ಸೂಲಿಬೆಲೆ: ಕುಟುಂಬವನ್ನು ಲೆಕ್ಕಿಸದೆ ಕರೊನಾ ವಿರುದ್ಧ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರನ್ನು ಗೌರವಿಸಬೇಕು ಎಂದು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಬಿ.ವಿ.ಸತೀಶ್‌ಗೌಡ ತಿಳಿಸಿದರು.
ಬೆಂಡಿಗಾನಹಳ್ಳಿ ಚೌಡೇಶ್ವರಿ ಸಮುದಾಯ ಭವನದಲ್ಲಿ ಸೂಲಿಬೆಲೆ ಸಹಕಾರ ಸಂಘದಿಂದ ಕರೊನಾ ವಾರಿಯರ್ಸ್‌ಗಳಿಗೆ ದಿನಸಿ ಕಿಟ್ ಜತೆಗೆ ಪ್ರೋತ್ಸಾಹ ಧನ ವಿತರಿಸಿ ಮಾತನಾಡಿದರು.
ಸರ್ಕಾರ ಲಾಕ್‌ಡೌನ್ ಆದೇಶ ಹೊರಡಿಸಿದ್ದರೂ ಗ್ರಾಮಾಂತರ ಪ್ರದೇಶದಲ್ಲಿ ಸಾವಿರಾರು ಆಶಾ, ಅಂಗನವಾಡಿ ಕಾರ್ಯಕರ್ತರು ಜೀವವನ್ನು ಲೆಕ್ಕಿಸದೆ ನಾಗರಿಕರ ಆರೋಗ್ಯ ತಪಾಸಣೆ ಮಾಡುವಲ್ಲಿ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ. ಕರೊನಾ ನಿಯಂತ್ರಣದ ಬಹುಪಾಲು ಅಭಿನಂದನೆ ಇವರಿಗೆ ಸಲ್ಲಬೇಕು ಎಂದರು.
ಸಹಕಾರ ಇಲಾಖೆ ಆದೇಶದಂತೆ ಸಂಘದ ಲಾಭಾಂಶದಲ್ಲಿ 1 ಲಕ್ಷ ರೂ. ಕರೊನಾ ವಾರಿಯರ್ಸ್‌ಗಳ ಗೌರವ ಸಲ್ಲಿಸಲು ಬಳಕೆ ಮಾಡಲಾಗಿದೆ ಎಂದರು.
ಸಂಘದ ವ್ಯವಸ್ಥಾಪಕ ಶ್ರೀನಿವಾಸಮೂರ್ತಿ ಮಾತನಾಡಿ, ಕರೊನಾ ವಾರಿಯರ್ಸ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ಜತೆಗೆ ತಲಾ 1 ಸಾವಿರ ಪ್ರೋತ್ಸಾಹ ಧನವನ್ನು ಸಹಕಾರ ಸಂಘದ ಮೂಲಕ ವಿತರಣೆ ಮಾಡಲಾಗುತ್ತಿದೆ ಎಂದರು.
ಬಮುಲ್ ನಿರ್ದೇಶಕ ಸಿ.ಮಂಜುನಾಥ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ, ತಾಪಂ ಸದಸ್ಯರಾದ ಡಾ.ಡಿ.ಟಿ.ವೆಂಕಟೇಶ್, ಶಕುಂತಲಾ ನಾಗರಾಜ್, ಸಹಕಾರ ಸಂಘದ ಉಪಾಧ್ಯಕ್ಷ ಜಿ.ಮುನಿಯಪ್ಪ, ನಿರ್ದೇಶಕರಾದ ಟೈಲರ್ ನಾರಾಯಣಪ್ಪ, ಬೇಗೂರು ನಾರಾಯಣಸ್ವಾಮಿ, ವಿಜಯಲಕ್ಷ್ಮೀ, ಗ್ರಾಪಂ ಅಧ್ಯಕ್ಷೆ ಸುಜಯ್ ಕುಮಾರಿ ಮರಿಯಪ್ಪ, ಸಂಘದ ಸಿಬ್ಬಂದಿ ವಸಂತ್ ಕುಮಾರ್, ನಾಗೇಶ್, ಜಗ್ಗಿ ಇದ್ದರು.