ವಿಜಯಪುರ: ರೈತರ ಜಮೀನುಗಳ ವಹಿವಾಟು ದಾರಿ ಸಮಸ್ಯೆ ಇತ್ಯರ್ಥಪಡಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸಚಿವರನ್ನು ಭೇಟಿ ಮಾಡಿದ ರೈತರು, ಕಳೆದ ಹಲವು ವರ್ಷಗಳಿಂದ ದಾರಿ ಸಮಸ್ಯೆ ಇತ್ಯರ್ಥಕ್ಕೆ ಹೋರಾಟ ನಡೆಸುತ್ತಾ ಬರಲಾಗಿದೆ. ಆದರೂ ಈವರೆಗೆ ಯಾವುದೇ ಸರ್ಕಾರ ಪರಿಹಾರ ಒದಗಿಸಿಲ್ಲ. ಇನ್ನಾದರೂ ಸಮಸ್ಯೆ ಇತ್ಯರ್ಥ ಪಡಿಸಬೇಕೆಂದು ಮನವಿ ಮಾಡಿದರು.
ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ದಾರಿ ಸಮಸ್ಯೆಯ ಕುರಿತು ಈಗಾಗಲೇ ಸರ್ಕಾರ ಆದೇಶ ಹೊರಡಿಸಿದ್ದು ಶೀಘ್ರದಲ್ಲಿ ಅಧಿಸೂಚನೆ ಹೊರಡಿಸಲು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಬೇಕು. ಜಮೀನುಗಳಿಗೆ ಹಾದು ಹೋಗಲು ದಾರಿ ವ್ಯವಸ್ಥೆ ಕಲ್ಪಿಸುವ ಅಧಿಕಾರವನ್ನು ಈಗಾಗಲೇ ತಹಸೀಲ್ದಾರ್‌ರಿಗೆ ನೀಡಲಾಗಿದೆ. ಆದರೆ, ಆದೇಶ ಹೊರಡಿಸಿ 3 ತಿಂಗಳು ಗತಿಸಿದರೂ ಈವರೆಗೂ ಅಧಿಸೂಚನೆ ಹೊರಡಿಸಿಲ್ಲ ಎಂದರು.
ರೈತರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಎಂ.ಬಿ. ಪಾಟೀಲ, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ರೈತ ಮುಖಂಡರಾದ ಸದಾಶಿವ ಬರಟಗಿ, ದ್ಯಾವಪ್ಪಗೌಡ ಪೊಲೇಶಿ, ಕರೆಪ್ಪ ತೆಲಗಿ, ಈರಪ್ಪ ತೇಲಿ, ಕಲ್ಲಪ್ಪ ಕುಂಬಾರ, ಮಹಾದೇವಪ್ಪ ತೇಲಿ, ಸದಾಶಿವಯ್ಯ ಅರಕೇರಿಮಠ, ಅರುಣಗೌಡ ತೇರದಾಳ, ಸಂಗಮೇಶ ಸಗರ, ಅರುಣಗೌಡ ತೇರದಾಳ, ಗುರಲಿಂಗಪ್ಪ ಪಡಸಲಗಿ, ಮಲ್ಲಪ್ಪ ಪಡಸಲಗಿ, ದವಲಪ್ಪಾ ವಾಲಿಕಾರ, ರಾಜೇಶ ವಾಲಿಕಾರ, ಹಣಮಂತ ಮುರಾಳ ಮತ್ತಿತರರಿದ್ದರು.