ಜಿಲ್ಲೆ

ವಿದ್ಯಾರ್ಥಿನಿಯರ ಸಾವಿಗೆ ಶಾಸಕರೇ ಹೊಣೆ

ಜಿ.ಹೆಚ್. ಧನ್ಯಕುಮಾರ್

ಕೊಪ್ಪ: ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರಾದ ಅಮೂಲ್ಯ ಹಾಗೂ ಶಮಿತಾ ಸಾವಿಗೆ ಶಾಸಕ ರಾಜೇಗೌಡರೇ ನೇರ ಹೊಣೆಯಾಗುತ್ತಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಹೊಸೂರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ನಡೆಯುವ ಅಭಿವೃದ್ಧಿ ಹಾಗೂ ಅನಾಹುತಗಳಿಗೆ ಕ್ಷೇತ್ರದ ಶಾಸಕರೇ ಹೊಣೆ. ಇಂತಹ ಅವಘಡಗಳು ನಡೆದಾಗ ನನಗೆ ಸಂಬಂಧ ಇಲ್ಲದಂತೆ ವರ್ತಿಸುವುದು ಸರಿಯಲ್ಲ. ಶಾಸಕರಾಗಿದ್ದವರು ಆಗ್ಗಾಗೆ ವಸತಿ ಶಾಲೆಗಳ ಭೇಟಿ ನೀಡಿ ಸಭೆಯನ್ನು ನಡೆಸಬೇಕು. ಪ್ರತಿ ಮೂರು ತಿಂಗಳಿಗೊಮ್ಮ ಕೆಡಿಪಿ ಸಭೆ ನಡೆಸಿ ತಾಲೂಕಿನ ಬಗ್ಗೆ ಮಾಹಿತಿ ಇರಬೇಕು ಅದು ಬಿಟ್ಟು ಯಾವುದಾದರೂ ಘಟನೆ ನಡೆದಾಗ ಮಾತ್ರ ಅಲ್ಲಿಗೆ ಭೇಟಿ ನೀಡಿ ಬರುವುದಲ್ಲ ಎಂದರು.

ಸಾರ್ವಜನಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಚ್.ಎಂ.ರವಿಕಾಂತ್ ಮಾತನಾಡಿ, ಕಾಂಗ್ರೆಸ್‌ನ ಸುಧೀರ್ ಕುಮಾರ್ ಮುರೊಳ್ಳಿ ಮೃತ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವ ಬಗ್ಗೆ ತಲೆ ಕೆಡಿಸಿಕೊಳ್ಳಲಿ ಅದು ಬಿಟ್ಟು ಬಿಜೆಪಿ ಅವರು ಪ್ರತಿಭಟನೆ ಮಾಡಿದ್ದಾರೆ ಎಂದು ಹೇಳುವುದು ಸರಿಯಲ್ಲ. ಅವರು ವೈಯುಕ್ತಿಕ ದ್ವೇಷಗಳನ್ನು ಬಿಟ್ಟು ಸಮಾಜದ ಏಳಿಗೆಗೆ ಶ್ರಮವಹಿಸುವಕಡೆ ಸಾಗಬೇಕು. ತಮ್ಮದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಮೃತ ವಿದ್ಯಾರ್ಥಿನಿಯರಿಗೆ ನ್ಯಾಯ ಹಾಗೂ ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಜಯಂತ್ ಹೊರಬೈಲು, ರೇವಂತ್‌ಗೌಡ, ಅರುಣ್ ಶಿವಪುರ, ಸಂದೇಶ್ ಶೆಟ್ಟಿ, ಹೆಚ್.ಆರ್.ಜಗದೀಶ್, ಶೃಂಗೇಶ್, ವಿಜಯ್ ಕುಮಾರ್, ಮಂಜುನಾಥ್ ಕಾರ್ಬೈಲು ಇದ್ದರು.