ಜಿಲ್ಲೆ

‘ಗ್ಯಾರಂಟಿ’ ಜಾರಿಗೊಳಿಸದಿದ್ದರೆ ರಾಜೀನಾಮೆ ಕೊಡಿ

ಬಸವರಾಜ ವೀರಪ್ಪ ಗರಗ

ಫೋಟೋ: 23ಎಚ್​ಎನ್​ಆರ್2

ಹೊನ್ನಾವರ, ಬಿಜೆಪಿ, ಕಾರ್ಯಕರ್ತರ ಸಭೆ, ಸಿ.ಟಿ. ರವಿ, Honnavar, BJP, Workers' Meeting, C.T. Ravi,

‘ಗ್ಯಾರಂಟಿ’ ಜಾರಿಗೊಳಿಸದಿದ್ದರೆ ರಾಜೀನಾಮೆ ಕೊಡಿ

ಹೊನ್ನಾವರ: ಯಾರದೋ ದುಡ್ಡಿನಲ್ಲಿ ಯಲ್ಲಮ್ಮನ ಜಾತ್ರೆ ಮಾಡುವ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೊಷಣೆ ಮಾಡಿದ ಗ್ಯಾರಂಟಿ ಯೋಜನೆಯನ್ನು ಯಥಾವತ್ತಾಗಿ ಜಾರಿಗೆ ತರಬೇಕು. ಇಲ್ಲವಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಪಟ್ಟಣದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಚುನಾವಣೆ ಸಮಯದಲ್ಲಿ ಮಾತ್ರ ನಾವು ಹಣೆಗೆ ಕುಂಕುಮ ಇಟ್ಟುಕೊಳ್ಳುವುದಿಲ್ಲ. ದೇವರಲ್ಲಿ ಸದಾ ಭಕ್ತಿ ಇರುತ್ತದೆ. ನಾವು ಸಿದ್ಧಾಂತಕ್ಕಾಗಿ ರಾಜಕಾರಣಕ್ಕೆ ಬಂದವರು. ನಮ್ಮನ್ನು ಹೆದರಿಸುವ ರಾಜಕಾರಣ ಬಿಟ್ಟು ಬಿಡಿ ಎಂದರು.

ಮಾಜಿ ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಮೊದಲು ಐದು ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿ. ಮತಾಂತರ ನಿಷೇಧ, ಗೋಹತ್ಯೆ ನಿಷೇಧ ಕಾನೂನು ವಾಪಸ್ ಪಡೆಯಲು ಮುಂದಾದರೆ ಅಧಿವೇಶನದ ಒಳಗೆ ಮತ್ತು ಹೊರಗೆ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಮಾಜಿ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ವಂಚನೆಯ ಕಾರ್ಡ್ ಗೆದ್ದಿದೆ. ಕಾರ್ಡ್ ಪ್ರಿಂಟ್ ಮಾಡುವಾಗ ಅಧಿಕಾರಕ್ಕೆ ಬರುವ ಗ್ಯಾರಂಟಿ ಇರಲಿಲ್ಲ ಎಂದು ವ್ಯಂಗ್ಯವಾಡಿದರು.

ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ, ಮಾಜಿ ಸಚಿವ ಪ್ರಮೋದ ಮಧ್ವರಾಜ ಮಾತನಾಡಿದರು. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕ ಸುನೀಲ ನಾಯ್ಕ, ಸುನೀಲ ಹೆಗಡೆ, ರೂಪಾಲಿ ನಾಯ್ಕ, ಎನ್.ಎಸ್. ಹೆಗಡೆ, ಪ್ರಸನ್ನ ಕೆರೆಕೈ, ಶಿವಾನಿ ಶಾಂತರಾಮ ಇತರರು ಇದ್ದರು. ಗೋವಿಂದ ನಾಯ್ಕ, ಬಿಜೆಪಿ ತಾಲೂಕು ಅಧ್ಯಕ್ಷ ರಾಜೇಶ ಭಂಡಾರಿ, ಮಂಜುನಾಥ ನಾಯ್ಕ ಹಾಗೂ ಗಣಪತಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.