ಮಡಿಕೇರಿ: ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಘೋಷಿಸಲಾದ ನವನೀತಿಯಂತೆ ಕೊಡಗಿನಲ್ಲಿಯೂ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮದ ಜತೆಯಲ್ಲಿಯೇ ಜವಬ್ದಾರಿಯುತ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಅನಿತಾ ಭಾಸ್ಕರ್ ಹೇಳಿದ್ದಾರೆ.
ನಗರದ ಪ್ರವಾಸೋದ್ಯಮ ಇಲಾಖೆಯ ಸಭಾಂಗಣದಲ್ಲಿ ಕೊಡಗು ಪತ್ರಕರ್ತರ ಸಂಘ(ರಿ) ವತಿಯಿಂದ ಗುರುವಾರ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಕೊಡಗಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದರು.
೨೦೨೩ರಲ್ಲಿ ಕೊಡಗು ಜಿಲ್ಲೆಗೆ ೪೩.೬೯ ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, ೨೦೨೪ ರಲ್ಲಿ ೪೫.೭೨ ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, ಕೊಡಗಿನ ಪ್ರವಾಸೋದ್ಯಮದ ಪಾಲಿಗೆ ಸ್ವರ್ಣಯುಗ. ಕೊಡಗು ಜಿಲ್ಲೆ ಪ್ರವಾಸಿಗರ ಮೆಚ್ಚಿನ ತಾಣವಾಗಿಯೇ ಮುಂದುವರೆದಿದ್ದು, ಈ ನಿಟ್ಟಿನಲ್ಲಿ ಮತ್ತಷ್ಟು ಹೊಣೆಯರಿತ ಪ್ರವಾಸೋದ್ಯಮದ ಯೋಜನೆಗಳನ್ನು ಪ್ರವಾಸೋದ್ಯಮ ಇಲಾಖೆ ೨೦೨೯ ರವರೆಗೆ ಜಾರಿಯಲ್ಲಿಟ್ಟಿರುವ ನವ ನೀತಿಯಂತೆ ಜಾರಿಗೊಳಿಸಲಾಗುತ್ತದೆ ಎಂದು ಅನಿತಾ ಭಾಸ್ಕರ್ ಹೇಳಿದರು.
ಈಗಾಗಲೇ ಕೊಡಗಿನ ೨೩ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ವಿವಿಧ ಪ್ರಗತಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ೯ ಗೈಡ್‌ಗಳನ್ನು ಪ್ರವಾಸಿ ಮಿತ್ರ ಯೋಜನೆಯಡಿಯಲ್ಲಿ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ನೋಮಕ ಮಾಡಲಾಗುತ್ತದೆ. ಇನ್ನೂ ೧೦ ಪ್ರವಾಸೀ ಮಿತ್ರರು ಕೊಡಗಿನ ಪ್ರವಾಸೀ ತಾಣಗಳಿಗೆ ದೊರಕುವ ಸಾಧ್ಯತೆಇದೆ. ಅಂತೆಯೇ ಒಂದು ಜಿಲ್ಲೆ-ಒಂದು ತಾಣ ಯೋಜನೆಯಡಿ ಕೊಡಗಿನಲ್ಲಿ ಮಾಂದಲಪಟ್ಟಿ ತಾಣವನ್ನು ಗುರುತಿಸಲಾಗಿದ್ದು, ಮಾಂದಲಪಟ್ಟಿಯಲ್ಲಿಯೂ ಇಲಾಖೆ ವತಿಯಿಂದ ಪ್ರವಾಸೀ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಕೊಡಗು ಜಿಲ್ಲೆಯನ್ನು ಇದೇ ಮೊದಲ ಬಾರಿಗೆ ಪ್ರವಾಸೀ ಸರ್ಕ್ಯೂಟ್ ಯೋಜನೆಯಡಿ ಸೇರ್ಪಡೆ ಮಾಡಲಾಗುತ್ತದೆ. ಮಡಿಕೇರಿಯ ರಾಜಾಸೀಟ್ ಬಳಿಯಲ್ಲಿರುವ ಕೂರ್ಗ್ ವಿಲೇಜ್ನಲ್ಲಿ ಕೊಡಗಿನ ಸವಿಕಿತ್ತಳೆಯನ್ನು ಪ್ರಚುರ ಪಡಿಸಲು ಗೋಣಿಕೊಪ್ಪಲುವಿನ ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಸಹಯೋಗ ಪಡೆಯಲಾಗಿದೆ ಎಂದು ಅನಿತಾ ಭಾಸ್ಕರ್ ಮಾಹಿತಿ ನೀಡಿದರು.
ಕೊಡಗು ಜಿಲ್ಲೆಯಲ್ಲಿ ಅಂದಾಜು ೩,೫೦೦ ಹೋಂಸ್ಟೇಗಳಿರಬಹುದು ಎಂದು ಅಂದಾಜಿಸಲಾಗಿದ್ದು ಈ ಪೈಕಿ ಪ್ರವಾಸೋದ್ಯಮ ಇಲಾಖೆಯಲ್ಲಿ ಈವರೆಗೂ ೨೨೬೯ ಹೋಂಸ್ಟೇಗಳು ನೋಂದಣಿ ಮಾಡಿಕೊಂಡಿವೆ. ತಿಂಗಳಿಗೆ ೩೦-೫೦ ಹೊಸ ಹೋಂಸ್ಟೇ ಮಾಲೀಕರು ನೋಂದಣಿಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ಹೇಳಿದ ಅನಿತಾ ಭಾಸ್ಕರ್, ಶಾಸಕ ಎ.ಎಸ್.ಪೊನ್ನಣ್ಣ ಪ್ರಯತ್ನ ಫಲವಾಗಿ ವಿರಾಜಪೇಟೆಯ ಮಲತಿರಿಕೆ ಬೆಟ್ಟ, ಅಬ್ಬಿಫಾಲ್ಸ್, ಬರಪೊಳೆ, ಇರ್ಪು ಫಾಲ್ಸ್ ಅಭಿವೃದ್ಧಿಗಾಗಿ ಸರ್ಕಾರದಿಂದ ೧ ಕೋಟಿ ರುಪಾಯಿ ಅನುದಾನ ದೊರಕಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಜಿ.ಚಿದ್ವಿಲಾಸ್, ಎಸ್.ಜಿ.ಉಮೇಶ್, ಬಿ.ಜಿ.ಅನಂತಶಯನ, ಸಂಘದ ಅಧ್ಯಕ್ಷ ಎಚ್.ಟಿ.ಅನಿಲ್, ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕರಾದ ಜತಿನ್ ಬೋಪಣ್ಣ ಹಾಜರಿದ್ದರು.
ಕೊಡಗಿಗೆ ಇ ಪಾಸ್ ಅಸಾಧ್ಯ
ಕೊಡಗು ಜಿಲ್ಲೆಗೆ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರನ್ನು ನಿಯಂತ್ರಿಸಲು ಊಟಿ, ಕೊಡೈಕೆನಾಲ್ ಮಾದರಿಯಲ್ಲಿ ದಿನಕ್ಕೆ ಇಂತಷ್ಟೇ ವಾಹನಗಳಿಗೆ ಪ್ರವೇಶ ಎಂಬ ಇ ಪಾಸ್ ವ್ಯವಸ್ಥೆಯನ್ನು ಜಾರಿಗೊಳಿಸಲು ಅನೇಕರು ಸಲಹೆ ನೀಡುತ್ತಿದ್ದಾರೆ. ಆದರೆ, ಇದು ತಾಂತ್ರಿಕವಾಗಿ ಅಸಾಧ್ಯವಾಗಿದೆ. ಕುಶಾಲನಗರ-ಮಡಿಕೇರಿಗಾಗಿ ಮತ್ತು ಕುಟ್ಟ, ಮಾಕುಟ್ಟ ಮಾರ್ಗವಾಗಿ ಹೆದ್ದಾರಿ ಹಾದುಹೋಗುವುದರಿಂದ ಈ ಮಾರ್ಗಗಳಲ್ಲಿ ನಿತ್ಯ ಪ್ರಯಾಣಿಕರು ಸಾಗುತ್ತಾರೆ. ಹೀಗಾಗಿ ಪಾಸ್ ವ್ಯವಸ್ಥೆ ಕಷ್ಟಸಾಧ್ಯ. ಈ ಎಲ್ಲಾ ಕಾರಣಗಳಿಂದಾಗಿ ಇ ಪಾಸ್ ಜಾರಿಗೊಳಿಸಲಾಗುವುದಿಲ್ಲ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಅನಿತಾ ಭಾಸ್ಕರ್ ಹೇಳಿದರು.
೧.೬೨ ಕೋಟಿ ವೆಚ್ಚದಲ್ಲಿ ಮಾಂದಲ್ಪಟ್ಟಿ ಅಭಿವೃದ್ಧಿ
ಕೊಡಗಿನ ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರಸಿದ್ಧ ಪ್ರವಾಸಿ ತಾಣ ಮಾಂದಲ್ಪಟ್ಟಿ ಅರಣ್ಯ ಇಲಾಖಾ ವ್ಯಾಪ್ತಿಗೆ ಬರುತ್ತದೆ. ಹೀಗಿದ್ದು, ಅಲ್ಲಿಗೆ ತೆರಳುವ ಜಂಕ್ಷನ್ ಬಳಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ೧.೬೨ ಕೋಟಿ ವೆಚ್ಚದ ಅಭಿವೃದ್ಧಿಯ ಕಾರ್ಯಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಕ್ಷೇತ್ರದ ಶಾಸಕರಾದ ಡಾ.ಮಂತರ್‌ಗೌಡ ಅವರ ಸಹಕಾರದೊಂದಿಗೆ ರಸ್ತೆಗಳ ಅಭಿವೃದ್ಧಿಗೂ ಪ್ರಯತ್ನಗಳು ನಡೆಯುತ್ತಿದೆಯೆಂದು ಅನಿತಾ ಭಾಸ್ಕರ್ ಹೇಳಿದರು.
ಸ್ವಾಸ್ಥ್ಯದತ್ತ ಚಿಂತನೆ ಹರಿಸಿ
ಜಿಲ್ಲೆಯಲ್ಲಿ ಪ್ರವಾಸಿಗರಿಗಾಗಿ ಇರುವ ಹೋಂ ಸ್ಟೇ, ರೆಸಾರ್ಟ್‌ಗಳಲ್ಲಿ ಆರೋಗ್ಯ ಸಂರಕ್ಷಣೆಗೆ ಸಂಬಂಧಿಸಿದ ಸ್ವಾಸ್ಥ್ಯಕ್ಕೆ ಒಂದಷ್ಟು ಜಾಗವನ್ನು ಕಲ್ಪಿಸಬೇಕು. ಇದರಿಂದ ಹೋಂಸ್ಟೇಗಳಲ್ಲಿ ತಂಗುವವರು ಮತ್ತೆ ಕೆಲ ದಿನಗಳ ಕಾಲ ಅಲ್ಲಿ ತಂಗುವ ಅವಕಾಶ ಸೃಷ್ಟಿಯಾಗುತ್ತದೆ. ಇಂತಹ ಚಟುವಟಿಕೆಗಳಿಗೆ ತಪ್ಪಾಗಿ ಅರ್ಥೈಸುವ ಕಾರ್ಯವಾಗುವುದು ಬೇಡವೆಂದು ಸೂಕ್ಷ್ಮವಾಗಿ ನುಡಿದರು.