ಜಿಲ್ಲೆ

ಜನರ ಸಮಸ್ಯೆಗೆ ಪ್ರಾಮಾಣಿಕವಾಗಿ ಸ್ಪಂದಿಸಿ

ಉತ್ತರ ಕನ್ನಡ ಡೆಸ್ಕ್

ಸವಣೂರ: ತಾಲೂಕು ಮಟ್ಟದ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಇಲಾಖೆಗಳ ಪ್ರಯೋಜನಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹಾವೇರಿ ಲೋಕಾಯುಕ್ತ ಡಿಎಸ್ಪಿ ಬಿ.ಪಿ. ಚಂದ್ರಶೇಖರ ತಿಳಿಸಿದರು.

ಪಟ್ಟಣದ ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿ ಸಭಾ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಸಾರ್ವಜನಿಕ ಕುಂದು ಕೊರತೆ ಮತ್ತು ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗೈರು ಹಾಜರಿಯಿಂದ ಆಕ್ರೋಶಗೊಂಡ ಲೋಕಾಯುಕ್ತ ಡಿಎಸ್ಪಿ ಸಭೆ ಮಾಹಿತಿ ಇದ್ದರೂ ಬಾರದೇ ಹಾವೇರಿಯಲ್ಲಿ ಸಭೆ ಇದೆ ಎಂದು ನೆಪ ಹೇಳಿದ್ರೆ ಪರಿಶೀಲನೆ ಕೈಗೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ 1918 ಅಂಗನವಾಡಿಗಳನ್ನು ಪರಿಶೀಲಿಸುತ್ತಿದ್ದೇವೆ. ತಾಲೂಕಿನಲ್ಲಿ ಎಷ್ಟು ಜನರು ಅಂಗನವಾಡಿ ಮೇಲ್ವಿಚಾರಕರಿದ್ದಾರೆ. ಅವರು ಎಷ್ಟು ದಿನಕ್ಕೊಮ್ಮೆ ಅಂಗನವಾಡಿಗಳಿಗೆ ಭೇಟಿ ನೀಡುತ್ತಾರೆ ಎಂಬುದನ್ನು ಗಮನಿಸಿ ಅಂಗನವಾಡಿಗಳ ಕುರಿತು ಸಮಗ್ರ ಮಾಹಿತಿ ಪಡೆದುಕೊಳ್ಳಬೇಕು. ಇಲಾಖೆ ಮೇಲ್ವಿಚಾರಕರು ಕೂಡಲೇ ಕಾರ್ಯಪ್ರವೃತ್ತರಾಗಿ ಅನಿರೀಕ್ಷಿತವಾಗಿ ಅಂಗನವಾಡಿಗಳಿಗೆ ಭೇಟಿ ನೀಡಬೇಕು. ನಿಮ್ಮ ಮೇಲ್ವಿಚಾರಕರ ಕಾರ್ಯದಕ್ಷತೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಿ. ಲೋಕಾಯುಕ್ತ ಅಧಿಕಾರಿಗಳು ಸಹ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸುತ್ತಾರೆ ಎಂದು ಸಿಡಿಪಿಒ ಉಮಾ ಕೆ.ಎಸ್. ಅವರಿಗೆ ಎಚ್ಚರಿಸಿದರು.

ಅಬಕಾರಿ ಇಲಾಖೆಯ ಅಧಿಕಾರಿಗಳು ತಾಲೂಕಿನಲ್ಲಿರುವ ಎಲ್ಲ ವೈನ್​ಶಾಪ್​ಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಸೂಚನೆ ನೀಡಬೇಕು. ಸಾಕಷ್ಟು ಅಪರಾಧಗಳು ವೈನ್ ಶಾಪ್ ಮತ್ತು ಬಾರ್​ಗಳಲ್ಲಿ ನಡೆಯುತ್ತಿರುವುದು ಕಂಡು ಬಂದಿವೆ. ಅಪರಾಧಗಳನ್ನು ತಡೆಗಟ್ಟಲು ಸಿಸಿ ಕ್ಯಾಮರಾಗಳನ್ನು ಅಳವಡಿಸುವುದು ಅವಶ್ಯವಾಗಿದೆ ಎಂದರು.

ಪಿಐ ಮುಸ್ತಾಕ ಅಹ್ಮದ್ ಮಾತನಾಡಿದರು. ತಹಸೀಲ್ದಾರ್ ಭರತರಾಜ್ ಕೆ.ಎನ್., ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಇದ್ದರು.

ಪುರಸಭೆಯಲ್ಲಿ ಗುಂಪುಗಾರಿಕೆ

ಪುರಸಭೆಯಿಂದ ಲೋಕಾಯುಕ್ತಕ್ಕೆ ಹಲವು ದೂರುಗಳು ಬಂದಿದ್ದು, ನಿಮ್ಮ ಅಧೀನ ಸಿಬ್ಬಂದಿಯಲ್ಲಿ ಗುಂಪುಗಾರಿಕೆ ಇದೆ. ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ಕಾರ್ಯಪ್ರವೃತ್ತರಾಗಲು ತಿಳಿಸಿ ಎಂದು ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಅವರಿಗೆ ಡಿಎಸ್ಪಿ . ಬಿ.ಪಿ ಚಂದ್ರಶೇಖರ ಸೂಚಿಸಿದರು.