ಪೌರಕಾರ್ಮಿಕ ದಿನಾಚರಣೆ ಪ್ರಯುಕ್ತ ಮುಂಡರಗಿ ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮೆರವಣಿಗೆಗೆ ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಚಾಲನೆ ನೀಡಿದರು. ನಾಗೇಶ ಹುಬ್ಬಳ್ಳಿ, ಲಿಂಗರಾಜಗೌಡ ಪಾಟೀಲ, ಮೈಲಪ್ಪ ದೊಡ್ಡಮನಿ ಇತರರಿದ್ದರು. 
ಜಿಲ್ಲೆ

ಪೌರ ಕಾರ್ಮಿಕರಿಗೆ ಗೌರವ ನೀಡಿ

ಸೋಮನಾಥ ರೆಡ್ಡಿ

ಮುಂಡರಗಿ: ಪುರಸಭೆ ಪೌರ ಕಾರ್ಮಿಕರ ಕೆಲಸ ಪ್ರತಿಯೊಬ್ಬರು ಮೆಚ್ಚುವಂಥದ್ದು. ಪಟ್ಟಣವನ್ನು ಸ್ವಚ್ಛತೆಯಿಂದ ನೋಡಿಕೊಳ್ಳುವುದರಲ್ಲಿ ಅವರ ಪಾತ್ರ ದೊಡ್ಡದು. ಪೌರ ಕಾರ್ಮಿಕರನ್ನು ಗೌರವದಿಂದ ಕಾಣಬೇಕು ಎಂದು ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಪುರಸಭೆ ಸಹಯೋಗದಲ್ಲಿ 13ನೇ ವರ್ಷದ ಪೌರಕಾರ್ಮಿಕ ದಿನಾಚರಣೆ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಪೌರಕಾರ್ಮಿಕರು ಗಾಳಿ, ಮಳೆ, ಚಳಿ ಎನ್ನದೆ ಪ್ರತಿದಿನ ಪಟ್ಟಣವನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಾರೆ. ಎಲ್ಲರ ಜೊತೆ ಪ್ರೀತಿ, ಗೌರವದಿಂದ ನಡೆದುಕೊಳ್ಳುವ ಅವರ ಬಗ್ಗೆ ಗೌರವ ಭಾವನೆ ಇಟ್ಟುಕೊಂಡು ಮಾತನಾಡಿಸಬೇಕು. ಸಮಾನತೆ ಭಾವದಿಂದ ನಡೆದುಕೊಳ್ಳಬೇಕು ಎಂದರು.

ಪಟ್ಟಣದ ಕೋಟೆಭಾಗದ ಆಂಜನೇಯ ದೇವಸ್ಥಾನದಿಂದ ಹೊರಟ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಪುರಸಭೆ ಗಾಂಧಿ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ಪ್ರೊ. ಆರ್.ಎಲ್. ಪೋಲೀಸ ಪಾಟೀಲ ಉಪನ್ಯಾಸ ನೀಡಿದರು

ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಸದಸ್ಯರಾದ ಲಿಂಗರಾಜಗೌಡ ಪಾಟೀಲ, ಶಿವಪ್ಪ ಚಿಕ್ಕಣ್ಣವರ, ಕವಿತಾ ಉಳ್ಳಾಗಡ್ಡಿ, ಪ್ರಹ್ಲಾದ ಹೊಸಮನಿ, ನಾಗರಾಜ ಹೊಂಬಳಗಟ್ಟಿ, ಸಂತೋಷ ಹಿರೇಮನಿ, ರೈಮಾನಸಾಬ ಮಲ್ಲನಕೇರಿ, ಪ್ರಕಾಶ ಹಲವಾಗಲಿ, ರಾಜಾಭಕ್ಷಿ ಬೆಟಗೇರಿ, ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಮೈಲಪ್ಪ ದೊಡ್ಡಮನಿ, ಮಂಜುನಾಥ ಇಟಗಿ, ನಾಗರಾಜ ಕೊರ್ಲಹಳ್ಳಿ, ಅಂದಪ್ಪ ಬಳ್ಳಾರಿ, ರವಿ ಕುಂಬಾರ, ಅಲ್ಲಿಸಾಬ ನದಾಫ್, ಎಂ.ಡಿ.ದೊಡ್ಡಮನಿ, ದೇವರಾಜ ಗೋಡಿ, ರಣದಪ್ಪ ಹಿರೇಮನಿ, ಮಂಜುಳಾ ಹಾಲಿನವರ, ನಿಂಗಪ್ಪ ಹರಿಜನ, ಗಣೇಶ ಶೇಡದ, ಪುರಸಭೆ ಸಿಬ್ಬಂದಿ ಇತರರು ಇದ್ದರು.