ಬೆಂಗಳೂರು: 2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಲಿಂಗಾಯತರು ನಡೆಸುತ್ತಿರುವ ಹೋರಾಟ ಕಾವೇರಿದ್ದು, ಇದೀಗ ಹೋರಾಟಗಾರರ ದಂಡು ವಿಧಾನಸೌಧದತ್ತ ಸಾಗುತ್ತಿದ್ದು, ಸಂಚಲನ ಮೂಡಿಸಿದೆ. ಪ್ರತಿಭಟನಾಕಾರರು ವಿಧಾನಸೌಧಕ್ಕೆ ತಲುಪದಂತೆ ತಡೆಯಲು ಪೊಲೀಸರು ಹರಸಾಹಸ ಮಾಡುತ್ತಿದ್ದು, ಸುತ್ತಮುತ್ತಲಿನ ರಸ್ತೆಗಳಲ್ಲೆಲ್ಲ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ.
ಪಂಚಮಸಾಲಿ ಲಿಂಗಾಯತ ಸಮುದಾಯದ ಸ್ವಾಮೀಜಿಗಳು ಹಾಗೂ ರಾಜಕೀಯ ನಾಯಕರ ನೇತೃತ್ವದಲ್ಲಿ ಬೆಳಗ್ಗೆ ಅರಮನೆ ಮೈದಾನದಲ್ಲಿ ಸಮಾವೇಶ ಸೇರಿ ಕೆಲವು ನಿರ್ಣಯ ಕೈಗೊಂಡಿರುವ ಪ್ರತಿಭಟನಾಕಾರರು, ಇದೀಗ ಅದೇ ನೇತೃತ್ವದಲ್ಲಿ ವಿಧಾನಸೌಧದ ಬಳಿಗೆ ತೆರಳಿ ಧರಣಿ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಈ ಸಮುದಾಯದವರು ಅರಮನೆ ಮೈದಾನದಿಂದ ವಿಧಾನಸೌಧದತ್ತ ತೆರಳುತ್ತಿದ್ದು, ಕಾವೇರಿ ಜಂಕ್ಷನ್ ಬಳಿ ಪೊಲೀಸರು ಅವರನ್ನು ತಡೆದಿದ್ದಾರೆ. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಹರಸಾಹಸ ಪಡುತ್ತಿದ್ದಾರೆ. ಪ್ಯಾಲೇಸ್ ಗುಟ್ಟಹಳ್ಳಿ ಬಳಿ ಬ್ಯಾರಿಕೇಡ್ ಹಾಕಿರುವ ಪೊಲೀಸರು ಕೆಎಸ್ಆರ್ಪಿ ವಾಹನಗಳನ್ನೇ ರಸ್ತೆ ಅಡ್ಡಲಾಗಿಟ್ಟು, ವಿಧಾನಸೌಧಕ್ಕೆ ತೆರಳದಂತೆ ತಡೆಯಲು ಮುಂದಾಗಿದ್ದಾರೆ. ಪರಿಸ್ಥಿತಿ ಹದಗೆಡದಂತೆ ಕಾನೂನುಸುವ್ಯವಸ್ಥೆ ಕಾಪಾಡಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರೇ ಖುದ್ದು ಫೀಲ್ಡ್ಗಿಳಿದು ಸೂಚನೆ ನೀಡಲಾರಂಭಿಸಿದ್ದಾರೆ.
ಯಾವುದೇ ಕಾರಣಕ್ಕೂ ವಿಧಾನಸೌಧ ಬಳಿ ಧರಣಿ ನಡೆಸಲು ಅವಕಾಶ ಕೊಡದಂತೆ ಸರ್ಕಾರ ಪೊಲೀಸರಿಗೆ ಸೂಚನೆ ನೀಡಿದ್ದು, ಆ ನಿಟ್ಟಿನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಇನ್ನು ಪ್ರತಿಭಟನೆ, ಪೊಲೀಸರ ಬಂದೋಬಸ್ತ್ ನಡುವೆ ಸಂಚಾರದಟ್ಟಣೆ ಉಂಟಾಗಿದ್ದು, ಸಾರ್ವಜನಿಕರ ವಾಹನಗಳೂ ಮಾರ್ಗಮಧ್ಯೆ ಸಿಲುಕಿಕೊಂಡಂತಾಗಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ