ಕುಶಾಲನಗರ: ಸಮಾಜದಲ್ಲಿ ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆದುಕೊಂಡು ಸಂಘಟಿತರಾಗಿ ಸಮಾಜದಲ್ಲಿ ಹೋರಾಟದ ಬದುಕನ್ನು ನಡೆಸುವಂತಹ ಮನೋಭಾವನೆ ಬೆಳೆಸಿಕೊಳ್ಳಬೇಕು. ಮಹಿಳೆಯರಲ್ಲಿ ಶಿಕ್ಷಣದ ಅರಿವು ಹೆಚ್ಚಾದರೆ ಸುಶಿಕ್ಷಿತ ಸಮಾಜದ ನಿರ್ಮಾಣ ಸಾಧ್ಯ ಎಂದು ಉಪನ್ಯಾಸಕ ಡಾ.ಜಮೀರ್ ಅಹಮದ್ ಅಭಿಪ್ರಾಯಿಸಿದರು.
ಕುಶಾಲನಗರದ ಅಮೃತ ಭಾವನ ಮಹಿಳಾ ಸಂಘದ ವತಿಯಿಂದ ಮಹಾಲಕ್ಷ್ಮೀ ರೆಸಿಡೆನ್ಸಿಯಲ್ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ಕುಟುಂಬದಲ್ಲಿ ಹೆಣ್ಣು ಮಕ್ಕಳು ಸಾಕ್ಷರತೆಯ ಮಹತ್ವ ತಿಳಿದುಕೊಂಡರೆ, ತನ್ನನ್ನು ಸೇರಿದಂತೆ ಎಲ್ಲರನ್ನೂ ಶೈಕ್ಷಣಿಕವಾಗಿ ಮುನ್ನೆಲೆಗೆ ತರಲು ಸಾಧ್ಯವಿದೆ. ಇದರಿಂದ ಸಮಾಜದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣ ಸಾಧ್ಯ. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡು ಸಾಧನೆ ಮಾಡಿದಂತಹ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಮೂಲಕ ಅವರಿಗೆ ಮತ್ತಷ್ಟು ಪ್ರೋತ್ಸಾಹ ನೀಡುವಂತಹ ಕಾರ್ಯ ಶ್ಲಾಘನೀಯ. ಶಿಕ್ಷಣದ ಮಹತ್ವದ ಕುರಿತು ತಿಳಿದುಕೊಳ್ಳಲು ಇಂತಹ ಕಾರ್ಯಕ್ರಮಗಳನ್ನು ಪ್ರತಿ ಸಮುದಾಯದಲ್ಲೂ ನಡೆಯಬೇಕು. ಇದರಿಂದ ಸಾಮಾಜಿಕ ಜವಾಬ್ದಾರಿ ಮತ್ತು ಹೊಣೆಗಾರಿಕೆ ಮತ್ತಷ್ಟು ಹೆಚ್ಚುತ್ತದೆ ಎಂದು ತಿಳಿಸಿದರು.
ಬೆಂಗಳೂರಿನ ಮೀನುಗಾರಿಕೆ ಇಲಾಖೆ ನಿರ್ದೇಶನಾಲಯದ ಉಪನಿರ್ದೇಶಕ ಕುಮಾರಸ್ವಾಮಿ ಮಾತನಾಡಿ, ಶಿಕ್ಷಣಕ್ಕೆ ನಿರಂತರ ಬೆಂಬಲ ಮತ್ತು ಪ್ರೋತ್ಸಾಹ ನೀಡಬೇಕು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಅಭಿನಂದಿಸುವ ಕೆಲಸ ನಡೆಯಬೇಕು. ಏಕೆಂದರೆ ಶಿಕ್ಷಣ ಒಂದು ಜ್ಞಾನದ ಸಂಪತ್ತು. ಹಾಗಾಗಿ ಶಿಕ್ಷಣದ ಮಹತ್ವ ಮತ್ತು ಅನಿವಾರ್ಯತೆಯನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಶಿಕ್ಷಣವನ್ನು ಕೇವಲ ಉದ್ಯೋಗಕ್ಕೆ ಸೀಮಿತ ಮಾಡದೆ, ಸಮಗ್ರ ಶಿಕ್ಷಣದ ಮೂಲಕ ಸಾಮಾಜಿಕ ಬದುಕನ್ನು ರೂಪಿಸಿಕೊಳ್ಳುವುದಕ್ಕೆ ಹಾಗೂ ಪ್ರಾಮಾಣಿಕತೆಯಿಂದ ಬದುಕನ್ನು ಸಾರ್ಥಕ ಪಡಿಸಿಕೊಳ್ಳುವುದಕ್ಕೆ ಒತ್ತು ನೀಡಬೇಕು ಎಂದು ತಿಳಿಸಿದರು.
ಅಮೃತ ಭಾವನ ಮಹಿಳಾ ಸಂಘದ ಅಧ್ಯಕ್ಷೆ ಎಚ್.ಕೆ.ಶಾಂತಿರಾಜ್ ಮಾತನಾಡಿ, ಸಮಾನ ಮನಸ್ಕರ ಒಳ್ಳೆಯ ಚಿಂತನೆಗಳ ಜತೆಗೆ ಆರಂಭಗೊಂಡಿರುವ ಕಳೆದ 15 ವರ್ಷಗಳಿಂದ ಸಮುದಾಯದ ಮಕ್ಕಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸುತ್ತಾ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದೆ. ಅಂಬೇಡ್ಕರ್ ಅವರ ಚಿಂತನೆಗಳನ್ನು ನಮ್ಮ ಸಂಸ್ಥೆಯ ಮೂಲಕ ಸಮಾಜಕ್ಕೆ ತಲುಪಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರಲಾಗಿದೆ. ಗೃಹಿಣಿಯರು, ಸರ್ಕಾರಿ ನೌಕರರು ಸೇರಿದಂತೆ ಹಲವು ಮಹಿಳೆಯರು ನಮ್ಮ ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ ಎಂದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ, ಸ್ನಾತಕ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದಂತಹ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.