ಮಡಿಕೇರಿ:
ಕೊಡಗು ಎಂದ ಕೂಡಲೇ ಮೊದಲು ನೆನಪಾಗುವುದೇ ಕಾಫಿ, ಕರಿಮೆಣಸು, ಜೇನು, ಏಲಕ್ಕಿ, ಭತ್ತ.. ಇವು ಜಿಲ್ಲೆಯ ಸಾಂಪ್ರದಾಯಿಕ ಬೆಳೆಗಳಾಗಿ ಬಹಳ ಹಿಂದಿನಿAದಲೂ ಗುರುತಿಸಿಕೊಂಡಿವೆ. ಇದರಾಚೆಯೂ ಕೆಲವು ಪ್ರಯೋಗಶೀಲ ಕೃಷಿಕರು ಇತರ ಕೃಷಿಯತ್ತ ಗಮನ ಹರಿಸಿ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಇಂಥವರಲ್ಲಿ ಕುಶಾಲನಗರ ತಾಲೂಕು ಕೂಡ್ಲೂರಿನ ರೈತ ರಾಮಪ್ಪ ಮತ್ತು ಪುತ್ರ ಯೋಗೇಶ್ ಕೂಡ ಸೇರಿದ್ದು ಸಮಗ್ರ ಕೃಷಿ ಜತೆಗೆ ರೇಷ್ಮೆಯಲ್ಲೂ ಹೆಸರು ಮಾಡುತ್ತಿದ್ದಾರೆ.
ನಾಲ್ಕು ದಶಕಗಳ ಹಿಂದೆ ಜಿಲ್ಲೆಯ ಸಾಂಪ್ರದಾಯಿಕ ಬೆಳೆಗಳ ಜತೆಗೆ ಇಲ್ಲಿ ರೇಷ್ಮೆಯೂ ಜನಪ್ರಿಯ ಕೃಷಿ ಆಗಿತ್ತು ಎನ್ನುವುದನ್ನು ಈಗ ಕಲ್ಪಿಸಿಕೊಳ್ಳಲು ಕೂಡ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅಂದು ಜಿಲ್ಲೆಯ ಮೂರು ತಾಲೂಕುಗಳಲ್ಲೂ ರೇಷ್ಮೆ ಕೃಷಿ ಸಾಕಷ್ಟು ವೈಭವ ಕಂಡಿತ್ತು. ಅದರಲ್ಲೂ ಮಡಿಕೇರಿ ಮತ್ತು ಅವಿಭಜಿತ ಸೋಮವಾರಪೇಟೆ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಗೂಡು ಉತ್ಪಾದನೆ ಆಗುತ್ತಿತ್ತು. ಕುಶಾಲನಗರದ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿ ಸುಸಜ್ಜಿತ ರೇಷ್ಮೆ ಮಾರುಕಟ್ಟೆಯೂ ಇತ್ತು.
ನಂತರದ ದಿನಗಳಲ್ಲಿ ರೇಷ್ಮೆ ಮಾರುಕಟ್ಟೆಯ ಏರು-ಪೇರು, ಅಂದಿನ ಕೆಲವು ಅಧಿಕಾರಿಗಳ ಬೇಜವಾಬ್ದಾರಿತ, ಶುಂಠಿ ರೀತಿಯ ಬೆಳೆಗಳ ಕಡೆಗೆ ರೈತರ ಆಕರ್ಷಣೆ, ಕಾಫಿಗೆ ಬೆಲೆ ಹೆಚ್ಚಳ, ಪ್ರವಾಸೋದ್ಯಮದಲ್ಲಿ ಉದ್ಯೋಗ ಸೃಷ್ಟಿ ಮತ್ತಿತರ ಕಾರಣಗಳಿಂದ ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಇಳಿಮುಖ ಆಗುತ್ತಾ ಬಂತು. 2 ದಶಕಗಳ ಹಿಂದೆ ರೇಷ್ಮೆ ಗೂಡು ಉತ್ಪಾದನೆ ಶೂನ್ಯ ಪ್ರಮಾಣಕ್ಕೆ ಇಳಿದುಬಿಟ್ಟಿತ್ತು. ಜಿಲ್ಲೆಯಲ್ಲಿ ರೇಷ್ಮೆ ಬೆಳೆಯುವ ಪ್ರದೇಶವೇ ಇಲ್ಲವಾಗುತ್ತಿದ್ದಂತೆ ಕುಶಾಲನಗರದಲ್ಲಿ ಇದ್ದ ರೇಷ್ಮೆ ಮಾರುಕಟ್ಟೆ ಬಂದ್ ಆಯಿತು. ಆ ಕಟ್ಟಡದಲ್ಲಿ ಈಗ ಕುಶಾಲನಗರ ಗ್ರಾಮಾಂತರ ಮತ್ತು ಟ್ರಾಫಿಕ್ ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ.
ಜಿಲ್ಲೆಗೆ ಇದ್ದ ರೇಷ್ಮೆ ಇಲಾಖೆ ಉಪ ನಿರ್ದೇಶಕರ ಹುದ್ದೆಯೂ ಕಾಲಕ್ರಮೇಣ ರದ್ದಾಯಿತು.
ಇದೀಗ ಪಕ್ಕದ ಪಿರಿಯಾಪಟ್ಟಣ ತಾಲೂಕಿನ ಉಸ್ತುವಾರಿಯಲ್ಲಿ ಜಿಲ್ಲೆಯ ರೇಷ್ಮೆ ಇಲಾಖೆ ಕಾರ್ಯಾಚರಿಸುವ ಸ್ಥಿತಿ ತಲುಪಿದೆ. ಇದರ ಜತೆಗೆ ಇಲಾಖೆಯಿಂದ ವರ್ಗ ಆದ, ನಿವೃತ್ತರಾದ ಸಿಬ್ಬಂದಿ ಜಾಗಕ್ಕೆ ಬದಲಿ ನೇಮಕವೂ ಆಗಿಲ್ಲ. ಒಟ್ಟಾರೆಯಾಗಿ ರೇಷ್ಮೆ ಇಲಾಖೆ ಅನಾಥವಾಗಿದ್ದು ರೇಷ್ಮೆ ಕೃಷಿ ವೈಭವದ ದಿನಗಳನ್ನು ಕಳೆದುಕೊಂಡು ಕೊಡಗಿನಲ್ಲಿ ಇನ್ನು ಕೇವಲ ನೆನಪಾಗಿ ಉಳಿಯಲಿದೆ ಎಂದುಕೊAಡಿರುವಾಗ ಜಿಲ್ಲೆಯಲ್ಲಿ ಮತ್ತೆ ರೇಷ್ಮೆಯ ಕೃಷಿ ಬೆಳಕು ಕಾಣುತ್ತಿದೆ.
ಇತ್ತೀಚಿನ 6-7 ವರ್ಷಗಳಿಂದ ಕೆಲವು ಉತ್ಸಾಹಿ ಸಿಬ್ಬಂದಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ರೇಷ್ಮೆಗೆ ಮತ್ತೆ ಜೀವ ಕೊಡುವ ಕೆಲಸ ಶುರು ಮಾಡಿದ್ದಾರೆ. ಈ ಪ್ರಯತ್ನ ನಿಧಾನಕ್ಕೆ ಫಲ ಕೊಡಲಾರಂಭಿಸಿದ್ದು, ಒಂದೊಮ್ಮೆ ರೇಷ್ಮೆ ಕೃಷಿಯಲ್ಲಿ ಹೆಸರು ಮಾಡಿದ್ದ ಕೊಡಗು ಮತ್ತೊಮ್ಮೆ ಗತ ವೈಭವಕ್ಕೆ ಮರಳುವ ಲP್ಷÀಣಗಳು ಕಾಣಿಸುತ್ತಿದ್ದು ಕುಶಾಲನಗರ ತಾಲೂಕು ಕೂಡ್ಲೂರು ಗ್ರಾಮದ ರಾಮಪ್ಪ ಮತ್ತು ಪುತ್ರ ಬಿಬಿಎಂ ಪದವೀಧರ ಯೋಗೇಶ್ ರೇಷ್ಮೆ ಕೃಷಿಯಲ್ಲಿ ಸಾಧನೆಯ ದಾರಿಯಲ್ಲಿದ್ದಾರೆ.
ಅಪ್ಪ ಮತ್ತು ಮಗ ಸೇರಿಕೊಂಡು 2021ರಲ್ಲಿ ರೇಷ್ಮೆ ಕೃಷಿ ಶುರು ಮಾಡಿದರು. ವರ್ಷದಿಂದ ವರ್ಷಕ್ಕೆ ಅನುಭವ ಹೆಚ್ಚಿಸಿಕೊಳ್ಳುತ್ತಾ ಮಾದರಿ ರೇಷ್ಮೆ ಕೃಷಿಕರಾಗಿ ಈ ಭಾಗದಲ್ಲಿ ಹೆಸರು ಮಾಡಿದ್ದಾರೆ. ತಮ್ಮ ಜಮೀನಿನಲ್ಲಿ ಒಂದೂ ಕಾಲು ಎಕರೆ ಪ್ರದೇಶವನ್ನು ರೇಷ್ಮೆ ಕೃಷಿಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಷ್ಟು ಜಾಗದಲ್ಲಿ ವರ್ಷಕ್ಕೆ 800 ಕೆಜಿಗೂ ಅಧಿಕ ಪ್ರಮಾಣದಲ್ಲಿ ರೇಷ್ಮೆ ಗೂಡು ಉತ್ಪಾದಿಸುತ್ತಿದ್ದಾರೆ. ರೇಷ್ಮೆ ಹುಳು ಸಾಕಾಣೆಗಾಗಿ ಇವರು ತಮ್ಮ ಜಮೀನಿನಲ್ಲಿಯೇ 20*50 ಅಳತೆಯಲ್ಲಿ ಮನೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ಅದರಲ್ಲಿ ಆಧುನಿಕ ಯಂತ್ರೋಪಕರಣ ಅಳವಡಿಸಿ, 2 ಬ್ಯಾಚ್‌ನಲ್ಲಿ ಹುಳು ಸಾಕುತ್ತಿದ್ದಾರೆ.
ರಾಮಪ್ಪ ಮತ್ತು ಯೋಗೇಶ್ ಸಿಎಸ್‌ಆರ್ 2 ತಳಿಯ ಹುಳು ಸಾಕುತ್ತಾರೆ. ಈ ತಳಿಯ ಹುಳುಗಳು ಉತ್ಪಾದಿಸುವ ರೇಷ್ಮೆ ಗೂಡನ್ನು ಸಾಮಾನ್ಯವಾಗಿ ರೇಷ್ಮೆ ನೂಲು ತೆಗೆಯಲು ಬಳಸುವುದಿಲ್ಲ. ಚಿಟ್ಟೆ ಮಾಡಿ, ಮೊಟ್ಟೆ ಇಡಲೆಂದೇ ಈ ತಳಿ ಸಾಕಲಾಗುತ್ತದೆ. 26 ದಿನಗಳ ಕಾಲ ಹುಳು ಬೆಳೆದು 7 ದಿನಗಳ ಕಾಲ ಗೂಡು ಕಟ್ಟಿದ ನಂತರ ಇವರು ಇಂತಹ ತಳಿಗಳಿಗೆಂದೇ ಇರುವ ಹಾಸನ, ತುಮಕೂರು ಅಥವಾ ಬೆಂಗಳೂರು ರೇಷ್ಮೆ ಮಾರುಕಟ್ಟೆಗಳಲ್ಲಿ ದರ ಹೆಚ್ಚು ಸಿಗುವ ಕಡೆ ಮಾರಾಟ ಮಾಡುತ್ತಾರೆ.
ಒಂದು ಕೆ.ಜಿ. ರೇಷ್ಮೆ ಗೂಡಿಗೆ ಕನಿಷ್ಠ ಎಂದರೂ 600 ರೂ. ಗರಿಷ್ಠ ಎಂದರೆ 4-5 ಸಾವಿರದವರೆಗೂ ಬೆಲೆ ಸಿಗುತ್ತದೆ ಎಂದು ಯೋಗೇಶ್ ಹೇಳುತ್ತಾರೆ. ರೇಷ್ಮೆ ಹುಳುವಿಗೆ ಉಷ್ಣತೆ ಅತಿ ಮುಖ್ಯ. ಅದರಲ್ಲೂ 20ರಿಂದ 28 ಡಿಗ್ರಿ ಸೆಲ್ಸಿಯಸ್‌ವರೆಗೆ ಉಷ್ಣಾಂಶ ಇರುವಂತೆ ನೋಡಿಕೊಳ್ಳುವುದು ಅಗತ್ಯ. ಇಲ್ಲದೇ ಇದ್ದರೆ ಕಾಯಿಲೆಗೆ ಸಿಲುಕಿ ಹುಳುಗಳು ಸಾಯುತ್ತವೆ ಎಂಬುದು ಇವರ ಅನುಭವದ ಮಾತು. ಬೇಸಿಗೆ ಸಮಯದಲ್ಲಿ ಮನೆಯ ಛಾವಣಿ ಮೇಲೆ ತುಂತುರು ನೀರಾವರಿಯ ಮೂಲಕ ಅಧಿಕ ತಾಪಮಾನವನ್ನು ನಿಯಂತ್ರಿಸುತ್ತಾರೆ. ಮಳೆ ಮತ್ತು ಚಳಿಗಾಲದಲ್ಲಿ ಹೀಟರ್ ಮೂಲಕ ತಾಪಮಾನ ನಿಯಂತ್ರಣ ಮಾಡಲಾಗುತ್ತದೆ.
ರೇಷ್ಮೆ ಜತೆಯಲ್ಲಿ ಸಮಗ್ರ ಕೃಷಿ ಮೂಲಕವೂ ಇವರು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ತೆಂಗಿನ ತೋಟ, ಅಡಕೆ ತೋಟ, ಮೀನುಗಾರಿಕೆ ಹಾಗೂ ಹೈನುಗಾರಿಕೆಯ ಮೂಲಕ ಮಾದರಿ ಕೃಷಿ ಮಾಡುತ್ತಿದ್ದಾರೆ. ಇವರ ತೋಟದಲ್ಲಿ 70 ತೆಂಗಿನ ಮರಗಳು, 100 ಅಡಕೆ ಮರಗಳು, ಒಂದು ಮೀನು ಸಾಕುವ ಹೊಂಡ ಹಾಗೂ 3 ಹಸುಗಳಿವೆ. ಈ ಮೂಲಕವೂ ರಾಮಪ್ಪ ಮತ್ತು ಯೋಗೇಶ್ ಲಾಭದಾಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಮಾದರಿ ಕೃಷಿಕರು ಅನ್ನಿಸಿಕೊಂಡಿದ್ದಾರೆ.
ನಾವು ಕೇವಲ ಒಂದೂ ಕಾಲು ಎಕರೆ ಪ್ರದೇಶದಲ್ಲಿ ಮಾತ್ರ ರೇಷ್ಮೆ ಕೃಷಿ ಮಾಡುತ್ತಿದ್ದೇವೆ. ವರ್ಷಕ್ಕೆ 800 ಕೆ.ಜಿಗೂ ಅಧಿಕ ರೇಷ್ಮೆಗೂಡನ್ನು ಉತ್ಪಾದಿಸಲಾಗುತ್ತಿದೆ. ಹಾಸನ, ತುಮಕೂರು ಅಥವಾ ಬೆಂಗಳೂರು ರೇಷ್ಮೆ ಮಾರುಕಟ್ಟೆಗಳಲ್ಲಿ ದರ ಹೆಚ್ಚು ಸಿಗುವ ಕಡೆ ರೇಷ್ಮೆ ಗೂಡು ಮಾರಾಟ ಮಾಡುತ್ತೇವೆ. ನಾವು ಸಾಕುವ ತಳಿಯ ಹುಳುಗಳು ಉತ್ಪಾದಿಸುವ ರೇಷ್ಮೆ ಗೂಡನ್ನು ಸಾಮಾನ್ಯವಾಗಿ ರೇಷ್ಮೆ ನೂಲು ತೆಗೆಯಲು ಬಳಸುವುದಿಲ್ಲ. ಚಿಟ್ಟೆ ಮಾಡಿ, ಮೊಟ್ಟೆ ಇಡಲೆಂದೇ ಈ ತಳಿ ಸಾಕಲಾಗುತ್ತದೆ. ರೇಷ್ಮೆ ಜತೆಗೆ ಕಾಫಿ, ಅಡಿಕೆ, ಮೀನುಗಾರಿಕೆ, ಹೈನುಗಾರಿಕೆಯನ್ನೂ ನಡೆಸಲಾಗುತ್ತಿದೆ.
ಯೋಗೇಶ್, ಮಾದರಿ ಕೃಷಿಕ, ಕೂಡ್ಲೂರು