ಕುರುಗೋಡು ತಾಲೂಕು ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ ಸಭೆ ನಡೆಯಿತು. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸುರೇಶ್ ಎಂ ಬಾವಿಮನಿ, ತಹಸೀಲ್ದಾರ್ ನರಸಪ್ಪ, ಗ್ರೇಡ್-2 ತಹಸೀಲ್ದಾರ್ ಮಲ್ಲೇಶಪ್ಪ, ತಾಪಂ ಇಒ ನಿರ್ಮಲಾ, ಪುರಸಭೆ ಮುಖ್ಯಾಧಿಕಾರಿ ಹರ್ಷವರ್ಧನ್ ಇತರರಿದ್ದರು. 
ಜಿಲ್ಲೆ

ಜನರ ಸಮಸ್ಯೆಗಳಿಗೆ ಸ್ಪಂದಿಸಿ

ಕುರುಗೋಡು: ತಾಲೂಕು ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಸುರೇಶ್ ಬಾವಿಮನಿ ಅಧ್ಯಕ್ಷತೆಯಲ್ಲಿ ಬುಧವಾರ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆ ನಡೆಯಿತು.

ಗ್ರಾಮಸ್ಥ ರಾಜಶೇಖರ್ ಮಾತನಾಡಿ, ಕುರುಗೋಡಿನ ಸರ್ವೇ ನಂ. 91ಇ ನಲ್ಲಿರುವ ನಿವೇಶನಕ್ಕೆ ಎ ಮತ್ತು ಬಿ ಖಾತಾ ನೀಡುವಂತೆ ಪುರಸಭೆ ಅಧಿಕಾರಿಗಳಿಗೆ ಕೇಳಿದರೆ ಅವರು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹಿಂಬರಹ ನೀಡಿದ್ದಾರೆ. ಗೆಣಿಕೆಹಾಳು ಪಿಡಿಒ ಕೂಡ ಹಿಂಬರಹ ನೀಡಿದ್ದಾರೆ. ಆದ್ದರಿಂದ ನಾವು ಯಾರ ಬಳಿ ಹೋಗಬೇಕು ಎಂದು ತಿಳಿಯುತ್ತಿಲ್ಲ ಎಂದು ಅಲವತ್ತುಕೊಂಡರು.

ಸೆರಗು ಗ್ರಾಮಸ್ಥ ತಿಪ್ಪೇರುದ್ರಗೌಡ ಮಾತನಾಡಿ, ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣದ ಬದಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಮಾತ್ರ ನಿರ್ಮಿಸಿದ್ದಾರೆ. ಇದರಿಂದ ಗ್ರಾಮದ ಜನರು ಪೈಪ್ ಮೂಲಕ ಚರಂಡಿ ನೀರನ್ನು ಎಲ್‌ಎಲ್ ಕಾಲುವೆಗೆ ಹರಿಯುವಂತೆ ಸಂಪರ್ಕ ಮಾಡಿಕೊಂಡಿದ್ದಾರೆ. ಹೀಗಾಗಿ ಚರಂಡಿ ನೀರು ಸಂಗ್ರಹವಾಗಿ ಹುಳುಗಳ ಉಪಟಳದ ಜತೆಗೆ ದುರ್ವಾಸನೆ ಹೆಚ್ಚಿದೆ. ಮನೆಯಲ್ಲಿ ನೆಮ್ಮದಿಯಾಗಿ ಇರಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ವರ್ಷದಿಂದ ಕಚೇರಿಗೆ ಅಲೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಅಧಿಕಾರಿಗಳ ಕರ್ತವ್ಯವಾಗಿದ್ದು, ಕಾಲಹರಣ ಮಾಡದೆ ಸಕಾಲಕ್ಕೆ ಅವರ ದೂರುಗಳಿಗೆ ಪರಿಹಾರ ನೀಡಬೇಕು ಎಂದು ಲೋಕಾಯುಕ್ತ ಅಧಿಕಾರಿಗಳು ತಾಪಂ ಇಒ ನಿರ್ಮಲಾ ಹಾಗೂ ಪುರಸಭೆ ಮುಖ್ಯಾಧಿಕಾರಿ ಹರ್ಷವರ್ಧನಗೆ ಸೂಚಿಸಿದರು. ತಹಸೀಲ್ದಾರ್ ನರಸಪ್ಪ, ಗ್ರೇಡ್-2 ತಹಸೀಲ್ದಾರ್ ಮಲ್ಲೇಶಪ್ಪ, ಶಿರಸ್ತೇದಾರ್ ವಿಜಯ್ ಕುಮಾರ್ ಇತರರಿದ್ದರು.