ಜಿಲ್ಲೆ

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ

ವಿವೇಕಾನಂದ ದಾಸನಕೊಪ್ಪ

ರಟ್ಟಿಹಳ್ಳಿ: ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ಯಾವುದೇ ನೆಪ ಹೇಳದೇ ಸಾರ್ವಜನಿಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು ಎಂದು ಲೋಕಾಯುಕ್ತ ಡಿವೈಎಸ್​ಪಿ ಮಧುಸೂದನ್ ಎನ್. ಸೂಚಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಹಾವೇರಿ ಜಿಲ್ಲಾ ಲೋಕಾಯುಕ್ತ ಕಚೇರಿ ಘಟಕದ ವತಿಯಿಂದ ಬುಧವಾರ ಆಯೋಜಿಸಿದ್ದ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಮತ್ತು ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಮೂಲಕಸೌಕರ್ಯಗಳ ಸಮಸ್ಯೆಗಳಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಗುರುತಿನ ಚೀಟಿ ಧರಿಸಬೇಕು. ಸಕಾರಿ ಕಚೇರಿಗಳಲ್ಲಿ ಲೋಕಾಯುಕ್ತರ ಮಾಹಿತಿ ಅಳವಡಿಸಬೇಕು ಎಂದರು.

ವಿವಿಧೆಡೆ ಲೋಕಾಯುಕ್ತ ಹೆಸರಿನಲ್ಲಿ ಅಧಿಕಾರಿಗಳಿಗೆ ಬೆದರಿಕೆ ಹಾಕುವುದು ಮತ್ತು ಹಣದ ಬೇಡಿಕೆ, ಅಪರಿಚಿತ ಸ್ಥಳಗಳಿಗೆ ಆಗಮಿಸುವಂತೆ ಹೇಳುವುದು ಕಂಡುಬಂದಿದೆ ಮತ್ತು ಕೆಲವೆಡೆ ಪ್ರಕರಣಗಳು ದಾಖಲಾಗಿವೆ. ಯಾವುದೇ ಇಲಾಖೆ ಅಧಿಕಾರಿಗಳು ಈ ಬಗ್ಗೆ ಮೋಸ ಹೋಗದೆ, ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಲೋಕಾಯುಕ್ತ ಕಚೇರಿಗೆ ಬರಬೇಕು ಎಂದರು.

ವಿವಿಧ ಅಹವಾಲು ಸಲ್ಲಿಕೆ: ತೋಟಗಂಟಿ ಗ್ರಾಮದ ಆನಂದ ಪಾಟೀಲ, ರಾಮಚಂದ್ರಪ್ಪ ಓಲೇಕಾರ, ಲಲಿತವ್ವ ನಾಯಕ ಹಾಗು ಗ್ರಾಮಸ್ಥರು ಮನವಿ ಸಲ್ಲಿಸಿ, ನಮ್ಮ ಗ್ರಾಮದಲ್ಲಿ ಇರುವ ಗಟಾರಗಳಿಗೆ ಕೆಲವು ಖಾಸಗಿ ವ್ಯಕ್ತಿಗಳು ಮಣ್ಣು ಹಾಕಿ ಮುಚ್ಚಿರುವುದರಿಂದ ತ್ಯಾಜ್ಯ ಸಂಗ್ರಹವಾಗಿ ದುರ್ವಾಸನೆ ಬೀರುತ್ತಿದೆ. ದಯಮಾಡಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಆಗ ಲೋಕಾಯುಕ್ತ ಡಿವೈಎಸ್​ಪಿ ಮಧುಸೂದನ್ ಎನ್. ಅವರು ತಹಸೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ತಾಲೂಕು ಕೇಂದ್ರದಲ್ಲಿ ಎಸ್ಸಿ, ಎಸ್ಟಿ ಮತ್ತು ಬಿಸಿಎಂ ಪೋಸ್ಟ್ ಮೆಟ್ರಿಕ್ ವಸತಿ ನಿಲಯಗಳ ಸೌಲಭ್ಯ ಒದಗಿಸುವಂತೆ ಸ್ಥಳೀಯ ವಿಶ್ವ ಹಿಂದು ಪರಿಷತ್ ವಿದ್ಯಾರ್ಥಿಗಳ ಒಕ್ಕೂಟದಿಂದ ಮನವಿ ಮಾಡಲಾಯಿತು. ಪಟ್ಟಣದ ನೋಬಲ್ ಶಾಲೆ ಹಿಂಭಾಗದಲ್ಲಿ ದೊಡ್ಡದಾದ ಗುಂಡಿ ಇದ್ದು, ಇಲ್ಲಿ ಜಾನುವಾರುಗಳು ಬೀಳುತ್ತಿವೆ. ನೀರು ನಿಂತು ದುರ್ವಾಸನೆ ಬೀರುತ್ತಿದೆ. ಈ ಗುಂಡಿ ಮುಚ್ಚಬೇಕು, ಗಟಾರಗಳ ಸ್ವಚ್ಛತೆಗೆ ಒತ್ತು ನೀಡಬೇಕೆಂದು ಸ್ಥಳೀಯ ನಿವಾಸಿ ಶಿವಾನಂದ ಮಡಿವಾಳರ ಮನವಿ ಮಾಡಿದರು. ತಾಲೂಕಿನ ಮೇದೂರು ಗ್ರಾಮದ ವ್ಯಾಪ್ತಿಯಲ್ಲಿ ದನದ ಕೊಟ್ಟಿಗೆಗಳನ್ನು ನಿರ್ಮಾಣ ಮಾಡಿರುವ ಫಲಾನುಭವಿಗಳಿಗೆ ಅನುದಾನ ಮಂಜೂರು ಮಾಡುವುದು ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಅಹವಾಲು ಸಲ್ಲಿಸಿದರು.

ಲೋಕಾಯುಕ್ತ ಅಧಿಕಾರಿ ಮಂಜುನಾಥ ಪಂಡಿತ್, ತಹಸೀಲ್ದಾರ್ ಶ್ವೇತಾ ಅಮರವಾತಿ, ತಾಪಂ ಇಒ ರವಿ ಎನ್., ಸಿ.ಎಂ. ರ್ಬಾ, ಪಿಎಸ್​ಐ ಕೃಷ್ಣಪ್ಪ ತೋಪಿನ, ಪಿಡಿಒಗಳು, ಕೃಷಿ ಅಧಿಕಾರಿಗಳು, ಹೆಸ್ಕಾಂ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.