ಬೆಂಗಳೂರು: ನಗರದ ಉತ್ತರ ಭಾಗದಲ್ಲಿ ಬಿಡಿಎ ರಚಿಸಿರುವ ಅರ್ಕಾವತಿ ಬಡಾವಣೆಯ 8ನೇ ಬ್ಲಾಕ್‌ನಲ್ಲಿ ಕನ್ನಡ ಧ್ವಜಸ್ತಂಭದ ಕಟ್ಟೆಯನ್ನು ತೆರವುಗೊಳಿಸಿದ ಕ್ರಮಕ್ಕೆ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಕ್ಕೂರು ಜೋಡಿ ರಸ್ತೆಗೆ ಹೊಂದಿಕೊಂಡಿರುವ 8ನೇ ಬ್ಲಾಕ್‌ನಲ್ಲಿ ಭಾನುವಾರ ಮಧ್ಯಾಹ್ನ ದಿಢೀರ್ ಆಗಿ ಖಾಸಗಿ ವ್ಯಕ್ತಿಗಳು ಜೆಸಿಬಿ ಯಂತ್ರವನ್ನು ತಂದು ಕನ್ನಡದ ಕಟ್ಟೆಯನ್ನು ತೆರವುಗೊಳಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ ಬಂದಿ ವಿಚಾರಿಸಿದಾಗ ಬಿಡಿಎ ಅಧಿಕಾರಿಗಳ ಸೂಚನೆ ಮೇರೆಗೆ ಈ ಕೆಲಸ ಮಾಡಿದ್ದೇವೆ. ಬೇಕಿದ್ದರೆ ಅವರಿಗೆ ಫೋನಾಯಿಸಿ ವಿಚಾರಿಸಿಕೊಳ್ಳಿ ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರೆಂದು ಸ್ಥಳೀಯರು ದೂರಿದ್ದಾರೆ.
8ನೇ ಬ್ಲಾಕ್‌ನಲ್ಲಿ ನಾಗರಿಕ ಸೌಲಭ್ಯಕ್ಕೆ (ಸಿ.ಎ) ಮೀಸಲಾದ ಎರಡು ನಿವೇಶನಗಳಿವೆ. ಇವುಗಳಲ್ಲಿ ಒಂದನ್ನು ಜಲಮಂಡಳಿಗೆ ಹಂಚಿಕೆ ಮಾಡಿದ್ದು, ಉಳಿದಿದ್ದನ್ನು ಸ್ಥಳೀಯ ಜನರ ಅಪೇಕ್ಷೇಯಂತೆ ಬಳಸಿಕೊಳ್ಳಲು ಬಿಡಿಎ ಭರವಸೆ ನೀಡಿತ್ತು. ಆದರೆ, ರಜಾದಿನ ದಿಢೀರ್ ಆಗಿ ಜೆಸಿಬಿ ಯಂತ್ರದಿಂದ ಕಟ್ಟೆ ಹಾಗೂ ಗಣಪತಿ ಕೂಡಿಸಿದ್ದ ಕಟ್ಟೆಯನ್ನು ತೆರವುಗೊಳಿಸಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸದೆ ಮೂರನೇ ವ್ಯಕ್ತಿಗಳು ಬಂದು ಕಾರ್ಯಾಚರಣೆ ಮಾಡಿದ್ದರು ಸರಿಯಲ್ಲ ಎಂದು ಆಕ್ಷೇಪಿಸಿ ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದರು.
ದೂರು ಆಧರಿಸಿ ಸ್ಥಳಕ್ಕೆ ಆಗಮಿಸಿ ಅಮೃತಹಳ್ಳಿ ಪೊಲೀಸರು, ಜೆಸಿಬಿ ಯಂತ್ರದ ಚಾಲಕರನ್ನು ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದರು. ಜತೆಗೆ ಸ್ಥಳೀಯರು ಕೂಡ ತೆರಳಿ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ನಾವು ವಾಸಿಸುವ 8ನೇ ಬ್ಲಾಕ್‌ನಲ್ಲಿ ರಸ್ತೆಗಳಿಗೆ ಜಲ್ಲಿ ಹಾಕಿ ಹಾಗೆಯೇ ಬಿಡಲಾಗಿದೆ. ಡಾಂಬರು ಹಾಕಲು ವಿಳಂಬ ಮಾಡುತ್ತಿರುವ ಬಿಡಿಎ ಇನ್ನಿತರ ಸೌಲಭ್ಯ ಒದಗಿಸಲು ಹಿಂದೇಟು ಹಾಕಿದೆ ಎಂದು ನಿವಾಸಿಗಳು ವಿಜಯವಾಣಿ ಬಳಿ ಅಳಲು ತೋಡಿಕೊಂಡರು.
ಎಂಟನೇ ಬಡಾವಣೆಯಲ್ಲಿರುವ ಏಕೈಕ ಸಿ.ಎ ಸೈಟ್‌ಅನ್ನು ಅನ್ಯರಿಗೆ ಪರಭಾರೆ ಮಾಡಲು ಬಿಡಿಎ ಸ್ಥಳೀಯರಿಗೆ ತಿಳಿಸದೆ ಏಕಾಏಕಿ ಕನ್ನಡ ಧ್ವಜಸ್ತಂಭದ ಕಟ್ಟೆಯನ್ನು ತೆರವುಗೊಳಿಸಿದೆ. ಸ್ಥಳಕ್ಕೆ ಆಗಮಿಸದೆ ಮನೆಯಿಂದಲೇ ಸೂಚನೆ ನೀಡಿ ಮೂರನೇ ವ್ಯಕ್ತಿಗಳಿಂದ ಕಾರ್ಯಾಚರಣೆ ನಡೆಸಲಾಗಿದೆ. ಈ ಬಗ್ಗೆ ಬಿಡಿಎ ಮುಖ್ಯಸ್ಥರು ಸಂಬಂಧಿಸಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು.
- ಗೋವಿಂದರಾಜು, ಅರ್ಕಾವತಿ ಲೇಔಟ್ 8ನೇ ಬ್ಲಾಕ್ ನಿವಾಸಿ