ಜಿಲ್ಲೆ

ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಿ

ಬಸವರಾಜ ವೀರಪ್ಪ ಗರಗ

ಹಿರೇಕೆರೂರ: ಸಾರ್ವಜನಿಕರಿಂದ ದೂರುಗಳು ಬರದಂತೆ ಕೆಲಸ, ಕಾರ್ಯಗಳನ್ನು ಅಚ್ಚುಕಟ್ಟಾಗಿ ಮತ್ತು ತ್ವರಿತಗತಿಯಲ್ಲಿ ನಿರ್ವಹಿಸಬೇಕು ಮತ್ತು ಜನಸ್ನೇಹಿಯಾಗಿ ನಡೆದುಕೊಳ್ಳಬೇಕು ಎಂದು ಶಾಸಕ ಯು.ಬಿ. ಬಣಕಾರ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಹಿರೇಕೆರೂರ, ರಟ್ಟಿಹಳ್ಳಿ ತಾಪಂ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನರು ಯಾವುದೇ ಸಮಸ್ಯೆ ಹೇಳಿಕೊಂಡು ಬಂದರೂ ತಕ್ಷಣ ಸ್ಪಂದಿಸಿ ಇತ್ಯರ್ಥ ಪಡಿಸಬೇಕು ಎಂದರು.

ಡೆಂಘೆ ಪ್ರಕರಣದ ಕುರಿತು ಮಾಹಿತಿ ನಿಡಿದ ಆರೋಗ್ಯಾಧಿಕಾರಿ ಡಾ.ಜಡ್. ಮಕಾಂದಾರ, ತಾಲೂಕಿನಲ್ಲಿ 86 ಡೆಂಘೆ ಪ್ರಕರಣಗಳು ಪತ್ತೆಯಾಗಿವೆ. ಕುಡಪಲಿ, ಮಾಸೂರು, ಚಿಕ್ಕೇರೂರಿನಲ್ಲಿ ಹೆಚ್ಚು ಡೆಂಘೆ ಪ್ರಕರಣಗಳು ಪತ್ತೆಯಾಗುತ್ತಿವೆ. ಈಗಾಗಲೇ ಗ್ರಾಮಗಳಲ್ಲಿ ನಿಯಂತ್ರಣ ಮಾಡಲಾಗಿದ್ದು, ನಿತ್ಯ ರ್ಯಾಪಿಡ್ ತಪಾಸಣೆ ಆರಂಭಿಸಲಾಗಿದೆ ಎಂದರು.

ಪಟ್ಟಣ ಸೇರಿ ಎಲ್ಲ ಗ್ರಾಮಗಳಲ್ಲಿ ಸ್ವಚ್ಛತೆ, ಶುದ್ಧ ಕುಡಿಯುವ ನೀರು, ನೀರು ನಿಲ್ಲದ ಹಾಗೆ ಜಾಗೃತಿ ವಹಿಸಬೇಕು. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡುವುದು ಸೇರಿ ಎಲ್ಲ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಇದಕ್ಕೆ ಗ್ರಾಪಂ ಪಿಡಿಒ, ಸಿಬ್ಬಂದಿ ಸಹಕರಿಸಬೇಕು ಎಂದು ಶಾಸಕ ಬಣಕಾರ ಸೂಚಿಸಿದರು.

ತಹಸೀಲ್ದಾರ್ ಎಚ್. ಪ್ರಭಾಕರಗೌಡ ಮಾತನಾಡಿ, ತಾಲೂಕಿನಲ್ಲಿ ಯಾವುದೇ ಲೋಪ ದೋಷವಾಗದಂತೆ ರೇಷನ್ ವಿತರಣೆ ಮಾಡಲಾಗುತ್ತಿದೆ. 121 ಅನರ್ಹ ಬಿಪಿಎಲ್ ಕಾರ್ಡ್​ಗಳು ರದ್ದಾಗಿವೆ ಎಂದರು. ಇದಕ್ಕೆ ಶಾಸಕರು, ಅನರ್ಹಗೊಂಡ 121 ಕಾರ್ಡ್​ಗಳನ್ನು ಹೊಸದಾಗಿ ಅರ್ಜಿ ಹಾಕಿದ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕು ಎಂದು ಸೂಚನೆ ನೀಡಿದರು.

ಕೆಎಸ್​ಆರ್​ಟಿಸಿ ಡಿಪೋ ವ್ಯವಸ್ಥಾಪಕ ಮಂಜುನಾಥ ಹಡಪದ ಮಾಹಿತಿ ನೀಡಿ, ಶಕ್ತಿ ಯೋಜನೆ ಬಂದ ನಂತರ 1.12 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, 31.36 ಕೋಟಿ ರೂ. ಆದಾಯವಾಗಿದೆ. 4 ಹೊಸ ಮಾರ್ಗಗಳಿಗೆ ಬೇಡಿಕೆ ಇಡಲಾಗಿದೆ. ಹೊಸ್ ಬಸ್​ಗಳು ಬಂದ ಬಳಿಕ ಕೊರತೆ ಇದ್ದ ಕಡೆ ವ್ಯವಸ್ಥೆ ಮಾಡಲಾಗುವುದು ಎಂದರು.

ತಾಪಂ ಇಒ ಟಿ.ಆರ್. ಮಲ್ಲಾಡದ, ತಹಸೀಲ್ದಾರರಾದ ಎಚ್.ಪ್ರಭಾಕರಗೌಡ, ಕೆ. ಗುರುಬಸವರಾಜ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. ಅಕ್ಷರ ದಾಸೋಹ ನಿರ್ದೇಶಕ ಕೆ.ಎಚ್. ಮಾರುತೆಪ್ಪ, ತಾಪಂ ಅಧಿಕಾರಿಗಳಾದ ಚಂದ್ರು ಚನ್ನಪ್ಪಳವರ, ವಸಂತ ಬಡಿಗೇರ, ಸಮತಾ ಐರಣಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರವಾಸಿ ಮಂದಿರ, ವಾಲ್ಮೀಕಿ ಭವನ ಕಾಮಗಾರಿ ಚುರುಕುಗೊಳಿಸಿ

ಲೋಕೋಪಯೋಗಿ ಇಲಾಖೆಯಿಂದ ನಿರ್ವಿುಸಲಾಗುತ್ತಿರುವ ಪ್ರವಾಸಿ ಮಂದಿರ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಏನು ಕ್ರಮ ಕೈಗೊಂಡಿದ್ದೀರಿ ಎಂಬ ಶಾಸಕರ ಪ್ರಶ್ನೆಗೆ, ಪಿಡಬ್ಲ್ಯುಡಿ ಎಇಇ ಮಾಲತೇಶ ಕಲ್ಲಮ್ಮನವರ, ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಇನ್ನೆರಡು ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.

ಪಟ್ಟಣದ ಅಯ್ಯಪ್ಪಸ್ವಾಮಿ ನಗರದಲ್ಲಿ ನಿರ್ವಿುಸುತ್ತಿರುವ ವಾಲ್ಮೀಕಿ ಭವನ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಕಾಮಗಾರಿ ಚುರುಕುಗೊಳಿಸಿ ಎಂದು ಗುತ್ತಿಗೆ ಪಡೆದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಇಂಜಿನಿಯರ್ ಎಂ.ವಿ. ಸಿದ್ದೇಶ ಅವರಿಗೆ ಶಾಸಕರು ಸೂಚಿಸಿದರು. ಉತ್ತರಿಸಿದ ಇಂಜಿನಿಯರ್, ಈ ಬಗ್ಗೆ ಪತ್ರಿಕೆಯಲ್ಲಿ ವರದಿ ಬಂದ ತಕ್ಷಣ ಮಾಹಿತಿ ಪಡೆದಿದ್ದು, ಈ ವಿಚಾರವಾಗಿ ಸರ್ಕಾರಕ್ಕೆ ಬಾಕಿ ಉಳಿದ ಅನುದಾನ ಬಿಡುಗಡೆ ಮಾಡಲು ವರದಿ ಸಹಿತ ಪತ್ರ ಬರೆಯಲಾಗುವುದು ಎಂದರು. ಪ್ರವಾಸಿ ಮಂದಿರ ಹಾಗೂ ವಾಲ್ಮೀಕ ಭವನ ಕಾಮಗಾರಿ ವಿಳಂಬವಾಗುತ್ತಿರುವ ಕುರಿತು ‘ವಿಜಯವಾಣಿ’ ಇತ್ತೀಚೆಗೆ ವಿಸ್ತ್ರತ ವರದಿ ಪ್ರಕಟಿಸಿತ್ತು.