ಅಥಣಿ: ಅಥಣಿ-ಕಾಗವಾಡ ಮತಕ್ಷೇತ್ರಗಳಿಗೆ ಇಬ್ಬರು ಮಂತ್ರಿಗಳಿದ್ದು, ಇಬ್ಬರು ಸಂಪುಟ ದರ್ಜೆ ಸ್ಥಾನಮಾನ ಹೊಂದಿರುವ ಜನಪ್ರತಿನಿಧಿಗಳ ಕ್ಷೇತ್ರಗಳು ಇಡೀ ರಾಜ್ಯಕ್ಕೆ ಮಾದರಿಯಾಗಬೇಕು. ಅದಕ್ಕೆ ಜನಪ್ರತಿನಿಧಿಗಳೊಂದಿಗೆ ತಾಲೂಕು ಮಟ್ಟದ ಅಧಿಕಾರಿಗಳು ಸಹಕಾರ ನೀಡಿ, ಜವಾಬ್ದಾರಿಯಿಂದ ಕೆಲಸ ಮಾಡಿದರೆ ಮಾದರಿ ಕ್ಷೇತ್ರವನ್ನಾಗಿಸಲು ಸಾಧ್ಯ ಎಂದು ಜಿಪಂ ಅಧ್ಯಕ್ಷೆ ಆಶಾ ಐಹೊಳೆ ಹೇಳಿದರು.
ಅವರು ಶುಕ್ರವಾರ ತಾಪಂ ಸಭಾಭವನದಲ್ಲಿ ಅಥಣಿ-ಕಾಗವಾಡ ಜಿಪಂ ಕ್ಷೇತ್ರಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕಳೆದ ನಾಲ್ಕುವರೆ ವರ್ಷಗಳಿಂದ ಜಿಪಂ ಕ್ಷೇತ್ರಗಳ ಸುಧಾರಣೆಗೆ, ಅಭಿವೃದ್ಧಿ ಕಾಮಗಾರಿಗಳಿಗೆ ಸಾಕಷ್ಟು ಅನುದಾನ ಜಿಪಂನಿಂದ ಬಂದರೂ ಕಾಮಗಾರಿಗಳು ಮಾತ್ರ ಕುಂಠಿತವಾಗಿವೆ. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ತಾಲೂಕಿನಲ್ಲಿ ಕುಡಿಯುವ ನೀರು ಹಾಗೂ ಮೂಲ ಸೌಲಭ್ಯಗಳ ಕೊರತೆಯಾಗದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಧಿಕಾರಿಗಳ ತರಾಟೆ: ಸಭೆಗೆ ಪೂರ್ಣ ಮಾಹಿತಿ ನೀಡಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಭೂಸೇನಾ, ಹೆಸ್ಕಾಂ, ಶಿಕ್ಷಣ ಇಲಾಖೆ ಅಧಿಕಾರಿಗಳಲ್ಲಿ ಸಾಕಷ್ಟು ಲೋಪ ದೋಷಗಳಿವೆ. ತಿದ್ದಿಕೊಂಡು ಜವಾಬ್ದಾರಿಯಿಂದ ಕೆಲಸ ಮಾಡುವಂತೆ ಸೂಚಿಸಿದರು. ಜಿಪಂ ಸದಸ್ಯ ಗುರುಪ್ಪ ದಾಶ್ಯಾಳ ಮಾತನಾಡಿ, ಸರ್ಕಾರದ ಮಾರ್ಗಸೂಚಿ ಪ್ರಕಾರ ಯೋಜನೆ ರೂಪಿಸಿ, ಪ್ರತಿ ಗ್ರಾಪಂಗಳಲ್ಲಿ ಕಾಮಗಾರಿ ಕೈಗೊಂಡು ಆ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಆದರೆ, ಪಿಡಿಒ, ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ಕಾಮಗಾರಿ ಆರಂಭಿಸಿ ಅರ್ಧದಲ್ಲಿ ಬಿಡುತ್ತಿರುವುದು ಕಂಡು ಬಂದಿದೆ. 2014ರಿಂದ ಇಲ್ಲಿಯವರೆಗೂ ಕೆಲವು ಅಂಗನವಾಡಿ ಕಟ್ಟಡಗಳು, ಭವನಗಳು, ಜಲಕುಂಭಗಳು, ಮತ್ತಿತರ ಮೂಲ ಸೌಲಭ್ಯಗಳ ಕಾಮಗಾರಿ ಆಮೆ ಗತಿಯಲ್ಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಭೆಗೆ ಆಗಮಿಸಿದ್ದ ಹೆಸ್ಕಾಂ ಇಲಾಖೆ ಕೆಳ ದರ್ಜೆ ಅಧಿಕಾರಿಗಳು ಮಾಹಿತಿ ನೀಡಲು ತಡವರಿಸಿದರು. ಹೆಸ್ಕಾಂ ಮೇಲಧಿಕಾರಿಗಳು ಸಭೆಗೆ ಏಕೆ ಬಂದಿಲ್ಲ ಮತ್ತು ಸಮರ್ಪಕ ಮಾಹಿತಿ ನೀಡದಿರುವುದಕ್ಕೆ ಸದಸ್ಯರಾದ ಗುರುಪ್ಪ ದಾಶ್ಯಾಳ ಮತ್ತು ಜಿಪಂ ಅಧ್ಯಕ್ಷೆ ಅಸಮಾಧಾನ ವ್ಯಕ್ತಪಡಿಸಿದರು .
ಸಭೆಯಲ್ಲಿ ಶಿವಾನಂದ ದಿವಾನಮಳ ಮಾತನಾಡಿದರು. ಅಸಮರ್ಪಕ ಮಾಹಿತಿ ನೀಡಿದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುವಂತೆ ಸಭೆಯಲ್ಲಿ ತೀರ್ಮಾನಿಸಿ, ತಾಲೂಕು ಪಂಚಾಯಿತಿ ಇಒ ಅವರಿಗೆ ಸೂಚಿಸಲಾಯಿತು. ತಾಪಂ ಇಒ ರವಿ ಬಂಗಾರೆಪ್ಪನವರ, ನೋಡಲ್ ಅಧಿಕಾರಿ ಡಿ.ಎಂ. ಜಕ್ಕಪ್ಪಣ್ಣವರ, ಉದಯಗೌಡ ಪಾಟೀಲ, ವೀರಣ್ಣ ವಾಲಿ, ಬಿ.ಎಸ್. ಯಾದವಾಡ, ಎಸ್.ಎಲ್. ಕುಡಣವರ, ಎಸ್.ಎಸ್. ಮಾಕಾಣಿ, ಬುಜಬಲಿ ಐಗಳಿ ಇತರರು ಇದ್ದರು.