ವಿಜಯಪುರ: ನೆರೆಯ ಜಿಲ್ಲೆ, ರಾಜ್ಯಗಳಿಗೆ ಸಂಪರ್ಕಿಸುವ ರಸ್ತೆಗಳಲ್ಲಿ ಭಾರಿ ವಾಹನಗಳು ಸಂಚರಿಸುತ್ತಿರುವುದರಿಂದ ದಟ್ಟಣೆ ಉಂಟಾಗಿದ್ದು, ಇದನ್ನು ತಪ್ಪಿಸಲು ‘ಪೆರಿಪೆರಲ್ ರಿಂಗ್ ರಸ್ತೆ’ ನಿರ್ಮಿಸುವ ಯೋಜನೆಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ನೆರೆಯ ಬೆಳಗಾವಿ, ಕಲಬುರಗಿ; ಮಹಾರಾಷ್ಟ್ರದ ಕೊಲ್ಲಾಪುರ, ಸೊಲ್ಲಾಪುರ; ಗೋವಾ ಮತ್ತು ಇತರ ಪ್ರಮುಖ ನಗರಗಳ ಸಂಪರ್ಕ ಸೇತುವೆಯಾಗಿರುವ ವಿಜಯಪುರದಲ್ಲಿ ಭಾರಿ ವಾಹನಗಳ ಸಂಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ವಾಹನಗಳಿಂದ ಸಂಚಾರ ಸಮಸ್ಯೆ ಹಾಗೂ ಸಮಯ ವ್ಯರ್ಥವೂ ಆಗುತ್ತಿದೆ. ಸಂಚಾರ ದಟ್ಟಣೆ ನಿವಾರಿಸಲು ಮತ್ತು ನಗರಾಭಿವೃದ್ಧಿಗೆ ಬಲ ನೀಡಲು ‘ಪೆರಿಫೆರಲ್ ರಿಂಗ್ ರಸ್ತೆ’ ಅನಿವಾರ್ಯವಾಗಿದೆ. ಈ ಅಗತ್ಯತೆ ಮನಗಂಡು, ಜನವರಿ 2025ರಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರದ ಮೂಲಕ ತಿಳಿಸಲಾಗಿ ಸಕಾರಾತ್ಮಕವಾಗಿ ಸ್ಪಂದಿಸಿ, ಪರಿಗಣಿಸಲಾಗುವುದೆಂದು ಅವರು ಉತ್ತರಿಸಿದ್ದಾಗಿ ಸಚಿವ ಎಂ.ಬಿ. ಪಾಟೀಲ ಎಂದು ತಿಳಿಸಿದ್ದಾರೆ.
ಅಲ್ಲದೆ, ಮಂಡ್ಯ, ಹಾಸನ ಸೇರಿದಂತೆ ಹಲವು ನಗರಗಳು ರಿಂಗ್ ರಸ್ತೆ ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರದ ಮುಂದಿಟ್ಟಿವೆ. ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಜಿಲ್ಲೆಯ ಜನಪ್ರತಿನಿಧಿಗಳೆಲ್ಲರೂ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಯೋಜಿತ ‘ಪೆರಿಫೆರಲ್ ರಿಂಗ್ ರಸ್ತೆ’ ರಾಷ್ಟ್ರೀಯ ಹೆದ್ದಾರಿಗಳಾದ ಎನ್‌ಎಚ್-50, ಎನ್‌ಎಚ್-548ಬಿ, ಎನ್‌ಎಚ್-561ಎ, ಎನ್‌ಎಚ್-218 ಮತ್ತು ರಾಜ್ಯ ಹೆದ್ದಾರಿ ಎನ್‌ಎಚ್-34 ಅನ್ನು ಪರಸ್ಪರ ಸಂಪರ್ಕಿಸಲಿವೆ. ಜಿಲ್ಲೆಯ ಅಭಿವೃದ್ಧಿಗೆ-ಆರ್ಥಿಕ ಬದಲಾವಣೆಗೆ ‘ಪೆರಿಪೆರಲ್ ರಿಂಗ್ ರಸ್ತೆ’ ಯೋಜನೆಯು ಹೊಸ ಹೆಜ್ಜೆಯಾಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.