ಜಿಲ್ಲೆ

ವಿದ್ಯಾರ್ಥಿ ವೇತನಕ್ಕೆ ಆಗ್ರಹ : ವೈದ್ಯಕೀಯ ವಿದ್ಯಾರ್ಥಿಗಳಿಂದ ಅನಿರ್ದಿಷ್ಟ ಕಾಲ ಪ್ರತಿಭಟನೆ

ಪಂಕಜ ಕೆ.ಎಂ.

ಬೆಂಗಳೂರು: ವಿದ್ಯಾರ್ಥಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ, ಕರ್ನಾಟಕ ನಿವಾಸಿ ವೈದ್ಯರ ಸಂಘದ ನೇತೃತ್ವದಲ್ಲಿ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳ ವೈದ್ಯ ವಿದ್ಯಾರ್ಥಿಗಳು ಸೋಮವಾರದಿಂದ ರಾಜ್ಯಾದ್ಯಂತ ಅನಿರ್ದಿಷ್ಟ ಕಾಲ ಮುಷ್ಕರ ಆರಂಭಿಸಿದ್ದಾರೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ 600 ವಿದ್ಯಾರ್ಥಿಗಳು ಪ್ರತಿಭಟನೆ ಕೈಗೊಂಡಿದ್ದು, ನಿತ್ಯ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಮುಷ್ಕರ ನಡೆಸಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಸೇರ್ಪಡೆಗೊಳ್ಳಲಿದ್ದಾರೆ. ಸದ್ಯಕ್ಕೆ ರೋಗಿಗಳಿಗೆ ಯಾವುದೇ ತೊಂದರೆ ಇಲ್ಲ.
ಬೇಡಿಕೆ ಈಡೇರುವವರೆಗೂ ಹಿಂದೆ ಸರಿಯುವ ಮಾತೇ ಇಲ್ಲ. ಹಾಗೇನಾದರೂ ಹೋರಾಟ ತೀವ್ರಗೊಂಡಲ್ಲಿ ಆಗುವ ಸಮಸ್ಯೆಗಳಿಗೆ ನಾವು ಜವಾಬ್ದಾರರಲ್ಲ. ಹಾಗಾಗಿ ಸರ್ಕಾರ ಕೂಡಲೇ ನಮ್ಮ ಮನವಿಗೆ ಸ್ಪಂಧಿಸಬೇಕು ಎಂದು ಸಂಘದ ಅಧ್ಯಕ್ಷ ಡಾ. ಸಿರೀಶ್ ಶಿವರಾಮಯ್ಯ ಆಗ್ರಹಿಸಿದರು.

ಪ್ರಸ್ತುತ ಕರ್ನಾಟಕದ ನಿವಾಸಿ ವೈದ್ಯರು ದೇಶದಲ್ಲೇ ಅತ್ಯಂತ ಕಡಿಮೆ ವಿದ್ಯಾರ್ಥಿ ವೇತನ ಪಡೆಯುತ್ತಿದ್ದಾರೆ. ಆದರೆ, ಶಿಕ್ಷಣದ ಶುಲ್ಕ ಅತ್ಯಧಿಕವಾಗಿದೆ. ನಮ್ಮ ಬೇಡಿಕೆಗಳು ಕೇವಲ ಉತ್ತಮ ವೇತನಕ್ಕಾಗಿ ಮಾತ್ರ ಅಲ್ಲ, ನಿವಾಸಿ ವೈದ್ಯರು ಆರೋಗ್ಯ ವ್ಯವಸ್ಥೆಯಲ್ಲಿ ವಹಿಸುವ ನಿರ್ಣಾಯಕ ಪಾತ್ರ ಗುರುತಿಸಬೇಕೆಂಬುದು ನಮ್ಮ ಒತ್ತಾಯ. ನಾವು ಆಸ್ಪತ್ರೆಗಳ ಬೆನ್ನೆಲುಬಾಗಿದ್ದೇವೆ. ಅಗತ್ಯ ಆರೈಕೆಯನ್ನು ಒದಗಿಸುತ್ತೇವೆ. ನಾವು ಜನರ ಸೇವೆ ಮಾಡಲು ಬಂದಿದ್ದೇವೆ. ನ್ಯಾಯಯುತವಾಗಿ ನಮಗೆ ಸಲ್ಲಬೇಕಾದ ವಿದ್ಯಾರ್ಥಿ ವೇತನ ನೀಡುವವರೆಗೂ ಪ್ರತಿಭಟನೆ ಮುಂದುವರಿಸಲಿದ್ದೇವೆ ಎಂದು ಹೇಳಿದರು.

ವೈದ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದ ಪ್ರಮಖ ಆಸ್ಪತ್ರೆಗಳಾದ ವಿಕ್ಟೋರಿಯಾ, ಕಿದ್ವಾಯಿ, ಜಯದೇವ, ಬೌರಿಂಗ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಯಾವುದೇ ಹೆಚ್ಚಿನ ತೊಂದರೆಯಾಗಿಲ್ಲವಾದರೂ, ಹೊರ ರೋಗಿಗಳ ವಿಭಾಗದಲ್ಲಿ ಸೇವೆ ಪಡೆಯಲು ಹೆಚ್ಚು ಸಮಯ ರೋಗಿಗಳು ಕಾಯಬೇಕಾಯಿತು.