ಪುರಸಭೆ ವ್ಯಾಪ್ತಿಯ 7 ನೇ ವಾರ್ಡ್‌ನಲ್ಲಿ ಅವೈಜ್ಞಾನಿಕ ಚರಂಡಿ ಕಾಮಗಾರಿ ಹಾಗೂ ಸ್ಲ್ಯಾಬ್ ಕೆಳಗಿನ ಕಸ ಕಡ್ಡಿಗಳನ್ನು ವೀಕ್ಷಿಸಿದ ಸ್ಥಳೀಯರು.  
ಜಿಲ್ಲೆ

ಅವೈಜ್ಞಾನಿಕ ಕಾಮಗಾರಿಗೆ ನಿವಾಸಿಗಳು ಹೈರಾಣ

ಬೇಲೂರು: ಅವೈಜ್ಞಾನಿಕ ಚರಂಡಿ ಕಾಮಗಾರಿ ಹಾಗೂ ಸ್ಲ್ಯಾಬ್ ಕೆಳಗಿನ ಕಸ ತೆರವುಗೊಳಿಸದ ಕಾರಣ ಪುರಸಭೆಯ 7ನೇ ವಾರ್ಡಿನ ನಿವಾಸಿಗಳು ಚರಂಡಿಯಲ್ಲಿ ನಿಂತ ಕೊಳಚೆ ನೀರಿನ ದುರ್ವಾಸನೆಯಿಂದ ನರಳುವಂತ್ತಾಗಿದ್ದು, ತಕ್ಷಣವೇ ಸ್ವಚ್ಛಗೊಳಿಸುವಂತೆ ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳೀಯರು ಒತ್ತಾಯಿಸಿದ್ದಾರೆ.

ಪುರಸಭೆ ವ್ಯಾಪ್ತಿಯ ಪಟ್ಟಣದ 7ನೇ ವಾರ್ಡ್‌ನಲ್ಲಿ ಕೆಲ ದಿನಗಳ ಹಿಂದೆ ಸಾರ್ವಜನಿಕರ ಅನುಕೂಲಕ್ಕಾಗಿ ಚರಂಡಿ ಹಾಗೂ ಸ್ಲ್ಯಾಬ್ ಕಾಮಗಾರಿಯನ್ನು ಗುತ್ತಿಗೆದಾರರು ನಿರ್ವಹಿಸಿದ್ದರು. ಆದರೆ ಚರಂಡಿ ಮತ್ತು ಸ್ಲ್ಯಾಬ್‌ಗಳನ್ನು ನಿರ್ಮಿಸಿದ ನಂತರ ಅದರ ಕೆಳ ಭಾಗದಲ್ಲಿದ್ದ ಹಳೆಯ ಕಾಂಕ್ರೀಟ್ ಕಸ ಕಡ್ಡಿಗಳು ಹಾಗೂ ಹಳೆಯ ಚರಂಡಿ ಅವಶೇಷಗಳನ್ನು ಮೇಲೆ ತೆರವುಗೊಳಿಸದೇ ಹಾಗೆಯೇ ಬಿಟ್ಟಿರುವುದರಿಂದ ಸಾರ್ವಜನಿಕರ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ಜತೆಗೆ ಚರಂಡಿಯಲ್ಲಿ ನೀರು ನಿಂತು ಕೊಳೆತು ದುರ್ವಾಸನೆ ಬೀರುತ್ತಿದೆ. ಇದರಿಂದ ಅಕ್ಕಪಕ್ಕದ ಸಾರ್ವಜನಿಕರು ನರಳುವಂತ್ತಾಗಿದೆ. ಅಲ್ಲದೆ ಗುತ್ತಿಗೆದಾರ ಕಾಮಗಾರಿ ಮಾಡಿದರೂ ಸರಿಯಾದ ರೀತಿಯಲ್ಲಿ ಕ್ಯೂರಿಂಗ್ ಮಾಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

ಕಾಮಗಾರಿ ಸ್ಥಳ ಪರಿಶೀಲಿಸಿ ಮಾತನಾಡಿದ ಸ್ಥಳೀಯ ಮುಖಂಡ ಬಿ.ಎಂ.ಸಂತೋಷ್, ಗುತ್ತಿಗೆದಾರ ಕೆಲಸ ಮುಗಿಸಿದ ನಂತರ ಚರಂಡಿಯಲ್ಲಿದ್ದ ಕಸವನ್ನು ಸ್ವಚ್ಛಗೊಳಿಸದೇ ಹಾಗೂ ಸ್ಲ್ಯಾಬ್‌ಗೆ ಹಾಕಿದ್ದ ಮಣ್ಣು ಹಾಗೂ ಕಾಂಕ್ರೀಟನ್ನು ತೆಗೆಯದ ಕಾರಣ ಚರಂಡಿಯೊಳಗೆ ಗಲೀಜು ಮತ್ತು ಕಸ ನೀರು ತುಂಬಿಕೊಂಡು ದುರ್ವಾಸನೆಯಿಂದ ಸ್ಥಳೀಯರು ನರಳುವಂತಾಗಿದೆ. ಜತೆಗೆ ಜನರು ರಸ್ತೆಯಲ್ಲಿ ಓಡಾಡಲು ಪರದಾಡುತ್ತಿದ್ದು ಪುರಸಭೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ತಕ್ಷಣ ಚರಂಡಿ ಕಸ ತೆಗೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸ್ಥಳೀಯರಾದ ಮಂಜೋಜೀರಾವ್, ಕಿರಣ್, ಕೇಬಲ್ ವಿಜಯಕುಮಾರ್, ಜೀವನ್ ಇದ್ದರು.