ಜಿಲ್ಲೆ

ಜನರ ಸಮಸ್ಯೆಗಳಿಗೆ ಸ್ಪಂದಿಸಿ

ವೀರೇಶ ಸೌದ್ರಿ

ಶಿಗ್ಗಾಂವಿ(ಗ್ರಾ): ಜನರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರ ಕಲ್ಪಿಸುವಂತೆ ಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು ಸೂಚಿಸುವ ಕೆಲಸಗಳನ್ನು ಅಧಿಕಾರಿಗಳು ನಿಷ್ಠೆಯಿಂದ ನಿರ್ವಹಿಸಬೇಕು. ನಿರ್ಲಕ್ಷೃ ತೋರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕ ಯಾಸೀರಖಾನ್ ಪಠಾಣ ಹೇಳಿದರು.

ಶಿಗ್ಗಾಂವಿ ಪಟ್ಟಣದ ತಾಪಂ ಆಡಳಿತ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

ವಾರದ ಹಿಂದೆಯೇ ಎಲ್ಲ ಅಧಿಕಾರಿಗಳಿಗೆ ಸೂಕ್ತ ದಾಖಲೆಗಳನ್ನು ತೆಗೆದುಕೊಂಡು ಸಭೆಗೆ ಬರುವಂತೆ ಸೂಚಿಸಲಾಗಿತ್ತು. ಆದರೆ, ಕೆಲವರು ಅಪೂರ್ಣವಾದ ಮಾಹಿತಿ ಜತೆಗೆ ಸಭೆಗೆ ಬಂದಿದ್ದೀರಿ, ನಿಮಗೆ ಸರ್ಕಾರ ಏನು ಕಡಿಮೆ ಮಾಡಿದೆ. ಸಕಾಲಕ್ಕೆ ವೇತನ, ತಿರುಗಾಡಲು ಸರ್ಕಾರಿ ವಾಹನ ಕೊಟ್ಟರೂ ಕಚೇರಿಯಲ್ಲಿ ಕುಳಿತು ಕಾಲ ಹರಣ ಮಾಡುತ್ತೀದ್ದೀರಿ ಎಂದು ಸೂಕ್ತ ದಾಖಲೆ ಒದಗಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳು ರಾಜಕಾರಣಿಗಳಾಗಿದ್ದಾರೆ. ಕೆಲವರು ಎಲ್‌ಐಸಿ ಏಜಂಟರಾಗಿದ್ದಾರೆ. ಶಾಲೆಗಳಲ್ಲಿ ಗುಂಪು ಕಟ್ಟಿಕೊಂಡು ರಾಜಿ ಪಂಚಾಯಿತಿ, ಮಧ್ಯಸ್ಥಿಕೆ ಮಾಡುತ್ತಾರೆ. ಸುಮಾರು 50 ಸಾವಿರಕ್ಕಿಂತಲೂ ಹೆಚ್ಚು ವೇತನ ಪಡೆಯುವ ಇವರು ತಾಲೂಕಿನ ಶೈಕ್ಷಣಿಕ ಗುಣಮಟ್ಟ ಸುಧಾರಿಸುವ ಬದಲು ರಾಜಕಾರಣಿಗಳಾಗಿದ್ದಾರೆ. ಶಿಕ್ಷಣ ಇಲಾಖೆ ಸರ್ಕಾರದಿಂದ ಸಾಕಷ್ಟು ಸವಲತ್ತು ಪಡೆದುಕೊಂಡರೂ ಶೈಕ್ಷಣಿಕವಾಗಿ ತಾಲೂಕಿಗೆ ಹಿನ್ನಡೆಯಾಗಿದೆ. ಗುರು ದೇವೋ ಭವ, ಎನ್ನುತ್ತೇವೆ ಆದರೆ, ಇಂಥವರು ದೇವರಾಗುವುದು ಯಾವಾಗ ಎಂದು ಬಿಇಒ ಎಂ.ಬಿ.ಅಂಬಿಗೇರ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಬಿಇಒ ಶಾಸಕರ ಉಪಸ್ಥಿತಿಯಲ್ಲಿ ಶೀಘ್ರ ತಾಲೂಕಿನ ಶಿಕ್ಷಕರ ಸಭೆ ಕರೆಯಲಾಗುವುದು ಎಂದರು.

ಸರ್ಕಾರಿ ಶಾಲೆಗಳಲ್ಲಿರುವ ಶೌಚಗೃಹಗಳನ್ನು ಸ್ವಚ್ಛ ಮಾಡಲು ಮಕ್ಕಳನ್ನು ಬಳಸಬೇಡಿ. ತಾಲೂಕಿನ ಎಲ್ಲ ಶಾಲೆಗಳ ಶೌಚಗೃಹಗಳನ್ನು ಆಯಾ ಗ್ರಾ.ಪಂ ಕಾರ್ಮಿಕರು ಸ್ವಚ್ಛಗೊಳಿಸಲು ಪಿಡಿಒಗಳಿಗೆ ಸೂಚಿಸುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.

ಬಾಡಿಗೆ ಮನೆಯಲ್ಲಿ ಇರುವ 49 ಅಂಗನವಾಡಿಗಳಿಗೆ ಬಿಇಒ, ತಹಸೀಲ್ದಾರ್, ಪುರಸಭೆ ಮುಖ್ಯಾಧಿಕಾರಿ ಮತ್ತು ತಹಸೀಲ್ದಾರ್ ನೇತೃತ್ವದಲ್ಲಿ ತಂಡ ಮಾಡಿಕೊಂಡು ತಾಲೂಕಿನಲ್ಲಿರುವ ಸರ್ಕಾರಿ ಖಾಲಿ ಜಾಗಗಳನ್ನು ಗುರುತಿಸುವಂತೆ ಸೂಚಿಸಿದರು. ಶಾಲೆಗಳ ಪಕ್ಕದಲ್ಲಿರುವ ವಿದ್ಯುತ್ ವಾಹಕಗಳನ್ನು ಸ್ಥಳಾಂತರಗೊಳಿಸಬೇಕು. ಇಲ್ಲವೆ ಅವುಗಳ ಸುತ್ತ ತಂತಿ ಬೇಲಿ ನಿರ್ಮಿಸಬೇಕು. ಇತ್ತೀಚೆಗೆ ರೈತರ ಬೋರವೆಲ್‌ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, 10,25,65 ಸಾಮರ್ಥ್ಯದ ಟ್ರಾನ್ಸ್‌ಪರ‌್ಮಗಳನ್ನು ಹೆಚ್ಚಿಸಿ ರೈತರಿಗೆ ವಿದ್ಯುತ್ ಪೂರೈಕೆ ಮಾಡುವಂತೆ ಹೆಸ್ಕಾಂ ಅಧಿಕಾರಿ ಯಲ್ಲಪ್ಪ ನೀರಲಗಿಗೆ ಸೂಚಿಸಿದರು.

ಈ ಹಿಂದಿನ ಕೃಷಿ ಅಧಿಕಾರಿಗಳು ಗೊಬ್ಬರ ಮಾರಾಟಗಾರರ ಜತೆ ಹೊಂದಾಣಿಕೆ ಮಾಡಿಕೊಂಡು ಕೃತಕ ಗೊಬ್ಬರದ ಅಭಾವ ಸೃಷ್ಟಿಸುತ್ತಿದ್ದರು. ಈಗ ನೀವು ಹೊಸದಾಗಿ ಬಂದಿದ್ದೀರಿ ಹೊಂದಾಣಿಕೆ ಮಾಡಿಕೊಳ್ಳದೆ ರೈತರಿಗೆ ಸಕಾಲಕ್ಕೆ ಬೀಜ ಗೊಬ್ಬರ ಒದಗಿಸಲು ಕ್ರಮ ವಹಿಸಬೇಕು. ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಕೃಷಿ ಸಖಿಯರನ್ನು ತೆಗೆದು ಹಾಕಿ ಹೊಸದಾಗಿ ನೇಮಕ ಮಾಡಿಕೊಳ್ಳುವಂತೆ ಕೃಷಿ ಅಧಿಕಾರಿ ಕೊಟ್ರೇಶ ಅವರಿಗೆ ಸೂಚನೆ ನೀಡಿದರು.

ತೋಟಗಾರಿಕೆ, ಅರಣ್ಯ, ಆರೋಗ್ಯ, ಲೋಕೋಪಯೋಗಿ, ಪಶು ಸಂಗೋಪಣೆ, ಕುಡಿಯುವ ನೀರು, ಪೊಲೀಸ, ಅಬಕಾರಿ, ಅಕ್ಷರ ದಾಸೋಹ ಸೇರಿದಂತೆ ಹಲವು ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಸವಣೂರ ಉಪವಿಭಾಗಾಧಿಕಾರಿ ಮಹಮ್ಮದ ಖೀಝರ್, ತಹಸೀಲ್ದಾರ್ ಗಣೇಶ ಸವಣೂರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕುಮಾರ ಮಣ್ಣವಡ್ಡರ, ಕೃಷಿ ಇಲಾಖೆ ಜಂಟಿ ಅಧಿಕಾರಿ ಮಲ್ಲಿಕಾರ್ಜುನ, ಶಿವಾನಂದ ಸಣ್ಣಕ್ಕಿ, ಆರ್‌ಎಫ್‌ಒ ರವಿ ಪುರಾಣಿಕಮಠ, ಕಿಶೋರ ನಾಯ್ಕ, ಗುಡ್ಡಪ್ಪ ಜಲದಿ, ಎಸ್.ಎಫ್. ಮಣಕಟ್ಟಿ ಉಪಸ್ಥಿತರಿದ್ದರು.