ಬಿಡದಿ: ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದಿಂದ ಭಾನುವಾರ ಅಖಂಡ ಭಾರತ ಸಂಕಲ್ಪ ದಿನದ ನೆನಪಿಗಾಗಿ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ಮಾಡಲಾಯಿತು.
ಪಟ್ಟಣದ ಈಶ್ವರನ ದೇವಾಲಯದಿಂದ ಬಿಜಿಎಸ್ ವೃತ್ತದವರೆಗೆ ಸಾಗಿದ ಬೃಹತ್ ಪಂಜಿನ ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಕೈಯಲ್ಲಿ ಪಂಜು, ಜಯಘೋಷ ಮೊಳಗಿಸಿ, ಹೆಜ್ಜೆಹಾಕಿದರು.
ಬಜರಂಗದಳ ಅಧ್ಯ ಶ್ರೀನಿಧಿ ಮಾತನಾಡಿ, ಪುರಾಣಗಳಲ್ಲಿ ಭಾರತವನ್ನು ಜಂಬೂದ್ವೀಪದವರೆಗೆ ಗುರುತಿಸಿದ್ದು, ಹೀಗಾಗಿ ನಾವೆಲ್ಲರೂ ನಿತ್ಯ ಪೂಜೆ ವೇಳೆ ಜಂಬೂದ್ವೀಪ, ಭರತವರ್ಷ, ಭರತಖಂಡೇ ಎಂದು ಪೂಜಿಸಲ್ಪಡುತ್ತೇವೆ. ಇದನ್ನು ಪ್ರತಿಯೊಬ್ಬ ಭಾರತೀಯನೂ ಅರ್ಥೈಸಿಕೊಳ್ಳಬೇಕು. ಅಖಂಡ ಭಾರತದಲ್ಲಿ ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಬರ್ಮಾ, ಟಿಬೇಟ್, ನೇಪಾಳ ಎಲ್ಲವೂ ಸೇರಿದೆ. ಇಲ್ಲಿರುವವರೆಲ್ಲರೂ ಮೂಲತಃ ಹಿಂದುಗಳೇ ಆಗಿದ್ದಾರೆ. ಮನಃ ಪರಿವರ್ತನೆಯಾಗಿ ಎಲ್ಲರೂ ಭಾರತದ ಸನಾತನ ಧರ್ಮದ ಛತ್ರದಡಿಯಲ್ಲಿ ಬಂದು ಸೇರಬೇಕು. ಅಖಂಡ ಭಾರತ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.
ಬಿಡದಿ ಬಜರಂಗದಳ ಸಂಯೋಜಕ ಸಚಿನ್, ಸಂದೀಪ್, ಸಹ ಸಂಯೋಜಕ ಕಲ್ಲಯ್ಯ, ಮಹಾಂತೇಶ್, ದುರ್ಗಾವಾಹಿನಿ ಸಂಯೋಜಕರಾದ ಪಲ್ಲವಿ, ಸಹ ಸಂಯೋಜಕಿ ಲಕ್ಷ್ಮೀ ಇದ್ದರು.