ಜಿಲ್ಲೆ

ನ್ಯಾಷನಲ್​ ಲಾ ಕಾಲೇಜಿನಲ್ಲಿ ಕನ್ನಡಿಗರಿಗೆ ಮೀಸಲಾತಿ

ಕೋಲಾರ: ಕರ್ನಾಟಕದ ನ್ಯಾಷನಲ್​ ಲಾ ಕಾಲೇಜಿನಲ್ಲಿ ಕನ್ನಡಿಗರಿಗೆ ಈ ಮೊದಲು ವಂಚನೆ ಮತ್ತು ಧೋರಣೆಯ ದೂರುಗಳು ಕೇಳಿ ಬರುತ್ತಿದ್ದವು. ಆದರೆ, ಸುಪ್ರೀಂಕೋರ್ಟ್​ನ ನಿರ್ಗಮಿತ ಮುಖ್ಯ ನ್ಯಾಯಾಧೀಶ ಚಂದ್ರಚೂಡ ಅವರು ಕುಲಪತಿಗಳಾದ ನಂತರ ಸಮಸ್ಯೆ ಬಗೆಹರಿದಿದ್ದು, ಈಗಿರುವ ಉಪಕುಲಪತಿಗಳು ನಮ್ಮ ಸರ್ಕಾರದ ನಿಲುವುಗಳಿಗೆ ಸರಿಯಾದ ಸ್ಪಂದನೆ ನೀಡುತ್ತಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್​.ಕೆ.ಪಾಟೀಲ್​ ತಿಳಿಸಿದರು.

ಬೆಳಗಾವಿಯ ಸುವರ್ಣ ಸೌಧದಲ್ಲಿನ ಚಳಿಗಾಲದ ಅಧಿವೇಶನದಲ್ಲಿ ಗುರುವಾರ ಕೋಲಾರ ವಿಧಾನ ಪರಿಷತ್​ ಸದಸ್ಯ ಎಂ.ಎಲ್​.ಅನಿಲ್​ ಕುಮಾರ್​ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ಕಂಪಾಟ್ಮೆಂಟಲ್​ ಲೈಸೆಡ್​ ಹಾರಿಜಂಟಲ್​ ರಿಸರ್ವೇಷನ್​ನಡಿ ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25 ಮೀಸಲಾತಿ ನೀಡುತ್ತಿದ್ದಾರೆ. ನ್ಯಾಷನಲ್​ ಲಾ ಸ್ಕೂಲ್​ನಲ್ಲಿ ಪ.ಜಾತಿ ವಿದ್ಯಾರ್ಥಿಗಳಿಗೆ ಶೇ.15 ಪ.ಪಂಗಡ ವಿದ್ಯಾರ್ಥಿಗಳಿಗೆ ಶೇ.7.5, ಹಿಂದುಳಿದ ವರ್ಗಗಳಿಗೆ ಶೇ.27, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10, ಅಂಗವಿಕಲರಿಗೆ ಶೇ.5, ಮಹಿಳೆಯರಿಗೆ ಶೇ.30 ಮೀಸಲಾತಿ ನೀಡುತ್ತಿದ್ದಾರೆ. ನನ್ನ ಗಮನಕ್ಕೆ ಯಾವುದೇ ದೂರುಗಳು ಬಂದಿಲ್ಲ. ದೂರುಗಳಿದ್ದಲ್ಲಿ ಗಮನಕ್ಕೆ ತಂದರೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸುವುದಾಗಿ ತಿಳಿಸಿದರು.

ರಾಜ್ಯ ಸರ್ಕಾರದಿಂದ ಎಲ್ಲ ಸೌಲಭ್ಯಗಳನ್ನು ಪಡೆದು ಕರ್ನಾಟಕದಲ್ಲಿ ಸ್ಥಾಪಿಸಿರುವ ನ್ಯಾಷನಲ್​ ಲಾ ಕಾಲೇಜಿನಲ್ಲಿ ಕನ್ನಡಿಗರಿಗೆ ಆಗುತ್ತಿರುವ ವಂಚನೆ ಮತ್ತು ಧೋರಣೆ ಕುರಿತು ಎಂಎಲ್​ಸಿ ಎಂ.ಎಲ್​.ಅನಿಲ್​ ಕುಮಾರ್​ ಅವರು ಪ್ರಶ್ನಿಸಿದರು.

1988ರಲ್ಲಿ ಅಂದಿನ ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ನ್ಯಾಷನಲ್​ ಲಾ ಸ್ಕೂಲ್​ ಸ್ಥಾಪನೆ ಮಾಡಲು ರಾಜ್ಯ ಸರ್ಕಾರದಿಂದಲೇ ಭೂಮಿ ಮಂಜೂರು, ಮೂಲ ಸೌಕರ್ಯ ನೀಡಿ ಸ್ಥಾಪಿಸಿದ್ದರು. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಕನ್ನಡಿಗರಿಗೆ ಶೇ.25 ಮೀಸಲಾತಿ ನೀಡುವ ಕಾಯ್ದೆ ರೂಪಿಸಿದ್ದಾರೆ. ಆದರೆ, ನ್ಯಾಷನಲ್​ ಲಾ ಸ್ಕೂಲ್​ ಮತ್ತು ಕಾಲೇಜಿನ ಆಡಳಿತ ಮಂಡಳಿಯವರು ನ್ಯಾಯಾಲಯದಲ್ಲಿ

ದಾವೆ ಸಲ್ಲಿಸಿ ಈ ಕಾಯ್ದೆ ರದ್ದುಪಡಿಸಿದ್ದಾರೆ ಎಂದರು.

ತದ ನಂತರ ಸುಪ್ರೀಂ ಕೋರ್ಟಿನಲ್ಲಿ ಶೇ.25 ಮೀಸಲಾತಿ ನೀಡುವಂತೆ ಸೂಚಿಸಲಾಗುತ್ತದೆ. ಆದರೆ, ಬೆಂಗಳೂರಿನಲ್ಲಿ ಸ್ಥಾಪಿಸಿರುವ ನ್ಯಾಷನಲ್​ ಲಾ ಸ್ಕೂಲ್​ ಮತ್ತು ಕಾಲೇಜಿನವರು ಶೇ.25ಮೀಸಲಾತಿ ನೀಡುತ್ತಿಲ್ಲ. ಆಲ್​ ಇಂಡಿಯಾ ರ್ಯಾಂಕಿಂಗ್​ ಜನರಲ್​ ಮೆರಿಟ್​ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಶೇ.25 ಮೀಸಲಾತಿ ಅಡಿ ತಂದು ನಮ್ಮ ವಿದ್ಯಾರ್ಥಿಗಳಿಗೆ ವಂಚಿಸುತ್ತಿದ್ದಾರೆ. ರಾಜ್ಯದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿ ಉನ್ನತ ಮತ್ತು ಗುಣಮಟ್ಟದ ಶಿಕ್ಷಣ ಕಲ್ಪಿಸುವಲ್ಲಿ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದರು.