ಜಿಲ್ಲೆ

ರೈತರ ಹಿತ ಕಾಯುವವರನ್ನು ಬೆಂಬಲಿಸಲು ನಿರ್ಣಯ

ಹೊನ್ನಾವರ: ರೈತರು, ಸಹಕಾರಿ ಸಂಘಗಳ ಆಡಳಿತ ಸದಸ್ಯರು, ಸಂಘದ ಪ್ರತಿನಿಧಿ ಮತದಾರರು ಮುಂಬರುವ ಕೆಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ಪ್ರಶ್ನಿಸಿ, ಸಮಾಲೋಚಿಸಿ, ರೈತರ ಹಿತ ಕಾಯುವ ಆಶ್ವಾಸನೆ ಪಡೆದು ಸೂಕ್ತ ಉಮೇದುವಾರರನ್ನು ಬೆಂಬಲಿಸಬೇಕು ಎಂಬ ನಿರ್ಣಯವನ್ನು ಭಾರತೀಯ ಕಿಸಾನ್ ಸಂಘದ ತಾಲೂಕು ಸಮಿತಿ ಸಭೆಯಲ್ಲಿ ಕೈಗೊಳ್ಳಲಾಯಿತು ಎಂದು ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಗಣಪತಿ ಈಶ್ವರ ಹೆಗಡೆ ತಿಳಿಸಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 87 ಅರಣ್ಯಭೂಮಿ ಹಾಗೂ ಶೇ. 13 ಕೃಷಿ ಭೂಮಿ ಹೊಂದಿದ್ದು, ರೈತರಿಗೆ ಒಂದು ಎಕರೆ ಕೃಷಿ ಭೂಮಿ ಖರೀದಿಗೆ 50 ಲಕ್ಷ ರೂ. ಅಥವಾ ಸಬ್ ರಿಜಿಸ್ಟ್ರಾರ್ ನೋಂದಣಿ ಮೌಲ್ಯಮಾಪನದ 10 ಪಟ್ಟು ಜಾಸ್ತಿ ರೈತರಿಗೆ ಸಾಲ ಕೊಡುವ ವ್ಯವಸ್ಥೆ ಮಾಡಬೇಕು. ರೈತರ ಮಕ್ಕಳು ಬೇರೆ ಊರು ಸೇರಿ ಮೂಲಭೂಮಿ ಮಾರಾಟ ಮಾಡುತ್ತಿದ್ದು, ಲಗ್ತಮಾಲೀಕ ರೈತರಿಗೆ ಅನುಕೂಲವಾಗಲು ಒಂದು ಎಕರೆ ಲಗ್ತ ಕೃಷಿ ಭೂಮಿ ಖರೀದಿಗೆ 60 ಲಕ್ಷ ರೂ. ಅಥವಾ ಸಬ್ ರಿಜಿಸ್ಟ್ರಾರ್ ನೋಂದಣಿ ಮೌಲ್ಯಮಾಪನದ 11 ಪಟ್ಟು ಜಾಸ್ತಿ ರೈತರಿಗೆ ಸಾಲ ಕೊಡುವಂತಾಗಬೇಕು. ಲಗ್ತ ಇರುವ 10 ಗಂಟೆ ಒಳಗಿನ ತೀರಾ ಸಣ್ಣ ಹಿಡುವಳಿ ಕೃಷಿ ಭೂಮಿ ಒಟ್ಟುಗೂಡಿಸುವಿಕೆ ಖರೀದಿಗೆ ಕನಿಷ್ಠ 15 ಲಕ್ಷ ರೂ. ಅಥವಾ ಸಬ್ ರಿಜಿಸ್ಟ್ರಾರ್ ನೋಂದಣಿ ಮೌಲ್ಯಮಾಪನದ 12 ಪಟ್ಟು ಹೆಚ್ಚಿನ ಸಾಲ ನೀಡುವ ವ್ಯವಸ್ಥೆಯಾಗಬೇಕು. ಅಡಕೆಗೆ ಪರ್ಯಾಯ ಬೆಳೆಯಾಗಿ ಕೃಷಿ ಭೂಮಿಯಲ್ಲಿ ಹೊಸದಾಗಿ ಜೀರಿಗೆ ಮಾವುತೋಟ ಮಾಡಲು ಕೃಷಿ ಸಾಲ ನೀಡಬೇಕು. ಅಡಕೆಯ ಪರ್ಯಾಯ ಬೆಳೆಯಾಗಿ ಖುಷ್ಕಿ ಭೂಮಿಯಲ್ಲಿ ದಾಲ್ಚಿನ್ನಿ ಹೂವು, ಮೊಗ್ಗು ಬೆಳೆಯಲು ಸಾಲ, ಪರ್ಯಾಯ ಬೆಳೆಯಾಗಿ ಮಕಡೋಮಿಯ ಬೆಳೆಯಲು ಖುಷ್ಕಿ ಭೂಮಿಗೆ ಸಾಲ ರೈತರಿಗೆ ಕಲ್ಪಿಸಬೇಕು ಎಂದರು.

ಮಾಲ್ಕಿ ಖುಷ್ಕಿ ಜಾಗ ಮತ್ತು ಮಾಲ್ಕಿ ಹಾಡಿ ಬೆಟ್ಟ ಹಾಗೂ ಸರ್ಕಾರಿ ಹಾಡಿ ಬೆಟ್ಟ ಭೂಮಿ ಅಭಿವೃದ್ಧಿ, ಸರ್ಕಾರಿ ಸೊಪ್ಪಿನ ಬೆಟ್ಟ ಅರಣ್ಯದಲ್ಲಿರುವ ರೈತರ ಹಕ್ಕಿನ ಕುಮ್ಕಿ ಭೂಮಿ ಅಭಿವೃದ್ಧಿಪಡಿಸಲು ರೈತರ ಮೂಲ ಕೃಷಿ ಜಮೀನನ್ನು ಜಾಮೀನು ಆಧಾರದಲ್ಲಿಸಿ ಖುಷ್ಕಿ ಜಮೀನನ್ನು ಮಾರಾಟ ಮಾಡದೇ ಲಾಭದಾಯಕ ಕೃಷಿಗೆ ಉಳಿಸಿಕೊಳ್ಳಲು ಬೋರ್​ವೆಲ್, ಬಾವಿ, ಕಾಂಪೌಂಡ್, ಜಾಗ ಸಮತಟ್ಟು, ಗಿಡ ನೆಡಲು, ಪಿಚ್ಚಿಂಗ್ ಕಟ್ಟಲು, ಪಂಪ್ ಸೆಟ್, ಪೈಪ್ ಲೈನ್ ಸಾಲಗಳಿಗೆ ಒಟ್ಟು ಸೇರಿ ಎಸ್ಟಿಮೇಟ್ ಆಧಾರದಲ್ಲಿ ಪ್ರೊಜೆಕ್ಟ್ ಸಾಲ 50 ಲಕ್ಷ ರೂ. ಮಿತಿ ನಿರ್ಧರಿಸುವುದು. ರೈತರಿಗೆ ಅನುಕೂಲವಾಗುವ ಈ ಸೌಲಭ್ಯಗಳಿಗೆ ಮನ್ನಣೆ ನೀಡಲು ಬದ್ಧರಾಗಿರುವ ಅಭ್ಯರ್ಥಿಗಳನ್ನು ಬೆಂಬಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದರು.

ಉಪಾಧ್ಯಕ್ಷ ಮಂಜುನಾಥ ಪಿ. ಹೆಗಡೆ, ಸಂಘದ ಜಿಲ್ಲಾ ಉಪಾಧ್ಯಕ್ಷ ಡಿ.ಎಂ. ನಾಯ್ಕ, ಆರ್.ಐ.ಭಟ್ಟ, ವಿಷ್ಣು ಈಶ್ವರ ಹೆಗಡೆ, ಸೀತಾರಾಮ ಜಿ. ಹೆಗಡೆ, ಕಿಸಾನ್ ಜಿಲ್ಲಾ ಹೋರಾಟ ಸಮಿತಿಯ ಎಂ.ಆರ್. ಹೆಗಡೆ ಇದ್ದರು.