ಜಮಖಂಡಿ: ಜನರಿಂದ ಸರ್ಕಾರ ಜನರಿಗಾಗಿ ಸರ್ಕಾರ ಇರುವುದು ಬಿಟ್ಟು ಇಂದು ಅಧಿಕಾರಿಗಳಿಗಾಗಿ ಸರ್ಕಾರ ಎನ್ನುವಂತಾಗಿದೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಜಿಪಂ, ತಾಪಂ, ಗ್ರಾಪಂ ಆಶ್ರಯದಲ್ಲಿ ಶುಕ್ರವಾರ ನಡೆದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನೂತನವಾಗಿ ನಿರ್ಮಿಸಿದ ರಾಜೀವ ಗಾಂಧಿ ಸೇವಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಪಂ ಸದಸ್ಯರು, ಪಿಡಿಒ, ಶಾಸಕರು, ಅಧಿಕಾರಿಗಳು ಜನಸೇವೆಗಾಗಿ ಇರೋದು ಜನಸಾಮಾನ್ಯರ ಕಷ್ಟನೋವುಗಳನ್ನು ದೂರ ಮಾಡುವುದಾಗಿದೆ, ಸರ್ಕಾರದ ಸೌಲಭ್ಯಗಳನ್ನು ಅವರಿಗೆ ಕಲ್ಪಿಸುವ ಮಹತ್ತರ ಕಾರ್ಯ ಜವಾಬ್ದಾರಿ ಇದೆ. ಇದನ್ನು ಬಿಟ್ಟರೆ ಮಹಾಪಾಪ ಉಂಟಾಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಮಹಾತ್ಮ ಗಾಂಧಿ ಅವರು ಗ್ರಾಮ ಸ್ವರಾಜ್ ಕನಸನ್ನು ಕಂಡಿದ್ದರು, ಗ್ರಾಮಗಳು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು, ಗ್ರಾಮಗಳು ಸ್ವಚ್ಛತೆಯಿಂದ ಕೂಡಿರಬೇಕು, ಉತ್ತಮ ಶಿಕ್ಷಣ ಸಿಗುವಂತೆ ಇರಬೇಕು, ರೈತರಿಗೆ ತ್ವರಿತವಾಗಿ ಹಣ ಸಿಗುವಂತ ಸಹಕಾರಿ ಸಂಸ್ಥೆಗಳು, ಗ್ರಾಮಗಳಲ್ಲಿನ ಜನರಿಗೆ ಬೇಕು, ಬೇಡಗಳನ್ನು ಈಡೇರಿಸುವಂತ ಕಾರ್ಯ ಚಟುವಟಿಕೆಗಳು ನಡೆಯಬೇಕು ಎಂದು ಹೇಳಿದರು.
ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಶ್ರೀಗಳು ಮಾತನಾಡಿ, ಗ್ರಾಮಗಳು ಸ್ವಚ್ಛ ಗ್ರಾಮಗಳಾಗಬೇಕು. ಮಾದರಿ ಗ್ರಾಮಗಳನ್ನಾಗಿ ರೂಪಿಸುವಲ್ಲಿ ಗ್ರಾಮಸ್ಥರು, ಗ್ರಾಪಂ ಸದಸ್ಯರು, ಅಧಿಕಾರಿಗಳು ಒಗ್ಗಟ್ಟಾಗಿ ಕಾರ್ಯ ಮಾಡಬೇಕು, ಪ್ರತಿಯೊಬ್ಬರಲ್ಲಿ ನನ್ನೂರಿಗೆ ನನ್ನ ಕೊಡುಗೆ ಏನು? ಎಂಬುದನ್ನು ಮನನ ಮಾಡಿಕೊಳ್ಳಬೇಕು ಎಂದರು.
ಕುಂಚನೂರ ಮಾದುಲಿಂಗ ಶ್ರೀಗಳು ಮಾತನಾಡಿದರು. ಓಲೇಮಠದ ಆನಂದ ದೇವರು, ಸಂಗಯ್ಯ ಮಠಪತಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಸತ್ಯವ್ವ ನಾಟಿಕಾರ ಅಧ್ಯಕ್ಷತೆ ವಹಿಸಿದ್ದರು. ದೇವಲ ದೇಸಾಯಿ, ತಾಪಂ ಇಒ ಸಚೀನ ಮಾಚಕನೂರ, ಕುತ್ಬುದ್ದಿನ್ ಖಾಜಿ, ಗಿರೀಶ ಕಡಕೋಳ, ಧರೆಪ್ಪ ಮಂಟೂರ, ಪಿಡಿಒ ಎಸ್.ಎ. ಸಾರವಾಣ ಹಾಗೂ ಗ್ರಾಪಂ ಸದಸ್ಯರು ಇದ್ದರು. ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸದಾಶಿವ ಪಕಾಲಿ ಸ್ವಾಗತಿಸಿದರು. ಮುತ್ತಪ್ಪ ಸೊನ್ನದ ನಿರೂಪಿಸಿ, ವಂದಿಸಿದರು.