ಸರಗೂರು ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. 
ಜಿಲ್ಲೆ

ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ

ವಸಂತಕುಮಾರ್ ಬಿ

ಸರಗೂರು: ಸಾರ್ವಜನಿಕರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಿ ಶೀಘ್ರ ಪರಿಹಾರ ಒದಗಿಸಬೇಕು ಎಂದು ತಾಲೂಕು ಆಡಳಿತದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಾಕೀತು ಮಾಡಿದರು.

ಪಟ್ಟಣದ ತಾಲೂಕು ಕಚೇರಿಗೆ ಗುರುವಾರ ಭೇಟಿ ನೀಡಿ ತಾಲೂಕು ಆಡಳಿತದ ಕಾರ್ಯಗಳ ಪ್ರಗತಿ ಪರಿಶೀಲಿಸಿ ನಂತರ ಮಾತನಾಡಿದರು.
ಇದೇ ವೇಳೆ ತಾಲೂಕಿನ ವಿವಿಧ ಗ್ರಾಮಗಳ ಜನರು ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ನಂತರ ಆಧಾರ್ ನೋಂದಣಿ, ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಣೆ, ಸಾಗುವಳಿ ವಿತರಣೆ, ಪೌತಿ ಖಾತೆ ಮಾಡುವುದು ಸೇರಿದಂತೆ ಇನ್ನಿತರ ಕಡತಗಳ ವಿಲೇವಾರಿ ಪ್ರಕ್ರಿಯೆಗಳನ್ನು ಪರಿಶೀಲಿಸಿ, ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

ತಾಲೂಕು ಕಚೇರಿಗೆ ಆಗಮಿಸುತ್ತಿದ್ದಂತೆ ಮುಂಭಾಗದಲ್ಲಿ ನೆರೆದಿದ್ದ ಸಾರ್ವಜನಿಕರಿಂದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಹವಾಲು ಸ್ವೀಕರಿಸಿದರು. ಗ್ರಾಮ ಲೆಕ್ಕಿಗರು ಮನೆ-ಮನೆಗೆ ತೆರಳಿ ಮೂಲ ದಾಖಲೆಗಳನ್ನು ಪರಿಶೀಲಿಸಿ, ಮನೆ ಇಲ್ಲದಿರುವವರ ಪಟ್ಟಿ ಮಾಡಿಕೊಂಡರೆ ಅನುಕೂಲವಾಗಲಿದೆ. ಗ್ರಾಮಲೆಕ್ಕಿಗರು ರೈತರಿಂದ ಹಣವನ್ನು ವಸೂಲಿ ಮಾಡಿದರೆ ಅಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಾಗರೆ ದೇವಸ್ಥಾನದಲ್ಲಿ ಪೂಜೆಗೆ ಅವಕಾಶ: ಸಾಗರೆ ಗ್ರಾಮದಲ್ಲಿನ ಮಾರಮ್ಮನ ದೇವಸ್ಥಾನಕ್ಕೆ ತಾಲೂಕು ಆಡಳಿತ ಬೀಗ ಹಾಕಿದ್ದು, ದೇವಸ್ಥಾನದ ಬಾಗಿಲು ತೆರೆದು ಪೂಜೆ ಸಲ್ಲಿಸಲು ಅನುಕೂಲ ಮಾಡಿಕೊಡಬೇಕು. ಎಸ್ಸಿ-ಎಸ್ಟಿ ನಡುವೆ ನಡೆದ ಗಲಾಟೆ ಉಂಟಾಗಿದ್ದು, ಈ ಸಂಬಂಧ ಗ್ರಾಮದ ವಿವಿಧ ಸಮುದಾಯದ ಮುಖಂಡರು ದೇವಸ್ಥಾನದ ಹತ್ತಿರ ಶಾಂತಿ ಸಭೆ ನಡೆಸಲು ತೀರ್ಮಾನಿಸಿದ್ದರು. ಇದಕ್ಕಾಗಿ ದಿನಾಂಕವನ್ನೂ ನಿಗದಿಗೊಳಿಸಿದ್ದರು. ಆದರೆ ಅಧಿಕಾರಿಗಳು ಏಕಾಏಕಿ ದಿನಾಂಕ ಮುಂದೂಡಿಕೊಂಡು ಹೋಗುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಶೀಘ್ರದಲ್ಲೇ ಶಾಂತಿ ಸಭೆ ನಡೆಸಿ, ದೇವಸ್ಥಾನದ ಬಾಗಿಲು ತೆರೆಯಲು ಅವಕಾಶ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಲವ ವರ್ಷಗಳಿಂದಿರುವವರ ವರ್ಗ: ಅಲ್ಲದೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆಯಲ್ಲಿ ಒಂದೆ ಕಡೆ 10 ರಿಂದ 15 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗುವುದ. ಅಂತಹ ಅಧಿಕಾರಿಗಳ ಪಟ್ಟಿ ಕೊಡಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು. ತಹಸೀಲ್ದಾರ್ ರುಕಿಯಾಬೇಗಂ, ತಹಸೀಲ್ದಾರ್ ಶ್ರೀನಿವಾಸ್, ಗ್ರೇಟ್ 2 ತಹಸೀಲ್ದಾರ್ ಪರಶಿವಮೂರ್ತಿ, ಉಪ ತಹಸೀಲ್ದಾರ್‌ಗಳಾದ ಸುನೀಲ್, ರವೀಂದ್ರ, ಆರ್‌ಐ ಮುಜೀಬ್, ಮುಖಂಡರಾದ ಹೆಗ್ಗುಡಿಲು ಸೋಮಣ್ಣ, ದೇವಲಾಪುರ ಪ್ರಭಾಕರ್, ವಿಷಕಂಠ, ಸರಗೂರು ಕೃಷ್ಣ, ಬರ‌್ವಾಳ್ ಮಹಾಲಿಂಗು, ಮುಳ್ಳೂರು ಮಂಜು, ಆಗತ್ತೂರು ಮಹದೇವನಾಯಕ ಮತ್ತಿತರರಿದ್ದರು.