ಮಂಡ್ಯ: ಪ್ರತಿ ಕೆ.ಜಿ ದ್ವಿತಳಿ ರೇಷ್ಮೆ ಗೂಡಿಗೆ ಕನಿಷ್ಟ 800 ರೂ ಮತ್ತು ಸಿಬಿ ಗೂಡಿಗೆ 600 ರೂ ಬೆಲೆ ನಿಗದಿಪಡಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾ ರೇಷ್ಮೆ ಬೆಳೆಗಾರರ ಒಕ್ಕೂಟ ಮತ್ತು ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಗುಡಿದೊಡ್ಡಿ ಶಿವಲಿಂಗಯ್ಯ ಆಗ್ರಹಿಸಿದರು.
ಈವರೆಗೆ ಪ್ರತಿ ಕೆ.ಜಿ ದ್ವಿತಳಿ ರೇಷ್ಮೆಗೂಡಿಗೆ 800 ರಿಂದ 900 ರೂ, ಸಿಬಿ ಗೂಡಿಗೆ 600 ರಿಂದ 700 ರೂ ಬೆಲೆ ಇತ್ತು. ಆದರೆ, ಪ್ರಸ್ತುತ 400 ರಿಂದ 500 ರೂನಷ್ಟು ಕುಸಿತ ಕಂಡಿದೆ. ವರ್ತಕರು ಕಡಿಮೆ ಬೆಲೆಗೆ ರೇಷ್ಮೆ ಗೂಡು ಖರೀದಿಸುತ್ತಿದ್ದಾರೆ. ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವ ರೇಷ್ಮೆ ಬೆಳೆಗಾರರ ಬದುಕು ಬೀದಿಗೆ ಬಿದ್ದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.
ಕೆಲ ದಿನದ ಹಿಂದೆ ಪ್ರತಿ ಕೆ.ಜಿ ರೇಷ್ಮೆ ನೂಲಿಗೆ 8 ರಿಂದ 9 ಸಾವಿರ ರೂ ಇತ್ತು. ಆದರೀಗ ಅದು 3 ರಿಂದ 4 ಸಾವಿರ ರೂಗೆ ಕುಸಿದಿದೆ. ಇದರಿಂದಾಗಿ ನೂಲು ಬಿಚ್ಚಾಣಿಕೆದಾರರ ಕುಟುಂಬಗಳು ತೊಂದರೆಗೆ ಸಿಲುಕಿವೆ. ಕೋವಿಡ್ ಸಮಯದಲ್ಲಿ ನಗರ/ಪಟ್ಟಣಗಳಿಂದ ಹಳ್ಳಿಗಳಿಗೆ ವಾಪಾಸಾಗಿದ್ದ ಎಷ್ಟೋ ಯುವಜನರು ಬದುಕಿಗಾಗಿ ರೇಷ್ಮೆ ಕೃಷಿ ಆರಂಭಿಸಿದ್ದರು. ಆದರೆ ರೇಷ್ಮೆ ಗೂಡಿನ ಬೆಲೆ ಕುಸಿತದಿಂದಾಗಿ ಆರ್ಥಿಕವಾಗಿ ನಲುಗಿರುವ ರೇಷ್ಮೆ ಬೆಳೆಗಾರರು ಮತ್ತು ಬಿಚ್ಚಾಣಿದಾರರ ಹಿತ ಕಾಯಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಜತೆಗೆ ಹಿಂದಿನಂತೆ ರೇಷ್ಮೆ ಗೂಡಿನ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಬೇಕು. ಇಲ್ಲವೇ ಸರ್ಕಾರವೇ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿದರು.
ಟ್ರಸ್ಟ್‌ನ ಪದಾಧಿಕಾರಿಗಳಾದ ಬೂದನೂರು ಅಪ್ಪಾಜಿಗೌಡ, ದುಂಡನಹಳ್ಳಿ ಅಪ್ಪಾಜಿ, ಕಾಗೆಹಳ್ಳದದೊಡ್ಡಿ ಚನ್ನಪ್ಪ, ಕೋಣಸಾಲೆ ಮರಿಸ್ವಾಮಿಗೌಡ, ಮುದ್ದುಂಗೆರೆ ಪುಟ್ಟೇಗೌಡ ಹಾಜರಿದ್ದರು.