ಬಾಗಲಕೋಟೆ ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಶನಿವಾರ ಲೋಕಾಯುಕ್ತ ಬಿ.ಎಸ್. ಪಾಟೀಲ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕುಂದು ಕೊರತೆಗಳ ಸಭೆ ಜರುಗಿತು. ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್, ಸಿಇಒ ಟಿ. ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಹಕ್ಕರಕಿ, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ ಇದ್ದರು. 
ಜಿಲ್ಲೆ

ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿ : ಲೋಕಾಯುಕ್ತ ಬಿ.ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚನೆ

ಬಾಗಲಕೋಟೆ : ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳ ಆರೋಗ್ಯಾಧಿಕಾರಿಗಳು ಜನ ಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಎಲ್ಲ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಲೋಕಾಯುಕ್ತ ಬಿ.ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಶನಿವಾರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಕುಂದು ಕೊರತೆಗಳ ಸಭೆ ನಡೆಸಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆ ಇದ್ದರೂ ಪ್ರಯೋಜನಕ್ಕೆ ಬರಲಿಲ್ಲ ಎಂಬ ಕೂಗು ಸಾರ್ವಜನಿಕರಿಂದ ಬಾರದಂತೆ ಕಾರ್ಯನಿರ್ವಹಿಸಬೇಕು. ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ, ಉಪಕರಣ ಸೇರಿದಂತೆ ಯಾವುದೇ ವ್ಯವಸ್ಥೆ ಕೊರತೆಯಾಗದಂತೆ ನೋಡಿಕೊಳ್ಳುವುದು ಜಿಲ್ಲಾ ಆರೋಗ್ಯ ಅಧಿಕಾರಿ ಜವಾಬ್ದಾರಿಯಾಗಿದೆ ಎಂದರು.

ಸಾರ್ವಜನಿಕರು ದೂರು ಹಿನ್ನೆಲೆಯಲ್ಲಿ ಇಳಕಲ್ಲ, ಹುನಗುಂದ ಸಾರ್ವಜನಿಕರ ಆಸ್ಪತ್ರೆಗಳಿಗೆ ಭೇಟಿ ನೀಡಬೇಕಾಯಿತು. ಸುಸಜ್ಜಿತ ಆಸ್ಪತ್ರೆ ಇದ್ದರೂ ಈವರೆಗೆ ಒಂದು ಹೆರಿಗೆ ಆಗಿಲ್ಲ ಎಂದರೆ ಹೇಗೆ? ಮೇಲ್ನೋಟಕ್ಕೆ ಹೆರಿಗೆ ಕಡಿಮೆ ಇವೆ ಅಂತ ವರದಿ ನೀಡುವುದು ತರವಲ್ಲ. ಬಡವರು, ಕಾರ್ಮಿಕರಿಗೆ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಖಾಸಗಿ ಆಸ್ಪತ್ರೆಗಳೇ ಮುಖ್ಯವಾಗಿದ್ದರೆ ಸರ್ಕಾರಿ ಆಸ್ಪತ್ರೆಗಳನ್ನು ಏಕೆ ಸ್ಥಾಪಿಸಬೇಕು? ಎಂದು ಗರಂ ಆಗಿ ಪ್ರಶ್ನಿಸಿದರು.

ಇನ್ನು ಜಿಲ್ಲಾಧಿಕಾರಿ ಕೂಡ ನಿಯಮಿತ ಸಮಯದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು. ಪರಿಸ್ಥಿತಿ ಅವಲೋಕನ ನಡೆಸಬೇಕು. ಔಷಧ ವಿತರಣೆ, ನರ್ಸಿಂಗ್ ಸಿಬ್ಬಂದಿ, ಯಂತ್ರೋಪಕರಣಗಳ ಇರುವ ಕುರಿತು ಪರಿಶೀಲಿಸಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ 65 ಕೆರೆಗಳನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗೆ ಆದರೆ ಹೇಗೆ? ನಮ್ಮ ಮುಂದಿನ ಪೀಳಿಗೆ ಜನರಿಗೆ ಕೆರೆ, ಕಟ್ಟೆ, ಬಾವಿ ಸೇರಿದಂತೆ ಜಲ ಸಂಪನ್ಮೂಲ ಉಳಿಸಿಕೊಡುವ ಜವಾಬ್ದಾರಿ ನಮ್ಮ ಮೇಲೆ ಇದೆ. ಕೆರೆ ಒತ್ತುವರಿ ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಪ್ರಭಾವಿ ವ್ಯಕ್ತಿಯಾಗಿದ್ದರೂ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಆಯಾ ತಾಲೂಕಿನ ತಹಸೀಲ್ದಾರ್‌ಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

ಸ್ವಚ್ಛ ಭಾರತ ಪರಿಕಲ್ಪನೆಯಡಿಯಲ್ಲಿ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆಗೊಳಿಸಿದ್ದರೂ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶಗಳು ಬಯಲು ಶೌಚ ಮುಕ್ತ ಗ್ರಾಮಗಳಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜನರೊಂದಿಗೆ ಬೆರೆತು, ಜನರ ನಾಡಿ ಮಿಡಿತ ತಿಳಿದು ಮನ ಒಲಿಸುವ ಪ್ರಯತ್ನ ಮಾಡಬೇಕು. ಬಯಲು ಶೌಚ ಪದ್ಧತಿಗೆ ಮುಕ್ತಿ ಹಾಡಬೇಕು. ಜಿಲ್ಲೆಯನ್ನು ಅಭಿವೃದ್ಧಿಗೊಳಿಸುವುದು ಅಧಿಕಾರಿಗಳ ಆದ್ಯತೆ ಕರ್ತವ್ಯ ಎಂದರು.

ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಮಾತನಾಡಿ, ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ಮುಂಬರುವ 2 ತಿಂಗಳಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಸಣ್ಣ ನೀರಾವರಿ ಇಲಾಖೆಗೆ ಕೆರೆಯ ಸುತ್ತ ಸಂರಕ್ಷಣಾ ಟ್ರೆಂಚ್ ನಿರ್ಮಿಸುವಂತೆ ಸೂಚಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಹಕ್ಕರಕಿ, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಜಿಲ್ಲೆಯಲ್ಲಿ ಈ ಹಿಂದಿನ ಸ್ಥಿತಿ ಗಮನಿಸಿದರೆ ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಸುಧಾರಣೆಯಾಗಿದೆ. ಅಲ್ಲಲ್ಲಿ ಲೋಪದೋಷಗಳು ಇರುವುದು ಗಮನಕ್ಕೆ ಬಂದಿದೆ. ಮೂಲ ಸೌಕರ್ಯ, ವೈದ್ಯಕೀಯ ಸಿಬ್ಬಂದಿ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗುವುದು. - ಟಿ. ಭೂಬಾಲನ್ ಜಿ.ಪಂ., ಸಿಇಒ