ಜಿಲ್ಲೆ

ಸದೃಢ ಸಮಾಜಕ್ಕೆ ಶಿಕ್ಷಣ ಅಗತ್ಯ

ಚಳ್ಳಕೆರೆ: ಸದೃಢ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಆಧಾರವಾಗಿದ್ದು, ಇದನ್ನು ಕಲಿಸುವ ಶಿಕ್ಷಕರು ಜ್ಞಾನವಂತರಾಗಿರಬೇಕು ಎಂದು ಸಂಪನ್ಮೂಲ ವ್ಯಕ್ತಿ ಬಾಲಾಜಿ ಹೇಳಿದರು.

ರಾಷ್ಟ್ರೋತ್ಥಾನ ಪರಿಷತ್ ಮತ್ತು ಪ್ರಶಿಕ್ಷಣ ಭಾರತಿ ಸಹಯೋಗದಲ್ಲಿ ತಾಲೂಕಿನ ಸಾಣೀಕೆರೆ ಸಮೀಪದ ವೇದಾ ಕಾಲೇಜಿನಲ್ಲಿ ಬುಧವಾರ

ಹಮ್ಮಿಕೊಂಡಿದ್ದ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಮಕ್ಕಳ ಸರ್ವಾಂಗಿಣ ಬೆಳವಣಿಗೆಗೆ ಶಿಕ್ಷಕನ ಶ್ರಮ ಅಗತ್ಯ ಎಂದರು.

ಶಾಲೆಗಳಲ್ಲಿ ಅಗತ್ಯ ಕಲಿಕಾ ಸಾಮಗ್ರಿಗಳಿಲ್ಲದಿದ್ದರೂ ಮಕ್ಕಳು ಗ್ರಹಿಸುವ ರೀತಿಯಲ್ಲಿ ಬೋಧನೆ ಮಾಡುವ ಜಾಣ್ಮೆ ಶಿಕ್ಷಕನಿಗಿರಬೇಕು. ಮಕ್ಕಳ ಭವಿಷ್ಯ ರೂಪಿಸುವ ಚಿಂತನೆ ಶಿಕ್ಷಕರಲ್ಲಿ ಇರಬೇಕು ಎಂದು ತಿಳಿಸಿದರು.

ಪ್ರಶಿಕ್ಷಣ ಭಾರತಿ ಶಿಬಿರದ ಸಂಯೋಜಕಿ ರಾಧಾ ಮಾತನಾಡಿ, ಬದಲಾಗುತ್ತಿರುವ ಸಮಾಜದಲ್ಲಿ ಶಿಕ್ಷಣದ ವ್ಯವಸ್ಥೆ ಕಾಪಾಡಿಕೊಳ್ಳುವುದು ಒಂದು ಸವಾಲಾಗಿದೆ ಎಂದರು.

ಮಕ್ಕಳಿಗೆ ಮನವರಿಕೆ ಆಗುವ ರೀತಿಯಲ್ಲಿ ಬೋಧನೆ ಮಾಡುವ ಕ್ರಿಯಾಶೀಲತೆ ಶಿಕ್ಷಕ ಹೊಂದಿರಬೇಕು. ಅಪಾರ ಪಾಂಡಿತ್ಯ ಮತ್ತು ಪಠ್ಯ ವಿಷಯಗಳ ಆಳ ಅಧ್ಯಯನ ಇದ್ದಾಗ ಮಾತ್ರ ಪರಿಣಾಮಕಾರಿ ಬೋಧನೆ ಸಾಧ್ಯ ಎಂದು ಹೇಳಿದರು.

ವಿದ್ಯಾಸಂಸ್ಥೆ ಅಧ್ಯಕ್ಷ ಡಿ.ಟಿ.ರವೀಂದ್ರ ಮಾತನಾಡಿ, ಪಠ್ಯ ವಿಷಯ ಬೋಧನೆಯಲ್ಲಿ ಶಿಕ್ಷಕರ ಅನುಸಂಧಾನ ಮಕ್ಕಳ ಕಲಿಕೆಗೆ ಮಾರ್ಗವಾಗಬೇಕು.

ಯೋಗ, ಧ್ಯಾನ ಸೇರಿ ಪ್ರತಿ ಚಿಂತನಾ ವಿಚಾರಗಳನ್ನು ಶಿಕ್ಷಕ ಮೈಗೂಡಿಸಿಕೊಂಡಿರಬೇಕು ಎಂದು ತಿಳಿಸಿದರು.

ಮುಖ್ಯಶಿಕ್ಷಕಿ ಪುಷ್ಪರಾಣಿ, ಯೋಗ ಶಿಕ್ಷಕ ಕೆಂಚವೀರಪ್ಪ, ಜೋಸ್ನಾ, ಅಭಿಲಾಷ್ ಪಂಡರಹಳ್ಳಿ ಇತರರಿದ್ದರು.