ಮಡಿಕೇರಿ: ದೇಶಪ್ರೇಮ ಎಂಬುದು ಪ್ರತೀಯೋರ್ವ ಭಾರತೀಯನ ಮನಸ್ಸಿನಲ್ಲಿಯೂ ಹಾಸುಹೊಕ್ಕಾಗಬೇಕು. ಭಾರತ ದೇಶದ ಹಿರಿಮೆಯನ್ನು ಪ್ರತೀಯೋರ್ವರೂ ಗೌರವಿಸುವಂತಾಗಬೇಕು ಎಂದು ರೋಟರಿ ಜಿಲ್ಲೆ ೩೧೮೧ನ ಗವರ್ನರ್ ಪ್ರಕಾಶ್ ಕಾರಂತ್ ಹೇಳಿದರು.
ಮಡಿಕೇರಿಯ ಜನರಲ್ ತಿಮ್ಮಯ್ಯ ಮ್ಯೂಸಿಯಂನಲ್ಲಿರುವ ಅಮರ್ ಜವಾನ್ ಸ್ಮಾರಕದಲ್ಲಿ ಆಯೋಜಿತ ದೇಶಪ್ರೇಮ ಕುರಿತ ರೋಟರಿ ಜಿಲ್ಲಾ ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದರು.
ಯುವಪೀಳಿಗೆಯಲ್ಲಿ ದೇಶಪ್ರೇಮ ಮೂಡಿಸುವಂತ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಯೋಜಿತವಾಗಬೇಕು. ಭಾರತದ ಅಪ್ರತಿಮ ಸೇನಾಧಿಕಾರಿಗಳನ್ನು ಯುವಪೀಳಿಗೆಗೆ ಪರಿಚಯಿಸುವ ಯೋಜನೆಗಳು ನಡೆಯಬೇಕು. ಈ ನಿಟ್ಟಿನಲ್ಲಿ ರೋಟರಿ ಜಿಲ್ಲೆ ೩೧೮೧ ಮಂಗಳೂರಿನಿಂದ ಮೈಸೂರಿನವರೆಗೆ ದೇಶಪ್ರೇಮ ಬಿಂಬಿಸುವ ಸಂದೇಶ ಸಾರುವ ವಾಹನ ಜಾಥಾ ಆಯೋಜಿಸಿದ್ದು, ೩೦ ರೋಟರಿ ಸದಸ್ಯರು ಪಾಲ್ಗೊಂಡಿದ್ದಾರೆ ಎಂದರು.
ಭಾರತದ ಅಪ್ರತಿಮ ಸೇನಾ ನಾಯಕ ಜನರಲ್ ತಿಮ್ಮಯ್ಯ ನೆನಪುಗಳನ್ನು ಹೊಂದಿರುವ ಭವನವಾದ ತಿಮ್ಮಯ್ಯ ಮ್ಯೂಸಿಯಂಗೆ ರೋಟರಿ ಸದಸ್ಯರ ಭೇಟಿ ಸಾರ್ಥಕತೆ ಮೂಡಿಸಿದೆ. ಪ್ರತೀಯೋರ್ವ ದೇಶಪ್ರೇಮಿಯೂ ಈ ಸ್ಮಾರಕ ಭವನಕ್ಕೆ ಭೇಟಿ ನೀಡಿದಾಗ ಖಂಡಿತಾ ದೇಶಪ್ರೇಮ ವೃದ್ಧಿಸುತ್ತದೆ ಎಂದು ಹೇಳಿದರು.
ಮಡಿಕೇರಿ ರೋಟರಿ ಸಂಸ್ಥೆ, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್, ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ನಿವೃತ್ತ ಮೇಜರ್ ವೆಂಕಟಗಿರಿ ಮತ್ತು ಗೌಡಂಡ ಸುಬೇದಾರ್ ಮೇಜರ್ ತಿಮ್ಮಯ್ಯರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿರಾಜಪೇಟೆಯ ಮೇಜರ್ ಎಸ್.ವೆಂಕಟಗಿರಿ, ಓರ್ವ ಸೈನಿಕ ಪ್ರಾಣ ಕೊಡಲೆಂದೇ ಸೈನ್ಯಕ್ಕೆ ಸೇರುವುದಿಲ್ಲ. ಆದರೆ ಸೇನೆ ಸೇರಿದ ನಂತರ ತನ್ನ ದೇಶಕ್ಕಾಗಿ ನಿಜವಾದ ಸೈನಿಕ ಪ್ರಾಣ ನೀಡಲೂ ಹಿಂಜರಿಯುವುದಿಲ್ಲ. ಇದೇ ನಿಜವಾದ ದೇಶಭಕ್ತಿ ಎಂದರು.
ನಮ್ಮ ದೇಶ ನಮಗೆ ಅನ್ನ ನೀಡುವ ತಾಯಿ ಎಂಬ ಮನೋಭಾವ ನಮ್ಮಲ್ಲಿ ಮೂಡಬೇಕು. ರೋಟರಿಯಂಥ ಸಂಸ್ಥೆಗಳು ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ದೇಶಕ್ಕಾಗಿ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಶ್ಲಾಘಿಸಿದರು.
ನಿವತ್ತ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ ಮಾತನಾಡಿ, ಭಾರತೀಯರು ಸುರಕ್ಷಿತ ಜೀವನ ನಡೆಸುವಲ್ಲಿ ನಮ್ಮ ಹೆಮ್ಮೆಯ ವೀರಸೈನಿಕರ ಕೊಡುಗೆಯಿದೆ. ಪ್ರಸ್ತುತ ಭಾರತಕ್ಕೆ ದೇಶದ ಹೊರಗಿನ ಶತ್ರುಗಳಿಗಿಂತ ದೇಶದ ಒಳಗಿನ ಗುಪ್ತ ಶತ್ರುಗಳ ವಿರುದ್ಧ ಹೋರಾಡುವುದೇ ಸವಾಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೋಟರಿ ಸಹಾಯಕ ಗವರ್ನರ್ ರತನ್ ತಮ್ಮಯ್ಯ, ಪಬ್ಲಿಕ್ ಇಮೇಜ್ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್, ಮಡಿಕೇರಿ ರೋಟರಿ ಅಧ್ಯಕ್ಷ ಕೆ.ಕಾರ್ಯಪ್ಪ, ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ, ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ, ರೋಟರಿ ವುಡ್ಸ್ ಕಾರ್ಯದರ್ಶಿ ವಸಂತ್ ಕುಮಾರ್ ಸೇರಿದಂತೆ ರೋಟರಿ ಸದಸ್ಯರು ಹಾಜರಿದ್ದರು.