ಜಿಲ್ಲೆ

ಶಿಕ್ಷಕರ ಆಶೋತ್ತರಗಳಿಗೆ ಸ್ಪಂದಿಸಲಿ

ಹಾಸನ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಚೈತ್ರಾ ನಾಯಕರಹಳ್ಳಿ ಅವರಿಗೆ ಶನಿವಾರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಜಿಲ್ಲಾ ವಚನ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಬಳಗ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಆತ್ಮೀಯರ ಬಳಗ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸಮಾರಂಭ ನಡೆಯಿತು. ಚೈತ್ರಾ ನಾಯಕರಹಳ್ಳಿ ಅವರ ಹಿತೈಷಿಗಳು, ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶುಭಾಶಯ ಕೋರಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎನ್.ಬಲರಾಮ್ ಮಾತನಾಡಿ, ಉತ್ತಮ ಸಂಘಟಕಿ, ಮಕ್ಕಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಚೈತ್ರಾ ಅವರು ಸಂಘದ ಬೆಳವಣಿಗೆಗೆ ಶಕ್ತಿಮೀರಿ ಶ್ರಮಿಸಲಿ. ಶಿಕ್ಷಕರ ಆಶೋತ್ತರಗಳಿಗೆ ಸ್ಪಂದಿಸುವ ಜತೆಗೆ ಮಕ್ಕಳ ಕಲಿಕೆಗೆ ಆದ್ಯತೆ ನೀಡಲೆಂದು ಹಾರೈಸಿದರು.

ಚೈತ್ರಾ ಅವರ ತಂದೆಯು ಶಿಕ್ಷಕರಾಗಿದ್ದರು. ಸಂಘಟನೆ, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಚಾತುರ್ಯ ಹಾಗೂ ಹುದ್ದೆ ನಿಭಾಯಿಸುವ ಸಾಮರ್ಥ್ಯ ಚೈತ್ರಾ ಅವರಿಗಿದೆ. ಉತ್ತಮ ಬೋಧನೆ ಮೂಲಕ ಮಕ್ಕಳ ಪ್ರೀತಿ ಗಳಿಸಿದ್ದಾರೆ. ಅವರು ಶಿಕ್ಷಕರು-ಕಚೇರಿ ನಡುವೆ ಸೌಹಾರ್ದತೆಯಿಂದ ಇರುತ್ತಾರೆ. ಸಂಘದ ಬೆಳವಣಿಗೆ ದೃಷ್ಟಿಯಿಂದ ನಾವು ಅವರಿಗೆ ಸಹಕಾರ ನೀಡುತ್ತೇವೆ ಎಂದರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಎಚ್.ಬಿ.ಮದನಗೌಡ ಮಾತನಾಡಿ, ವೃತ್ತಿಯಲ್ಲಿ ಶಿಕ್ಷಕರಾಗಿ ವಚನ ಸಾಹಿತ್ಯ ಪರಿಷತ್ ಅನ್ನು ಬೆಳೆಸಿದ್ದು ಚೈತ್ರಾ ಮಂಜೇಗೌಡರ ಹೆಗ್ಗಳಿಕೆ. ಈ ಹುದ್ದೆಯಲ್ಲಿ ಅವರು ಉತ್ತುಂಗಕ್ಕೆ ಏರಲಿ. ಶಿಕ್ಷಕರ ಸಮಸ್ಯೆಗೆ ಸ್ಪಂದಿಸಲಿ. ಅವರ ಬದುಕು ಉಜ್ವಲವಾಗಲಿ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮಹಿಳೆ ಚೈತ್ರಾ ನಾಯಕರಹಳ್ಳಿ. ಸಂಘಟನಾತ್ಮಕವಾಗಿ ಪ್ರಬಲವಾಗಿರುವ ಅವರು ಶಿಕ್ಷಕರ ದು:ಖ ದುಮ್ಮಾನಗಳಿಗೆ ಕಿವಿಯಾಗಿದ್ದಾರೆ. ಶಿಕ್ಷಕರ ಸಂಘದ ಸದಸ್ಯರ ಪ್ರೀತಿಯಿಂದ ಹುದ್ದೆ ಅಲಂಕರಿಸಿದ್ದಾರೆಂದರು.

ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಅಣ್ಣಪ್ಪ ಮಾತನಾಡಿ, ಈ ಹುದ್ದೆ ಪಡೆಯಲು ಚೈತ್ರಾ ಸಾಕಷ್ಟು ಹೋರಾಟ ಮಾಡಿದ್ದಾರೆ. ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಿದ್ದಾರೆ. ಅದನ್ನು ಹಿಮ್ಮೆಟ್ಟಿಸುವ ಧೈರ್ಯವನ್ನು ತೋರಿದ್ದಾರೆ ಎಂದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಕೃಷ್ಣೇಗೌಡ, ಜಿಲ್ಲಾ ಮತ್ತು ಪ್ರಾದೇಶಿಕ ಸಣ್ಣ ಪತ್ರಿಕೆಗಳ ಒಕ್ಕೂಟ ಅಧ್ಯಕ್ಷ ಜೆ.ಆರ್. ಕೆಂಚೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಬಸವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ರಂಗನಾಥ್, ಜನಪ್ರಿಯ ಆಸ್ಪತ್ರೆ ಮುಖ್ಯಸ್ಥ ಡಾ. ಅಬ್ದುಲ್ ಬಷೀರ್, ಭಾರತ ಸೇವಾದಳ ಜಿಲ್ಲಾ ಸಂಘಟಕಿ ವಿ.ಎಸ್. ರಾಣಿ, ಜಯಲಕ್ಷ್ಮೀ ರಾಜಣ್ಣ, ರಾಜೇಂದ್ರ, ದ್ಯಾವೇಗೌಡ, ಡಾ.ದಿನೇಶ್, ಕಟ್ಟಾಯ ಶಿವಕುಮಾರ್ ಇತರರಿದ್ದರು.