ಜಿಲ್ಲೆ

ಸ್ವಚ್ಛತೆ ಕಾಪಾಡುವವರನ್ನು ಗೌರವಿಸಿ

ಎನ್.ವೆಂಕಟೇಶ್

ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಸಲಹೆ | ನೈರ್ಮಲ್ಯ ನಿರ್ವಹಣೆಯಲ್ಲಿ ಅಸಡ್ಡೆ ಸರಿಯಲ್ಲ

ಚಿಕ್ಕಬಳ್ಳಾಪುರ : ಪೌರ ಕಾರ್ಮಿಕರನ್ನು ಗೌರವಿಸಿ, ಸ್ವಚ್ಛತೆಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸಾರ್ವಜನಿಕರಿಗೆ ಸಲಹೆ ನೀಡಿದರು.
ನಗರಸಭೆ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿ, ಊರಿನ ಸ್ವಚ್ಛತೆ ಕಾಪಾಡುವವರನ್ನು ಗೌರವದಿಂದ ಕಾಣುವಂತಹ ಭಾವನೆಯನ್ನು ಪ್ರತಿಯೊಬ್ಬರು ಹೊಂದಿರಬೇಕು. ನೈರ್ಮಲ್ಯ ನಿರ್ವಹಣೆ ಎಲ್ಲರ ಜವಾಬ್ದಾರಿ. ಇದನ್ನು ಇತರರ ಮೇಲೆ ಹಾಕಿ, ನುಣುಚಿಕೊಳ್ಳುವುದು ಮತ್ತು ಅಸಡ್ಡೆ ತೋರುವುದು ಸರಿಯಲ್ಲ ಎಂದು ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ ಕೋಡಿರಂಗಪ್ಪ ಮಾತನಾಡಿ, ಅನೈರ್ಮಲ್ಯ ವಾತಾವರಣದಿಂದ ಜನರು ತೊಂದರೆ ಅನುಭವಿಸದಿರಲು ಪೌರ ಕಾರ್ಮಿಕರು ಪ್ರತಿನಿತ್ಯ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ ಎಂದರು.
ಪೌರ ಕಾರ್ಮಿಕರು ಕಡ್ಡಾಯವಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಉಜ್ವಲ ಭವಿಷ್ಯ ರೂಪಿಸಬೇಕು. ಯಾವುದೇ ಕಾರಣಕ್ಕೂ ಆರೋಗ್ಯವನ್ನು ನಿರ್ಲಕ್ಷಿಸಬಾರದು. ಕೆಲಸದ ಒತ್ತಡದಲ್ಲಿ ದುಶ್ಚಟಗಳಿಗೆ ದಾಸಾರಾಗುವುದು ಅಪಾಯಕಾರಿ ಎಂದರು.
ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸವಿತಾ ಪಾಟೀಲ್, ನಗರಸಭಾ ಅಧ್ಯಕ್ಷ ಎ.ಗಜೇಂದ್ರ, ಉಪಾಧ್ಯಕ್ಷ ನಾಗರಾಜ್, ಜಾಗೃತಿ ಸಮಿತಿ ಸದಸ್ಯೆ ಜೀವಿಕ ರತ್ನಮ್ಮ ಮತ್ತಿತರರು ಇದ್ದರು.


ಪೌರ ಕಾರ್ಮಿಕರಿಗೆ ಸವಲತ್ತು
ಗೃಹ ಭಾಗ್ಯ ಯೋಜನೆಯಡಿ ನಗರಸಭೆಯ 30 ಕಾಯಂ ಪೌರ ಕಾರ್ಮಿಕರಿಗೆ ನಗರದ ಕಂದವಾರದಲ್ಲಿ ಉಚಿತ ನಿವೇಶನ ಮತ್ತು ವಸತಿಗೆ ತಲಾ 7.5 ಲಕ್ಷ ರೂ. ಧನಸಹಾಯವನ್ನು ನೀಡಿದ್ದು, 21 ಮಂದಿ ಮನೆ ನಿರ್ಮಿಸಿಕೊಂಡಿದ್ದಾರೆ. ನಗರೋತ್ಥಾನ ಯೋಜನೆಯಡಿ ನೇರ ಪಾವತಿಯಾಧಾರದ 24 ಕಾರ್ಮಿಕರಿಗೆ ಮನೆ ಮಂಜೂರಾಗಿದೆ. ಎಲ್ಲ ಪೌರ ಕಾರ್ಮಿಕರಿಗೂ ಪ್ರತಿ 3 ತಿಂಗಳಿಗೆ ಸಾಮಾನ್ಯ ಆರೋಗ್ಯ ಮತ್ತು ವರ್ಷಕ್ಕೊಮ್ಮೆ ತಪಾಸಣೆ ಕೈಗೊಳ್ಳಲಾಗುತ್ತಿದೆ. 3 ಲಕ್ಷ ರೂ ಆರೋಗ್ಯ ವಿಮೆ, ವಿಶೇಷ ದಿನದ ಭತ್ಯೆ, ಅವರ ಮಕ್ಕಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ಧನ, ಕಲಿಕೋಪಕರಣಗಳನ್ನು ನೀಡಲಾಗುತ್ತಿದೆ. ಬೆಳಗಿನ ಉಪಾಹಾರ, ಪ್ರತ್ಯೇಕ ವಿಶ್ರಾಂತಿ ಕೊಠಡಿ ಸೇರಿ ಅಗತ್ಯ ಸೌಕರ್ಯಗಳು ಸಿಗುತ್ತಿವೆ ಎಂದು ಪರಿಸರ ವಿಭಾಗದ ಕಾರ್ಯಪಾಲಕ ಅಭಿಪಯಂತರ ಉಮಾಶಂಕರ್ ಮಾಹಿತಿ ನೀಡಿದರು.