ಸಿಂಧನೂರು ಮಿನಿವಿಧಾನಸೌಧದ ಮುಂದೆ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು. ಭೋವಿ ಸಮಾಜ ಮುಖಂಡ ಅಶೋಕ ಉಮಲೂಟಿ, ಲಂಬಾಣಿ ಸಮಾಜದ ಅಧ್ಯಕ್ಷ ರವಿ ರಾಥೋಡ್, ಭೋವಿ ಸಮಾಜ ಅಧ್ಯಕ್ಷ ದುರುಗಪ್ಪ ಮಲ್ಲದಗುಡ್ಡ, ಕೊರಮ ಸಮಾಜ ಅಧ್ಯಕ್ಷ ರಾಮಕೃಷ್ಣ ಭಜಂತ್ರಿ ಇತರರಿದ್ದರು. 
ಜಿಲ್ಲೆ

ಒಳಮೀಸಲಾತಿಯ ಏಕ ಪಕ್ಷೀಯ ನಿರ್ಧಾರ ಸಲ್ಲ

ರುದ್ರಪ್ಪ ವಾಲಿ

ಸಿಂಧನೂರು: ಅಸಮರ್ಥನೀಯ ಹಾಗೂ ಅತಾರ್ಕಿಕ ದತ್ತಾಂಶಗಳನ್ನು ಆಧರಿಸಿದ, ಒಳಮೀಸಲಾತಿ ವರ್ಗೀಕರಣವನ್ನು ಸಚಿವ ಸಂಪುಟ ಸಭೆಯಲ್ಲಿ ತಿರಸ್ಕರಿಸಬೇಕು. ಕಾಂತರಾಜು ಆಯೋಗದ ವರದಿ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಸಚಿವ ಸಂಪುಟ ಸಭೆಯಲ್ಲಿ ಸರ್ಕಾರವು ಏಕಾಏಕಿ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಕುರಿತಂತೆ ಸಮರ್ಥನೀಯ ಹಾಗೂ ಅತಾರ್ಕಿಕ ದತ್ತಾಂಶಗಳನ್ನು ಆಧರಿಸಿ ಯಾವುದೇ ಏಕ ಪಕ್ಷ ನಿರ್ಧಾರಗಳನ್ನು ಕೈಗೊಳ್ಳಬಾರದು. 2011ರ ಜನಗಣತಿಯ ಅಂಕಿ ಅಂಶಗಳನ್ನು ಪರಿಗಣಿಸದೆ ರಾಜ್ಯದಲ್ಲಿ ಇತ್ತೀಚಿಗಿನ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಜಾತಿಗಣತಿ 2016 ಕಾಂತರಾಜು ಆಯೋಗದ ವರದಿಯನ್ನು ಕೂಡಲೇ ಬಹಿರಂಗಗೊಳಿಸಿ ಸದರಿ ವರದಿಯಲ್ಲಿರುವ ದತ್ತಾಂಶವನ್ನು ಪರಿಗಣಿಸಬೇಕು.

ಪರಿಶಿಷ್ಟ ಜಾತಿಯ 101 ಸಮುದಾಯಗಳ ಪೈಕಿ 51 ಜಾತಿಗಳು ಗುರುತಿಸಲ್ಪಟ್ಟ ಅಲೆಮಾರಿ ಮತ್ತು ವಿಮುಕ್ತ ಸಮುದಾಯಗಳಾಗಿದ್ದು ಇವುಗಳ ಸಾಮಾಜಿಕ ಹಿಂದುಳಿದಿರುವಿಕೆ ಶೈಕ್ಷಣಿಕ ಉದ್ಯೋಗಿಕ ಹಾಗೂ ರಾಜಕೀಯ ಮೀಸಲಾತಿ ಕುರಿತಾದ ಸಮರ್ಥನೀಯ ದತ್ತಾಂಶಗಳನ್ನು ಎಂಪೆರಿಕಲ್ ಡೇಟಾ ಕ್ರೂಡೀಕರಿಸಿ ವೈಜ್ಞಾನಿಕವಾಗಿ ವಿಶ್ಲೇಷಿಸಲು ಸಾಮಾಜಿಕ ಶೈಕ್ಷಣಿಕ ಮತ್ತು ಕಾನೂನು ಪರಿಣಿತಿಯುಳ್ಳ ತಜ್ಞರ ಸಮಿತಿಯನ್ನು ಕೂಡಲೆ ರಚಿಸಬೇಕು.

ಅಂಥ ತಜ್ಞರ ಸಮಿತಿಯ ವರದಿ ಪಡೆದು 101 ಜಾತಿಗಳ ಅಹವಾಲುಗಳನ್ನು ಮುಕ್ತವಾಗಿ ಆಲಿಸಿ ಸಮುದಾಯಗಳ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಚಿಂತಕರೊಂದಿಗೆ ಸಮಾಲೋಚನೆ ನಡೆಸಿ ನಂತರ ಪರಿಶಿಷ್ಟ ಜಾತಿ ಒಳ ಮೀಸಲಾತಿಯ ವರ್ಗೀಕರಣ ತೀರ್ಮಾನ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಭೋವಿ ಸಮಾಜ ಮುಖಂಡ ಅಶೋಕ ಉಮಲೂಟಿ, ಲಂಬಾಣಿ ಸಮಾಜದ ಅಧ್ಯಕ್ಷ ರವಿ ರಾಥೋಡ್, ಭೋವಿ ಸಮಾಜ ಅಧ್ಯಕ್ಷ ದುರುಗಪ್ಪ ಮಲ್ಲದಗುಡ್ಡ, ಕೊರಮ ಸಮಾಜ ಅಧ್ಯಕ್ಷ ರಾಮಕೃಷ್ಣ ಭಜಂತ್ರಿ, ಬಾಲಪ್ಪ ಭಜಂತ್ರಿ, ಯಮನಪ್ಪ ಭಜಂತ್ರಿ, ಮರಿಯಪ್ಪ ತುರುಡಗಿ, ಹನುಮಂತ ಕಾರಲಕುಂಟಿ, ಕೆ.ಎಸ್.ಮರಿಯಪ್ಪ, ಬಳ್ಳಾರಪ್ಪ ಭಜಂತ್ರಿ, ವೀರೇಶ ಭೋವಿ, ಗೋವಿಂದರಾಜ ಭಾವಿ, ಕೃಷ್ಣಪ್ಪ ರಾಠೋಡ್, ಚಂದ್ರು ಚೌವ್ಹಾಣ, ಅಂಬಣ್ಣ ಭೋವಿ, ಅಶೋಕ ಉಮಲೂಟಿ, ನಾಗಪ್ಪ ಕಲ್ಲೂರು, ಶ್ರೀನಿವಾಸ, ವಿನಯರಾಜ, ರಾಮಣ್ಣ ಭೋವಿ ಇತರರಿದ್ದರು.