ಜಿಲ್ಲೆ

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ, ಆಡಳಿತ ಚುಕ್ಕಾಣಿಯ ಲೆಕ್ಕಾಚಾರ ಶುರು

ಚಿಕ್ಕಬಳ್ಳಾಪುರ; ನಗರ, ಪಟ್ಟಣ ಪ್ರದೇಶ ವ್ಯಾಪ್ತಿಯ ಸ್ಥಳಿಯ ಆಡಳಿತ ಸಂಸ್ಥೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರವು ಮೀಸಲಾತಿಯನ್ನು ಹೊರಡಿಸಿರುವುದರ ನಡುವೆ ಜಿಲ್ಲೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವ ಲೆಕ್ಕಾಚಾರದ ರಾಜಕೀಯ ಚಟುವಟಿಕೆ ಶುರುವಾಗಿವೆ.

ಹೌದು! ಮೀಸಲಾತಿ ಪಟ್ಟಿಯ ಅನುಸಾರ ಸ್ಪರ್ಧೆಗೆ ಅರ್ಹತೆ ಹೊಂದಿರುವುದರ ಸ್ಪಷ್ಟವಾಗುತ್ತಿದ್ದಂತೆ ಆಕಾಂಗಳು ಪಕ್ಷದ ನಾಯಕರು, ಪದಾಧಿಕಾರಿಗಳು ಮತ್ತು ಬೆಂಬಲಿತರ ಸದಸ್ಯರೊಂದಿಗೆ ಮುಂದಿನ ನಡೆಯ ಬಗ್ಗೆ ಮೊದಲ ಹಂತದ ಚರ್ಚೆ ಪ್ರಾರಂಭಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕಸರತ್ತನ್ನು ಮತ್ತಷ್ಟು ತೀವ್ರಗೊಳಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಜಿಲ್ಲೆಯಲ್ಲಿ 4 ನಗರಸಭೆ, 1 ಪಟ್ಟಣ ಪಂಚಾಯಿತಿ, 1 ಪುರಸಭೆ ಇದೆ. ಈಗ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಗೆ ಮೀಸಲಾತಿ ಘೋಷಣೆಯಾಗಿದೆ.

* ಚಾತಕ ಪಕ್ಷಿಗಳಂತೆ ಕಾಯುವಿಕೆ                                                                                                                                                    ಕಳೆದ ಒಂದೂ ವರೆ ವರ್ಷದಿಂದಲೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿಗೆ ಸಂಬಂಧಿಸಿದಂತೆ ವಿವಾದ ಉಂಟಾಗಿದ್ದು ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿತ್ತು. ಇದರಿಂದ ಗಾದಿಯ ಅಧಿಕಾರವನ್ನು ಅನುಭವಿಸಲು ತಿಂಗಳಾನುಗಟ್ಟಲೇ ಚಾತಕ ಪಕ್ಷಿಗಳಂತೆ ಎದುರು ನೋಡಬೇಕಾಯಿತು. ಇದೀಗ ಸರ್ಕಾರವು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದ್ದು ಆಯಾ ವ್ಯಾಪ್ತಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳು ಚುನಾವಣಾ ದಿನವನ್ನು ನಿಗದಿಪಡಿಸಲಿದ್ದಾರೆ.

*ಸರ್ಕಾರದ ಮೇಲೆ ಒತ್ತಡ

ಸ್ಥಳಿಯ ಆಡಳಿತ ಸಂಸ್ಥೆಗಳಲ್ಲಿ ಶತಾಯ ಗತಾಯ ಹಿಡಿತವನ್ನು ಸಾಧಿಸಬೇಕೆಂಬ ಪ್ರತಿಷ್ಠೆಯನ್ನು ಪಕ್ಷಗಳು ಹೊಂದಿವೆ. ಇದಕ್ಕೆ ಜಿಲ್ಲೆಯ ಶಾಸಕರುಗಳು ಆಯಾ ವ್ಯಾಪ್ತಿಯಲ್ಲಿ ಅನುಕೂಲಕರ ಮೀಸಲಾತಿಯ ಬಗ್ಗೆ ಚರ್ಚಿಸಿ, ನಿಗದಿಪಡಿಸುವಲ್ಲಿ ಒತ್ತಡವನ್ನೂ ಹೇರಿದ್ದಾರೆ. ಸದಸ್ಯತ್ವದ ಬಲ, ಪ್ರಬಲ ಆಕಾಂಗಳು, ಮೈತ್ರಿಯಾಧಾರದ ಅನುಕೂಲಕರ ನಿಲುವು ಸೇರಿದಂತೆ ನಾನಾ ಅಂಶಗಳಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ.

ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಮೊದಲಿನಿಂದಲೂ ಅಧ್ಯಕ್ಷಗಾದಿಯ ಮೇಲೆ ಸಾಮಾನ್ಯ ವರ್ಗದವರು ಕಣ್ಣಿಟ್ಟಿದ್ದು ಅಧಿಕಾರವನ್ನು ದಕ್ಕಿಸಿಕೊಳ್ಳುವ ನಿಟ್ಟಿನಲ್ಲಿ ನಾನಾ ಕಸರತ್ತು ನಡೆಸಿದ್ದರು. ಇದಕ್ಕೆ ಅನುಗುಣವಾಗಿ ಮೀಸಲಾತಿಯ ಸೌಲಭ್ಯ ಸಿಕ್ಕಿದೆ ಎನ್ನಲಾಗುತ್ತಿರುವುದು ಒಂದು ನಿದರ್ಶನ.

*ಚುನಾವಣೆ ನಡೆಸುವಲ್ಲಿ ಈಗಾಗಲೇ ತುಂಬಾ ವಿಳಂಬ ಮಾಡಲಾಗಿದೆ. ಇದೀಗ ಸರ್ಕಾರವು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದೆ. ಇದರ ಬಗ್ಗೆ ತಿಳಿಯುತ್ತಿದ್ದಂತೆ ಸಂಬಂಧಪಟ್ಟವರೊಂದಿಗೆ ಆಕಾಂಗಳು ಚರ್ಚಿಸಿ, ಮಾಹಿತಿ ಪಡೆಯುತ್ತಿದ್ದು ಮುಂದಿನ ನಡೆಗಳ ಬಗ್ಗೆ ಕಾದು ನೋಡಬೇಕಾಗಿದೆ.

ಆರ್​.ಮಟಮಪ್ಪ, ನಗರಸಭಾ ಸದಸ್ಯ, ಚಿಕ್ಕಬಳ್ಳಾಪುರ