ಮೈಸೂರು: ಏಕಲವ್ಯ ಮಾದರಿ ವಸತಿ ಶಾಲೆಗಳ ರಾಷ್ಟ್ರೀಯ ಕ್ರೀಡಾಕೂಟವನ್ನು ಜ.8ರಿಂದ 12 ರವರೆಗೆ ಮೈಸೂರಿನಲ್ಲಿ ಆಯೋಜಿಸಲಾಗುವುದು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕ್ರೀಡಾ ಹಾಗೂ ಯುವಸಬಲೀಕರಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್ ಪ್ರಸಾದ್ ತಿಳಿಸಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು
ಜ.7ರಂದು ಕೇಂದ್ರ ಸಚಿವ ಅರ್ಜುನ್ ಮುಂಡಾ ಸೇರಿದಂತೆ ರಾಜ್ಯದ ವಿವಿಧ ಸಚಿವರು, ಗಣ್ಯ ವ್ಯಕ್ತಿಗಳು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ವಿವಿಧ ರಾಜ್ಯಗಳಿಂದ 4,500 ಕ್ರೀಡಾಪಟುಗಳು, 1500 ಶಾಲಾ ಶಿಕ್ಷಕರು ಸಿಬ್ಬಂದಿ ಸೇರಿದಂತೆ ಸುಮಾರು 6,000 ಜನ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಏಕಲವ್ಯ ಮಾದರಿ ವಸತಿ ಶಾಲೆಯು ಕೇಂದ್ರ ಸರ್ಕಾರ ನಡೆಸುತ್ತಿರುವ ಶಾಲೆಯಾಗಿದ್ದು, 20 ಕೋಟಿ ರೂ.ವೆಚ್ಚ ಅನುದಾನದಲ್ಲಿ ಸದರಿ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಈ ಬಾರಿ ಆಯೋಜಿಸಲಾಗುತ್ತಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
ಅಂದಾಜು 5 ಕ್ರೀಡಾಂಗಣಗಳಲ್ಲಿ ಏಕಕಾಲದಲ್ಲಿ ಕ್ರೀಡಾಸ್ಪರ್ಧೆಗಳು ಜರುಗಲಿದ್ದು, ಕ್ರೀಡಾಪಟುಗಳ ಸಂಚಾರಕ್ಕೆ ವಾಹನ ವ್ಯವಸ್ಥೆ, ಕ್ರೀಡಾಂಗಣಗಳ ಸ್ವಚ್ಛತೆ, ಊಟದ ವ್ಯವಸ್ಥೆ, ಶೌಚಗೃಹ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆ, ಅಂಬುಲೆನ್ಸ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ಸೇರಿದಂತೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.
ಕ್ರೀಡಾಪಟುಗಳಿಗೆ ಮೈಸೂರಿನ ಸಂಸ್ಕೃತಿ ಪರಂಪರೆಯನ್ನು ಪರಿಚಯಿಸುವ ವ್ಯವಸ್ಥೆ ಆಗಬೇಕು. ದೀಪಾಲಂಕಾರ ಹಾಗೂ ಚಾಮುಂಡಿ ಬೆಟ್ಟ ವೀಕ್ಷಣೆಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಡಾ. ಜಿತೇಂದ್ರ ಶೆಟ್ಟಿ ಮಾತನಾಡಿ, 10 ಗುಂಪು ಕ್ರೀಡಾಸ್ಪರ್ಧೆ, 18 ಅಥ್ಲೆಟಿಕ್ಸ್ ಸ್ಪರ್ಧೆಗಳು ನಡೆಯಲಿವೆ. ಕ್ರೀಡೆ ನಡೆಯುವ ಸ್ಥಳ, ಸಮಯ, ಕೆಲಸಗಳಿಗೆ ನಿಯೋಜಿಸಲ್ಪಟ್ಟ ನೋಡಲ್ ಅಧಿಕಾರಿಗಳ ವಿವರ ಎಲ್ಲವನ್ನು ಮುಂಚಿತವಾಗಿಯೇ ತಲುಪಿಸುವ ವ್ಯವಸ್ಥೆ ಆಗುತ್ತದೆ. ಈಗಾಗಲೇ 3500 ಕ್ರೀಡಾಪಟುಗಳಿಗೆ ವಿಮೆ ಮಾಡಿಸಲಾಗಿದೆ. ಕ್ರೀಡಾಕೂಟದಲ್ಲಿ ಕೋವಿಡ್ ಸೂಚನೆ ಪಾಲಿಸಲಾಗುವುದು. ಪ್ರತಿಯೊಂದು ರಾಜ್ಯಕ್ಕೂ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.
ಜ.15ರಂದು ನೈಜ ದುರ್ಬಲ ಬುಡಕಟ್ಟು ಜನಾಂಗದವರ ಜತೆಗೆ ಪ್ರಧಾನಮಂತ್ರಿ ವಿಡಿಯೋ ಸಂವಾದ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯಲಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಮಂಜುನಾಥ್ ಪ್ರಸಾದ್ ತಿಳಿಸಿದರು.
ದುರ್ಬಲ ಬುಡಕಟ್ಟು ಜನಾಂಗದ ಸಂಖ್ಯೆ 20 ಲಕ್ಷವಿದ್ದು, ರಾಜ್ಯದಲ್ಲಿ 70 ಸಾವಿರ ಜನಸಂಖ್ಯೆ ಇದೆ. ಆದಿವಾಸಿ ದುರ್ಬಲ ಬುಡಕಟ್ಟು ಜನಾಂಗದ ಅಭಿವೃದ್ಧಿ ಯೋಜನೆ ಅಡಿ 24 ಸಾವಿರ ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದ್ದು, ಸದರಿ ಯೋಜನೆಯು ಆದಿವಾಸಿಗಳ ಮನೆ ನಿರ್ಮಾಣ, ರಸ್ತೆ ನಿರ್ಮಾಣ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಶಾಲೆ, ವಿದ್ಯಾರ್ಥಿ ನಿಲಯ, ಆಸ್ಪತ್ರೆ ನಿರ್ಮಾಣ, ಅಂಗನವಾಡಿ ನಿರ್ಮಾಣ, ಸಮುದಾಯ ಭವನ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ಒದಗಿಸುವುದಾಗಿದೆ ಎಂದರು.
ಈ ಕುರಿತು ಪ್ರಧಾನ ಮಂತ್ರಿಯವರು ನಡೆಸಲಿರುವ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ 50 ರಿಂದ 75 ಆದಿವಾಸಿ ಜನರು ಭಾಗವಹಿಸಲಿದ್ದು, ಸಕಲ ಸಿದ್ಧತೆ ಮಾಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ಪರಿಶಿಷ್ಟ ವರ್ಗಗಳ ಇಲಾಖೆಯ ನಿರ್ದೇಶಕ ಕಲ್ಲೇಶ್, ಅಪರ ಜಿಲ್ಲಾಧಿಕಾರಿ ಆರ್ . ಲೋಕನಾಥ್, ಉಪ ಪೋಲಿಸ್ ಆಯುಕ್ತ ಜಹ್ನಾವಿ, ಪಾಲಿಕೆ ಆಯುಕ್ತ ಆಶಾದ್ ಉರ್ ರೆಹ್ಮಾನ್ ಶರೀಫ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ, ಯೋಜನಾ ನಿರ್ದೇಶಕ ಮುನಿರಾಜು ಹಾಗೂ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಅಶೋಕ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.