ಜಿಲ್ಲೆ

ಅಬಕಾರಿ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ

ದತ್ತಾತ್ರೇಯ ಪಿ ಕುಲಕರ್ಣಿ

ಜಮಖಂಡಿ:ಅಬಕಾರಿ ಇಲಾಖೆ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್​.ಬಿ. ತಿಮ್ಮಾಪೂರ ಹೇಳಿದರು.ನಗರದ ಬಿಎಲ್​ಡಿಇ ಕಾಲೇಜಿನ ದರ್ಬಾರ್​ ಹಾಲ್​ನಲ್ಲಿ ಬೆಂಗಳೂರು ರಾಜೀವ್​ ಗಾಂಧಿ ಯೂನಿವರ್ಸಿಟಿ ಹೆಲ್ತ್​ ಸೈನ್ಸ್​, ಬಿಎಲ್​ಡಿಇ ನರ್ಸಿಂಗ್​ ಕಾಲೇಜು ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪುರುಷರ ಇಂಟರ್​ ಜೋನ್​, ಮಹಿಳೆಯರ ಸಿಂಗಲ್​ ಜೋನ್​ ಕಬಡ್ಡಿ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಬಡ್ಡಿ ಮತ್ತು ಸೈಕ್ಲಿಂಗ್​ ಕ್ರೀಡಾಪಟುಗಳಿಗೆ ಜಮಖಂಡಿ ಕೊಡುಗೆ ಬಹಳಷ್ಟು ಇದೆ. ಕ್ರೀಡೆಗಳಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ. ಸೋತವರು ನಾಳಿಯ ಗೆಲುವಿಗೆ ಮೆಟ್ಟಿಲು ಮಾಡಿಕೊಳ್ಳಬೇಕು, ಗೆದ್ದವರು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯ ಮಟ್ಟದಲ್ಲಿ ಬೆಳೆಯಬೇಕು ಎಂದರು.

ನನ್ನ ರಾಜಕೀಯ ಗುರುಗಳು ನನ್ನನ್ನು 27 ವಯಸ್ಸಿನಲ್ಲಿ ಎಂಎಲ್​ಎ ಸ್ಥಾನಕ್ಕೆ ನಿಲ್ಲಿಸಿದರು. ನನ್ನ ಗುರುಗಳು ಎಂಪಿ ಸ್ಥಾನಕ್ಕೆ ನಿಂತರು.

ಆದರೆ ಕಬಡ್ಡಿ ಕ್ರೀಡಾಪಟುವಾಗಿದ್ದ ನನಗೆ ನನ್ನ ಗೆಳೆಯರು ನನ್ನ ಗುರುಗಳಿಂತ ಹೆಚ್ಚಿಗೆ ಮತ ನೀಡಿದ್ದರು. ಇದಕ್ಕೆ ಗುರುಗಳು ಕೂಡಾ ಅಚ್ಚರಿ ವ್ಯಕ್ತಪಡಿಸಿದ್ದರು ಎಂದರು.ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಜಮಖಂಡಿ ಕ್ರೀಡೆಗಳಿಗೆ ತನ್ನದೆ ಛಾಪು ಮೂಡಿಸಿದೆ, ದೇಶಕ್ಕೆ ರಾಷ್ಟ್ರೀಯ ಸೈಕ್ಲಿಂಗ್​ ಕ್ರೀಡಾಪಟುಗಳನ್ನು ನೀಡಿದೆ. ಪ್ರೊ ಕಬಡ್ಡಿ ಕ್ರೀಡಾಕೂಟದಿಂದ ಇಂದು ಯುವ ಜನತೆ ಕಬಡ್ಡಿಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಜಮಖಂಡಿ ಸಿದ್ದು ನ್ಯಾಮಗೌಡ ಅಕಾಡೆಮಿಯಿಂದ ಮೂರು ಜನ ಪ್ರೊ ಕಬಡ್ಡಿಗೆ ಆಯ್ಕೆಯಾಗಿದ್ದು ಹೆಮ್ಮೆಯ ಮೂಡಿಸಿದೆ, ಕ್ರೀಡಾಪಟುಗಳು ತಮ್ಮ ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ಪ್ರಾಚಾರ್ಯ ಡಾ. ವೀರಭದ್ರಪ್ಪ ಜಿ.ಎಂ., ವಿ. ನಾಥನಿಲ್​, ಐ.ಎಸ್​. ನ್ಯಾಮಗೌಡ, ಧಮೇರ್ಂದ್ರ ಇತರರಿದ್ದರು. ಶ್ರೀನಿವಾಸ ಕಟ್ಟಿಮನಿ ನಿರೂಪಿಸಿ, ವಂದಿಸಿದರು.

ಜಮಖಂಡಿ ನಗರದ ಬಿಎಲ್​ಡಿಇ ಕಾಲೇಜಿನ ದರ್ಬಾರ್​ ಹಾಲ್​ನಲ್ಲಿ ನಡೆದ ಪುರುಷರ ಇಂಟರ್​ ಜೋನ್​, ಮಹಿಳೆಯರ ಸಿಂಗಲ್​ ಜೋನ್​ ಕಬಡ್ಡಿ ಕ್ರೀಡಾಕೂಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್​.ಬಿ. ತಿಮ್ಮಾಪೂರ ಉದ್ಘಾಟಿಸಿದರು. ಮಾಜಿ ಶಾಸಕ ಆನಂದ ನ್ಯಾಮಗೌಡ, ಡಾ. ವೀರಭದ್ರಪ್ಪ ಜಿ.ಎಂ., ವಿ. ನಾಥನಿಲ್​, ಐ.ಎಸ್​. ನ್ಯಾಮಗೌಡ, ಧಮೇರ್ಂದ್ರ ಇತರರಿದ್ದರು.