ತುಮಕೂರು: ತುಮಕೂರು ವಿಶ್ವವಿದ್ಯಾಲಯದ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಮೀಸಲಾತಿ ನಿಯಮಗಳನ್ನು (ರೋಸ್ಟರ್ ಪದ್ಧತಿ) ಗಾಳಿಗೆ ತೂರಿರುವ ಆರೋಪ ಕೇಳಿಬಂದಿದ್ದು, ಪರಿಶಿಷ್ಟ ಹಾಗೂ ಹಿಂದುಳಿದ ವರ್ಗದ ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ.
ರೋಸ್ಟರ್ ಪದ್ಧತಿ ಪಾಲಿಸದೆ ಅನ್ಯಾಯವೆಸಗಲಾಗಿದ್ದು ಪ್ರವೇಶ ಪ್ರಕ್ರಿಯೆ ರದ್ದುಗೊಳಿಸಲು ನಿರ್ದೇಶಿಸಬೇಕೆಂದು ರಾಜ್ಯಪಾಲರಿಗೆ ವಿವಿಧ ಸಂಘಟನೆಗಳು ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ರಾಜಭವನ ವಿಶ್ವವಿದ್ಯಾಲಯದಿಂದ ವರದಿ ಕೇಳಿದೆ ಎನ್ನಲಾಗಿದೆ.
ಪ್ರಕರಣ ರಾಜಭವನದ ಅಂಗಳ ತಲುಪಿರುವ ಹಿನ್ನೆಲೆಯಲ್ಲಿ ವಿವಿ ಆಡಳಿತ ಈ ಬಗ್ಗೆ ಪರಿಶೀಲಿಸಲು ಕುಲಸಚಿವ ಪ್ರೊ.ಗಂಗಾನಾಯ್ಕೊ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿದ್ದು ಅ.6ರಂದು ಮೊದಲ ಸಭೆ ಕೂಡ ನಡೆದಿದೆ. ರೋಸ್ಟರ್ ಉಲ್ಲಂಸಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಈ ಬಗ್ಗೆ ಸಮಗ್ರ ದಾಖಲೆಗಳ ಪರಿಶೀಲನೆಗೆ ಅ.14ರಂದು ಮತ್ತೊಂದು ಸಭೆ ನಡೆಯಲಿದ್ದು ಸಂಪೂರ್ಣ ವರದಿ ಹೊರಬರುವ ಸಾಧ್ಯತೆಯಿದೆ.
ದೂರುಗಳು ಕೇಳಿಬಂದ ಕೂಡಲೇ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮಕೈಗೊಂಡಿರುವ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ತನಿಖಾ ಸಮಿತಿ ರಚಿಸಿ ಶೀಘ್ರವಾಗಿ ವರದಿ ನೀಡುವಂತೆ ಸೂಚಿಸಿದ್ದಾರೆ. ತಪ್ಪುಗಳಾಗಿರುವುದು ದೃಢವಾದರೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ವಿವಿ ನಿರ್ಧಾರ ತೆಗೆದುಕೊಳ್ಳಲೇಬೇಕಿದೆ. ಪ್ರೊ.ಗಂಗಾನಾಯ್ಕೊ ಅಧ್ಯಕ್ಷತೆಯ ಸಮಿತಿ ಸದಸ್ಯರಾಗಿ ಸಿಂಡಿಕೇಟ್ ಸದಸ್ಯರಾದ ಪ್ರಸನ್ನಕುಮಾರ್, ಬಾಲಪ್ಪ, ಟಿ.ಎಸ್.ಸುನೀಲ್‌ಪ್ರಸಾದ್, ಕಲಾ ಕಾಲೇಜು ಪ್ರಾಚಾರ್ಯ ಕೆ.ರಾಮಚಂದ್ರಪ್ಪ, ಸಹಾಯಕ ಪ್ರಾಧ್ಯಾಪಕ ಡಾ.ಕೆ.ಸಿ.ಸುರೆಶ್, ಮೈಸೂರು ವಿವಿ ನಿವೃತ್ತ ಪ್ರೊಗ್ರಾಮರ್ ನಂಜುಂಡಯ್ಯ ಅವರಿದ್ದು, ಸಂಚಾಲಕರಾಗಿ ರೇವಣ್ಣ ಇರಲಿದ್ದಾರೆ.
ಕಲಾ ಕಾಲೇಜಿನಲ್ಲಿಯೂ ಇದೇ ಸಮಸ್ಯೆ?: ತುಮಕೂರು ವಿವಿ ವಿಜ್ಞಾನ ಕಾಲೇಜಿನಲ್ಲಿ ನಡೆದಿರಬಹುದಾದ ಮೀಸಲಾತಿ ಉಲ್ಲಂಘನೆ ಕಲಾ ಕಾಲೇಜಿನಲ್ಲಿಯೂ ನಡೆದಿದೆ ಎಂಬ ಅನುಮಾನ ತನಿಖಾ ಸಮಿತಿಯ ಮೊದಲ ಸಭೆಯಲ್ಲಿಯೇ ವ್ಯಕ್ತವಾಗಿದೆ. ಮೆರಿಟ್ ಲಿಸ್ಟ್ ತಯಾರಿಸದೇ ಶೇ.70ಕ್ಕಿಂತ ಹೆಚ್ಚಿರುವ ಅಂಕದ ವಿದ್ಯಾರ್ಥಿಗಳೆಲ್ಲ ಪ್ರವೇಶಾತಿ ಪಡೆಯುವಂತೆ ಅವೈಜ್ಞಾನಿಕ ಆದೇಶ ಪರಿಶಿಷ್ಟ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು ಹೆಚ್ಚಿನ ತನಿಖೆಯ ಅವಶ್ಯಕತೆಯಿದೆ.
ಏನಿದು ಆರೋಪ?: ಕರೊನಾ ಆತಂಕದ ನಡುವೆಯೂ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ವಿವಿ ಆಡಳಿತ ಪ್ರಸಕ್ತ ವರ್ಷದ ಶೈಕ್ಷಣಿಕ ಚಟುವಟಿಕೆಗೆ ಚಾಲನೆ ನೀಡಿ ಆಗಸ್ಟ್ 14ರಿಂದ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿತ್ತು. ಮೊದಲ ಹಂತದಲ್ಲಿ ಶೇ.70 ಅಂಕ ಮೇಲ್ಪಟ್ಟ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅವಕಾಶ ನೀಡಿದ್ದು ಇಲ್ಲಿ ಮೀಸಲಾತಿ ಪಾಲಿಸದಿರುವುದು ಈಗ ಸಂಕಷ್ಟ ತಂದಿದೆ. ಹೆಚ್ಚು ಅಂಕ ಗಳಿಸಿರುವ ಪರಿಶಿಷ್ಟ ಹಾಗೂ ಒಬಿಸಿ ವಿದ್ಯಾರ್ಥಿಗಳನ್ನು ಸಾಮಾನ್ಯ ವರ್ಗದ ಸೀಟು ಹಂಚಿಕೆಯಲ್ಲಿ ಪರಿಗಣಿಸಿಲ್ಲ ಎಂಬುದು ಈಗಿರುವ ದೂರು. ಸಾಮಾನ್ಯ ವರ್ಗದ ಅಂಕಕ್ಕೆ ಅರ್ಹರಿದ್ದ ಪರಿಶಿಷ್ಟ ಹಾಗೂ ಒಬಿಸಿ ವಿದ್ಯಾರ್ಥಿಗಳಿಗೆ ಸಾಮಾನ್ಯ ವರ್ಗದಲ್ಲಿ ಪ್ರವೇಶಾತಿ ನೀಡಿದ್ದರೆ ಮತ್ತಷ್ಟು ಸೀಟುಗಳು ಪರಿಶಿಷ್ಟ ಹಾಗೂ ಒಬಿಸಿಗೆ ಸಿಗುತ್ತಿತ್ತು ಎನ್ನಲಾಗಿದ್ದು ಈ ಬಗ್ಗೆ ತನಿಖೆ ಸಮಿತಿ ವರದಿ ನೀಡಬೇಕಿದೆ.
ವಿದ್ಯಾರ್ಥಿಗಳಿಗೆ ಗೊಂದಲ ಮೂಡಿಸಿ ಪ್ರವೇಶಾತಿ ಪ್ರಕ್ರಿಯೆ ನಡೆಸಲಾಗಿದೆ ಎಂಬ ದೂರುಗಳು ಕೇಳಿಬಂದಿವೆ, ಈ ಬಗ್ಗೆ ದಾಖಲೆಗಳನ್ನು ವಿಜ್ಞಾನ ಕಾಲೇಜು ನೀಡದೆ ವಿಳಂಬ ಮಾಡುತ್ತಿದೆ, ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದರೆ ಎಬಿವಿಪಿ ಬೀದಿಗಿಳಿದು ಹೋರಾಟ ನಡೆಸಲಿದೆ. ಅಪ್ಪು ಪಾಟೀಲ್‌ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರವೇಶಾತಿಯಲ್ಲಿ ರೋಸ್ಟರ್ ನಿಯಮ ಪಾಲಿಸಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ದಾಖಲೆಗಳನ್ನು ಪರಿಶೀಲಿಸಲು ತನಿಖಾ ಸಮಿತಿ ರಚಿಸಲಾಗಿದೆ, ಅರ್ಹರಿಗೆ ಅನ್ಯಾಯವಾಗದಂತೆ ವಿವಿ ಕ್ರಮಕೈಗೊಳ್ಳಲಿದೆ. ತನಿಖೆ ಪೂರ್ಣಗೊಂಡ ನಂತರವಷ್ಟೇ ಇಲ್ಲಿ ತಪ್ಪುಗಳಾಗಿರುವ ಬಗ್ಗೆ ತಿಳಿಯಲು ಸಾಧ್ಯ. ಪ್ರೊ.ಗಂಗಾನಾಯ್ಕೊ ಕುಲಸಚಿವ