುತ್ ದೀಪ, ್ಯಾನ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಇರಲಿದೆ. ಈ ಕೊಠಡಿಯ ಸಮೀಪದಲ್ಲಿಯೇ ಹೈಟೆಕ್ ಶೌಚಗೃಹ ನಿರ್ಮಿಸಲಾಗಿದೆ.

ಆವರಣದಲ್ಲೇ ಆರೈಕೆದಾರರ ವಾಸ: ರೋಗಿಗಳನ್ನು ನೋಡಿಕೊಳ್ಳಲೆಂದು ಬರುತ್ತಿದ್ದವರು ರಾತ್ರಿ ಹೊತ್ತು ತಂಗಲು ಸ್ಥಳಾವಕಾಶದ ಸಮಸ್ಯೆ ಇತ್ತು. ಈ ಹಿನ್ನೆಲೆಯಲ್ಲಿ ವಿಧಿಯಿಲ್ಲದೇ ಮಿಮ್ಸ್ ಆವರಣ, ಕಟ್ಟಡದ ಕೆಳಗೆ, ಹೊರಾಂಗಣ, ರಸ್ತೆ ಬದಿ ಮಾತ್ರವಲ್ಲದೆ ಎಲ್ಲೆಂದರಲ್ಲಿ ಇರಬೇಕಿತ್ತು. ಇದು ಮಹಿಳೆಯರ ಪಾಲಿಗೆ ದೊಡ್ಡ ಸವಾಲಾಗಿತ್ತು. ಒಂದೆಡೆ ಹಾವು, ಚೇಳಿನ ಭಯವಾದರೆ, ಮತ್ತೊಂದೆಡೆ ಕಳ್ಳರ ಆತಂಕವಿರುತ್ತಿತ್ತು. ಕೆಲ ತಿಂಗಳ ಹಿಂದೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ರಾತ್ರಿ ವೇಳೆ ಮಿಮ್ಸ್‌ಗೆ ಭೇಟಿ ನೀಡಿದಾಗ ಆರೈಕೆದಾರರ ಅದರಲ್ಲಿಯೂ ಮಹಿಳೆಯರ ಕಷ್ಟವನ್ನು ನೋಡಿದ್ದರು. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕೆನ್ನುವ ಉದ್ದೇಶದಿಂದ ರೂಪಿಸಿದ ಯೋಜನೆ ಆರೋಗ್ಯಧಾಮ.

ಈ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಲಾಯಿತು. ಜಿಲ್ಲಾಧಿಕಾರಿ ಡಾ.ಕುಮಾರ ಅವರ ಆದೇಶದಂತೆ ನಿರ್ಮಿತಿ ಕೇಂದ್ರದವರು 35 ಲಕ್ಷ ರೂ ವೆಚ್ಚದ ಕ್ರಿಯಾಯೋಜನೆ ಸಿದ್ದಪಡಿಸಿದರು. ಅದರಂತೆ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಆರೋಗ್ಯ ಧಾಮ ಸಮಿತಿಯನ್ನು ರಚಿಸಲಾಯಿತು. ಸರ್ಕಾರದ ನೆರವು ಪಡೆಯದೆ, ವಿವಿಧ ಖಾಸಗಿ ಸಂಸ್ಥೆಗಳಿಂದ ಸಿಎಸ್‌ಆರ್ ಅನುದಾನ ಸಂಗ್ರಹಿಸಿ ಕಟ್ಟಡ ನಿರ್ಮಿಸುವ ಮೂಲಕ ಜಿಲ್ಲಾಧಿಕಾರಿ ದೊಡ್ಡ ಕೊಡುಗೆ ನೀಡಿದ್ದಾರೆ.

ಪ್ರಸ್ತುತ ಆರೋಗ್ಯ ಧಾಮದ ನೆಲಮಹಡಿ ಕಟ್ಟಡ ಪೂರ್ಣಗೊಂಡಿದ್ದು, ಮೊದಲನೇ ಮಹಡಿಯ ಕಟ್ಟಡದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮೊದಲನೇ ಮಹಡಿ ನಿರ್ಮಾಣಕ್ಕೆ ಅಂದಾಜು ವೆಚ್ಚ 25 ಲಕ್ಷ ರೂ ಆಗಬಹುದು. ಹಾಲಿ ಕಟ್ಟಡದಲ್ಲಿ 50ಕ್ಕೂ ಹೆಚ್ಚು ಸಾರ್ವಜನಿಕರು ನೆಮ್ಮದಿಯಾಗಿ ವಿಶ್ರಾಂತಿ ಪಡೆಯಬಹುದಾಗಿದೆ.

ಅನುದಾನ ಸಮರ್ಪಕ ಬಳಕೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸಿಎಸ್‌ಆರ್ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಯೋಜನೆ ರೂಪಿಸುತ್ತಿದ್ದಾರೆ. ಈ ಹಿಂದೆ ಜಿಲ್ಲಾ ಆರೋಗ್ಯ ಇಲಾಖೆ ಮೂಲಕ ಸಾರ್ವಜನಿಕರ ಹೃದಯ ತಪಾಸಣೆ ಮಾಡಲು ಅನುಕೂಲವಾಗುವಂತೆ ಸಿಆರ್‌ಎಸ್ ಅನುದಾನದಿಂದ ಯಂತ್ರ ಖರೀದಿಸಿದರು. ಅಂತೆಯೇ ಹೃದಯ ವೈಶಾಲ್ಯ ಯೋಜನೆಯಿಂದ ಇಂದಿಗೂ ಅನುಕೂಲವಾಗುತ್ತಿದೆ.

ರೋಗಿಗಳನ್ನು ಆರೈಕೆ ಮಾಡಲು ಬರುತ್ತಿದ್ದವರಿಗೆ ರಾತ್ರಿ ಹೊತ್ತು ತಂಗಲು ಸಮಸ್ಯೆಯಾಗಿತ್ತು. ಕಟ್ಟಡದ ಕೆಳಗೆ, ರಸ್ತೆ ಬದಿ ಇರುತ್ತಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯಧಾಮ ನಿರ್ಮಾಣ ಮಾಡಲಾಗಿದೆ. ಇದನ್ನು ಮಿಮ್ಸ್ ನಿರ್ವಹಣೆ ಮಾಡಲಿದೆ. ಡಾ.ಕುಮಾರ ಜಿಲ್ಲಾಧಿಕಾರಿ