ವಿಜಯಪುರ: ಮುಡಾ ಹಗರಣದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ತಮ್ಮ ಪ್ರಾಮಾಣಿಕ ರಾಜಕಾರಣ ಜೀವನದ ಬದ್ಧತೆ ಪ್ರದರ್ಶಿಸಬೇಕಾದ ಸಮಯ ಬಂದಿದ್ದು, ಕೂಡಲೇ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಆದೇಶ ನೀಡಿದ ಹಿನ್ನೆಲೆ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವುದು ಸರಿಯಲ್ಲ.
ಸಿದ್ದರಾಮಯ್ಯ ಅವರು ದಿ. ರಾಮಕೃಷ್ಣ ಹೆಗಡೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ದಿ. ಜೆ.ಎಚ್. ಪಟೇಲರಂತಹ ಮುತ್ಸದ್ದಿ ನಾಯಕರ ಗರಡಿಯಲ್ಲಿ ಬೆಳೆದವರು.
ನೀವು ಯಾವಾಗಲೂ ನಿಮ್ಮ ರಾಜಕೀಯ ಜೀವನ ತೆರೆದ ಪುಸ್ತಕ ಎಂದೇ ಹೇಳುತ್ತೀರಿ. ಆದರೆ ಸದ್ಯ ಆ ಪುಸ್ತಕ ಕೆಲವು ಪುಟಗಳನ್ನು ಜನರಿಗೋಸ್ಕರ ಮುಚ್ಚಿದ್ದಿರಿ ಎನ್ನುವ ಸಂಶಯವಿದೆ. ನೀವು ಮುಡಾ ಹಗರಣದ ಆರೋಪದಲ್ಲಿ ನಿಮ್ಮ ಆಪ್ತರೊಂದಿಗೆ ಸಿಲುಕಿ ಜನತೆಯ ಆಕ್ರೋಶಕ್ಕೆ ಬಲಿಯಾಗುತ್ತಿದ್ದೀರಿ, ಕೂಡಲೇ ಎಚ್ಚೆತ್ತುಕೊಳ್ಳುವಂತೆ ಜಿಗಜಿಣಗಿ ಸಲಹೆ ನೀಡಿದ್ದಾರೆ.
ಹಿಂದೆ ದಿ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಫೋನ್ ಕದ್ದಾಲಿಕೆ ಎಂಬ ಸಣ್ಣ ಆರೋಪ ಬಂದಾಗ ಮುಖ್ಯಮಂತ್ರಿ ಹುದ್ದೆಗೆ ತಣ ರಾಜೀನಾಮೆ ನೀಡಿ ತನಿಖೆ ಎದುರಿಸಿ ರಾಜ್ಯ ರಾಜಕಾರಣದ ಗೌರವಕ್ಕೆ ಹೊಸ ಭಾಷ್ಯ ಬರೆದರು.
ಅವರ ಗರಡಿಯಲ್ಲಿ ಬೆಳೆದ ತಾವು ಇಂದು ಮುಡಾದಂತಹ ದೊಡ್ಡ ಹಗರಣದ ಆರೋಪ ಎದುರಿಸುತ್ತಿದ್ದರೂ ನೀವು ರಾಜೀನಾಮೆ ನೀಡಿ ತನಿಖೆ ಎದುರಿಸುವುದನ್ನು ಬಿಟ್ಟು, ಸಾಂವಿಧಾನಿಕ ಹುದ್ದೆ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ರಾಜ್ಯಪಾಲರ ವಿರುದ್ಧ ಟೀಕಾಪ್ರಹಾರ ಮಾಡುವುದರಲ್ಲಿ ಮಗ್ನರಾಗಿದ್ದೀರಿ ಎಂದು ತಿಳಿಸಿದ್ದಾರೆ.
ರಾಜ್ಯಪಾಲರು ತಮ್ಮ ಕರ್ತವ್ಯವನ್ನು ಕಾನೂನು ಬದ್ಧವಾಗಿ ಮಾಡಿರುವುದನ್ನು ಕಾನೂನು ಪದವಿ ಪಡೆದ ತಾವು ಖಂಡಿಸುತ್ತಿರುವುದು ಸರಿಯಾಗಿದೆಯೇ ಎಂಬುದನ್ನು ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಬೇಕು.
ನೀವು ನಿಮ್ಮ ಸುತ್ತಲೂ ಇರುವ ನಿಮ್ಮ ಹಿತವನ್ನು ಬಯಸುವಂತೆ, ನಿಮಗೆ ಸದಾ ಹೊಗಳುವ ಹಿತಶತ್ರುಗಳ ಮಾತಿಗೆ ಮರುಳಾಗಿ ಮುಡಾದಂತಹ ಹಗರಣದ ಗುಂಡಿಗೆ ಬಿದ್ದು ಒದ್ದಾಡುತ್ತಿದ್ದು, ಮುಂದೆ ಕೂಡ ನೀವು ಇಂತಹ ಹಿತಶತ್ರುಗಳ ಮಾತಿಗೆ ಮರುಳಾಗದೆ ಹಗರಣದ ಗುಂಡಿಯ ಪ್ರಪಾತಕ್ಕೆ ಹೋಗುವುದರಲ್ಲಿ ಸಂದೇಹವೇ ಇಲ್ಲ.
ನೀವು ದ ರಾಜಕಾರಣಿ ಎಂದು ಸಾಬೀತುಪಡಿಸಲು ತಣವೇ ರಾಜೀನಾಮೆ ನೀಡಿ ಎಂದು ಪ್ರಕಟಣೆ ಮೂಲಕ ಅವರು ಒತ್ತಾಯಿಸಿದ್ದಾರೆ.