ಜಿಲ್ಲೆ

ಅ. 1ರಿಂದ ಫ್ರೀಡಂ ಪಾರ್ಕಿನಲ್ಲಿ ಮತ್ತೆ ಸತ್ಯಾಗ್ರಹ: ಜಯಮೃತ್ಯುಂಜಯ ಸ್ವಾಮೀಜಿ

ಗೋಪಾಲಕೃಷ್ಣ ಪಾದೂರ್

ಉಡುಪಿ: ಲಿಂಗಾಯಿತ ಸಮುದಾಯದ ಎಲ್ಲಾ ಪಂಗಡಗಳಿಗೆ 2ಎ ಮೀಸಲಾತಿ ನೀಡುವ ಬಗ್ಗೆ ಸರ್ಕಾರ ಸೆ. 15ರವರೆಗೆ ಕಾಲಾವಕಾಶ ಕೇಳಿದ್ದು, ಅ. 1ರೊಳಗೆ ಮೀಸಲಾತಿ ನೀಡದಿದ್ದರೆ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಮತ್ತೆ ಸತ್ಯಾಗ್ರಹ ನಡೆಸಲಾಗುವುದು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಮಹಾ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪ್ರತಿಜ್ಞಾ ಪಂಚಾಯತ್ ಅಭಿಯಾನ ಅಂಗವಾಗಿ ಉಡುಪಿಗೆ ಭೇಟಿ ನೀಡಿದ ಅವರು  ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಲಿಂಗಾಯಿತ ಸಮುದಾಯ 3 ಕೋಟಿ ಜನಸಂಖ್ಯೆ ಹೊಂದಿದ್ದು, ಸಾಮಾಜಿಕ ಸೌಲಭ್ಯದಿಂದ ವಂಚಿತವಾಗಿದೆ. ಹೀಗಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು. ಲಿಂಗಾಯತ ಸಮುದಾಯದಲ್ಲಿ 110 ಪಂಗಡಗಳಿದ್ದು ಇದರಲ್ಲಿ 34 ಪಂಗಡಗಳಿಗೆ 2 ಎ  ಮೀಸಲಾತಿ ಸೌಲಭ್ಯ ನೀಡಲಾಗಿದೆ. 12 ಪಂಗಡಗಳು 3ಬಿ ಮೀಸಲಾತಿ ಪಡೆದಿವೆ. ಉಳಿದ ಪಂಗಡಗಳು ಅವಕಾಶ ವಂಚಿತವಾಗಿದ್ದು, ಎಲ್ಲರಿಗೂ 2ಎ ಮೀಸಲಾತಿ ಸೌಲಭ್ಯ ದೊರೆಯಬೇಕು. ಈ ಬಗ್ಗೆ ಸರಕಾರವನ್ನು ಆಗ್ರಹಿಸಲಾಗಿದ್ದು, ಈ ಕುರಿತು ವರದಿ ನೀಡುವಂತೆ ಹಿಂದುಳಿದ ವರ್ಗದ ಆಯೋಗಕ್ಕೆ ಸರಕಾರ ಪತ್ರ ಬರೆದಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಮೀಸಲಾತಿ ನೀಡುವ ಅಧಿಕಾರವನ್ನು  ರಾಜ್ಯಗಳಿಗೆ ವಹಿಸಿರುವುದರಿಂದ ವರದಿಯನ್ನು ಶ್ರೀಘ್ರವಾಗಿ ತರಿಸಿಕೊಂಡು ಲಿಂಗಾಯಿತ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ  ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.  ಯುಸಿ ನಿರಂಜನ್, ಉಡುಪಿ ಬಸವ ಸಮಿತಿ ಅಧ್ಯಕ್ಷ ಸಿದ್ದರಾಮಣ್ಣ, ಪದಾಧಿಕಾರಿಗಳಾದ ಗಂಗಾಧರ,  ಸುರೇಶ್, ಮಲ್ಲಿಕಾರ್ಜುನಪ್ಪ, ಶಂಭುಲಿಂಗ ಶೆಟ್ಟರ್ ಮೊದಲಾದವರು ಉಪಸ್ಥಿತರಿದ್ದರು.