ಜಿಲ್ಲೆ

ಹಲವು ಸಮಸ್ಯೆಗಳಿಗೆ ಸ್ಪಂದನೆ; ಡಾ.ಬಿ.ಸಿ.ಸತೀಶ

reportermys

ಮಡಿಕೇರಿ: ’ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಜತೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿರುವುದರಿಂದ ತಮ್ಮ ಸಮಸ್ಯೆಗಳನ್ನು ನೇರವಾಗಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಹೇಳಿಕೊಳ್ಳಲು ಇದೊಂದು ಸುವರ್ಣವಕಾಶವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದರು.


ಹಾಕತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕುವೆಂಪು ಶತಮಾನೋತ್ಸವ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ತಾಲೂಕಿನ ಎಲ್ಲಾ ಅಧಿಕಾರಿಗಳ ಸಹಯೋಗದೊಂದಿಗೆ ’ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ’ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಕಾರ್ಯಕ್ರಮದಲ್ಲಿ ಮಾತನಾಡಿದರು.


ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದರ ಜತೆಗೆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ. ನಮ್ಮ ಮಟ್ಟದಲ್ಲಿ ಸಮಸ್ಯೆಗಳಿಗೆ ಪರಿಹಾರ ನೀಡಬಹುದಾದರೆ ಈ ಹಂತದಲ್ಲಿಯೇ ಪರಿಹರಿಸಿಕೊಡಲಾಗುವುದು ಎಂದು ತಿಳಿಸಿದರು.


ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ಮಾತನಾಡಿ, ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಲಿಂಕ್ ಮಾಡಿಸಲು ಎಲ್ಲರೂ ಮುಂದಾಗಬೇಕು. ಆ ನಿಟ್ಟಿನಲ್ಲಿ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಲಿಂಕ್ ಮಾಡಿಸಲು ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು. ಶೇ೧೦೦ ರ?್ಟು ಪ್ರಗತಿ ಸಾಧಿಸುವಂತೆ ಹಾಕತ್ತೂರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರು.


ಸ್ಥಳೀಯರಾದ ಹರೀಶ್ ಮಾತನಾಡಿ, ಚೂರಿಕಾಡು ಪೈಸಾರಿಗೆ ಹೋಗುವ ರಸ್ತೆ ದುರಸ್ತಿಯಾಗಿದ್ದು ಅದನ್ನು ಸರಿಪಡಿಸಿ ಕೊಡಬೇಕು. ಶೌಚಾಲಯಕ್ಕಾಗಿ ಅರ್ಜಿ ಸಲ್ಲಿಸಿ ೭-೮ ತಿಂಗಳಾದರೂ ಕೂಡ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಿದ ಅವರು, ನಡೆದಾಡುವ ರಸ್ತೆ ಮತ್ತು ಬೀದಿ ದೀಪದ ವ್ಯವಸ್ಥೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.


ಈ ಸಂದರ್ಭದಲ್ಲಿ ಮಡಿಕೇರಿ ತಾಲೂಕು ಪಂಚಾಯಿತಿ ಇಒ ಶೇಖರ್ ಮಾತನಾಡಿ, ಸ್ವಂತ ಮನೆ ಹೊಂದಿದ್ದರೆ ಶೌಚಾಲಯವನ್ನು ನಿರ್ಮಿಸಿ ಕೊಡಬಹುದು. ಮನೆ ಇಲ್ಲದೆ ಕೇವಲ ಶೌಚಾಲಯವನ್ನು ನಿರ್ಮಿಸಿ ಕೊಡಲು ಸಾಧ್ಯವಿಲ್ಲ ಎಂದರು.


ರಸ್ತೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು ಆರ್‌ಡಿಪಿಆರ್ ರಸ್ತೆಯಾಗಿದ್ದರೆ ಪಂಚಾಯತ್ ರಾಜ್ ಯೋಜನೆ ಅಡಿ ದುರಸ್ತಿ ಮಾಡಿಸಬಹುದು. ಆ ನಿಟ್ಟಿನಲ್ಲಿ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.


ಗ್ರಾಮಸ್ಥರಾದ ಸುಕುಮಾರ್ ಮಾತನಾಡಿ, ತ್ರಿನೇತ್ರ ಯುವಕ ಸಂಘವು ಕಳೆದ ೨೫ ವ?ರ್ಗಳಿಂದ ಕಾರ್ಯನಿರ್ವಹಿಸುತ್ತಿದ್ದು ಸಂಘದ ಕಟ್ಟಡಕ್ಕೆ ಯಾವುದೇ ರೀತಿಯಾದ ಭೂ ದಾಖಲೆಗಳು ಇರುವುದಿಲ್ಲ. ಅ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸಂಘದ ಹೆಸರಿಗೆ ಭೂ ದಾಖಲಾತಿಗಳನ್ನು ಮಾಡಿಕೊಡುವಂತೆ ಮನವಿ ಮಾಡಿದರು.


ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಸರ್ಕಾರಿ ಜಾಗವನ್ನು ಖಾಸಗಿ ಒಡೆತನಕ್ಕೆ ನೀಡಲು ಆಗುವುದಿಲ್ಲ. ಒಂದು ವೇಳೆ ಆ ರೀತಿಯಾಗಿ ನೀಡಬೇಕೆಂದರೆ ಸರ್ಕಾರದಿಂದ ಮಾತ್ರ ನೀಡಲು ಸಾಧ್ಯ ಎಂದರು.


ಸಾರ್ವಜನಿಕರಾದ ಯತೀಶ್ ಮಾತನಾಡಿ, ೯೦ ಮನೆಯಿಂದ ಚೂರಿಕಾಡು ಮುಖ್ಯ ರಸ್ತೆಗೆ ಹೋಗುವ ದಾರಿ ಸಂಪೂರ್ಣವಾಗಿ ಹದಗೆಟ್ಟಿದೆ. ಇದನ್ನು ಸರಿಪಡಿಸಿ ಕೊಡಬೇಕು. ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಮನವಿ ಮಾಡಿದರು.


ಉಪ ವಿಭಾಗಾಧಿಕಾರಿ ಮಾತನಾಡಿ, ನಿವೇಶನ ರಹಿತರ ಪಟ್ಟಿ ಸಿದ್ದಪಡಿಸಿ ಪ್ರಸ್ತಾವನೆ ಸಲ್ಲಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.


ಗ್ರಾಮದಲ್ಲಿ ನಿವೇಶನ ರಹಿತರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ರಹಿತರ ಸರ್ವೆ ಮಾಡಲಾಗಿದೆ. ಜಾಗ ಇದ್ದವರಿಗೆ ಮನೆ ನಿರ್ಮಾಣಕ್ಕೆ ಆದೇಶ ನೀಡಲಾಗುತ್ತದೆ. ಗ್ರಾಮಕ್ಕೆ ಸರ್ಕಾರಿ ಆಸ್ಪತ್ರೆ ಶಾಲೆ ಮುಂತಾದ ಸರ್ಕಾರಿ ಮತ್ತು ಸಾರ್ವಜನಿಕ ಉದ್ದೇಶಕ್ಕಾಗಿ ಇದ್ದ ಜಾಗವನ್ನು ಬಿಟ್ಟು, ಅತಿಕ್ರಮಣಕ್ಕೆ ಒಳಪಡದಿದ್ದರೆ ಮತ್ತು ಯಾರ ತಡೆ ಇಲ್ಲದಿದ್ದರೆ ಅವಶ್ಯಕತೆಗೆ ಅನುಗುಣವಾಗಿ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಕೆಲಸ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.


ಸ್ಥಳೀಯರಾದ ಲೋಕೇಶ್ ಮಾತನಾಡಿ, ಬಾರಿ ಮಳೆಯಿಂದಾಗಿ ಈ ಭಾಗದ ರಸ್ತೆಗಳೆಲ್ಲ ಸಂಪೂರ್ಣ ಹಾನಿಯಾಗಿದ್ದು ಇದನ್ನು ಸರಿಪಡಿಸಿ ಕೊಡಬೇಕು. ಪೂಕಾಡು ಪೈಸಾರಿ ಜಾಗದಲ್ಲಿನ ಸ್ಮಶಾನದಲ್ಲಿ ಕೆಲವೊಂದು ಕಾಮಗಾರಿಗಳನ್ನು ಮಾಡಿಸುವಂತೆ ಮನವಿ ಮಾಡಿದರು.


ಗ್ರಾಮಸ್ಥರಾದ ಸುನಿತಾ ಮಾತನಾಡಿ, ತಾನು ಬಿಳಿಗಿರಿ ಗ್ರಾಮದ ನಿವಾಸಿಯಾಗಿದ್ದು ನನ್ನ ಗಂಡ ಕೋವಿಡ್ ನಿಂದಾಗಿ ಮರಣ ಹೊಂದಿದ್ದಾರೆ. ಕೇಂದ್ರ ಸರ್ಕಾರದಿಂದ ೫೦ ಸಾವಿರ ಪರಿಹಾರ ದೊರೆತಿದೆ. ಆದರೆ ರಾಜ್ಯ ಸರ್ಕಾರದಿಂದ ಯಾವುದೇ ರೀತಿಯಾದ ಪರಿಹಾರ ಸಿಗಲಿಲ್ಲ ಎಂದು ತಿಳಿಸಿದರು.


ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಬಿಪಿಎಲ್ ಕಾರ್ಡ್ ಇದ್ದರೆ ಅನುದಾನ ಸಿಗುತ್ತದೆ ಎಪಿಎಲ್ ಕಾರ್ಡ್ ಹೊಂದಿದ್ದರೆ ಯಾವುದೇ ರೀತಿಯಾದ ಅನುದಾನ ಸಿಗುವುದಿಲ್ಲ ಎಂದರು.


ಆದಾಯ ದೃಢೀಕರಣ ಪತ್ರ, ಪಿಂಚಣಿ ವ್ಯವಸ್ಥೆ, ಪಡಿತರ ಚೀಟಿ, ಸರ್ಕಾರಿ ಶಾಲೆಯ ಮೇಲ್ಚಾವಣಿಯ ಅಂಚುಗಳು ಹಾನಿಯಾಗಿರುವುದು. ತಡೆಗೋಡೆ ನಿರ್ಮಾಣ, ಕುಡಿಯುವ ನೀರು, ನಿವೇಶನ ರಹಿತರಿಗೆ ನಿವೇಶನ ಒದಗಿಸುವಂತೆ ಹಲವಾರು ಅರ್ಜಿ ಅಹವಾಲುಗಳನ್ನು ಜನರು ಜಿಲ್ಲಾಧಿಕಾರಿ ಅವರಿಗೆ ಸಾರ್ವಜನಿಕರು ನೀಡಿದರು.


ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಪಿ.ಎಸ್.ಮಹೇಶ್, ಗ್ರಾ.ಪಂ.ಅಧ್ಯಕ್ಷೆ ಸವಿತಾ, ನಾನಾ ಇಲಾಖೆ ಅಧಿಕಾರಿಗಳು ಇದ್ದರು.