ಸಿಂಧನೂರು: ವಲ್ಕಂದಿನ್ನಿ ಗ್ರಾಮದ ಕಸ್ತೂರ್ ಬಾ ಬಾಲಕಿಯರ ವಸತಿ ಶಾಲೆಯ ಅಡುಗೆ ಸಿಬ್ಬಂದಿ, ವಾರ್ಡನ್ ಮತ್ತು ವಾಚ್‌ಮನ್ ವಜಾಗೊಳಿಸಲು ಪ್ರಯತ್ನಿಸುತ್ತಿರುವ ಮುಖ್ಯಶಿಕ್ಷಕಿ ಲಕ್ಷ್ಮೀ ವಿರುದ್ಧ ಕ್ರಮ ವಹಿಸಬೇಕೆಂದು ಒತ್ತಾಯಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪ್ರಭಾರ ವ್ಯವಸ್ಥಾಪಕ ಚಾಂದ್ ಪಾಷಾಗೆ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ತಾಲೂಕು ಸಮಿತಿಯಿಂದ ಬುಧವಾರ ಮನವಿ ಸಲ್ಲಿಸಲಾಯಿತು.
ವಲ್ಕಂದಿನ್ನಿ ಕಸ್ತೂರ್ ಬಾ ವಸತಿ ಶಾಲೆಯ ಅಡುಗೆ ಸಿಬ್ಬಂದಿ, ವಾರ್ಡನ್, ವಾಚ್‌ಮನ್ ಏಳೆಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆದರೆ, ಶಾಲೆಯ ಮುಖ್ಯಶಿಕ್ಷಕಿ ಹಾಗೂ ಸ್ಥಳೀಯ ಕೆಲವು ರಾಜಕೀಯ ಪ್ರಮುಖರು ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.
ಸಿಬ್ಬಂದಿಯನ್ನು ಕೆಲಸದಲ್ಲಿ ಮುಂದುವರಿಸಬೇಕು ಹಾಗೂ ಕಿರುಕುಳ ನೀಡದಂತೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಗುತ್ತಿಗೆ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಸಂಬಂಧಪಟ್ಟ ಸಂಸ್ಥೆ ಹಾಗೂ ಶಿಕ್ಷಣ ಇಲಾಖೆ ವಿರುದ್ಧ ಕಾರ್ಮಿಕ ಇಲಾಖೆಗೆ ದೂರು ಸಲ್ಲಿಸಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.