ತಂಗಡಗಿಯಲ್ಲಿ ಒಳ ಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನಾ ರ್ಯಾಲಿ, ಜನಜಾಗೃತಿ ಯಾತ್ರೆಗೆ ಚಾಲನೆ ನೀಡಲಾಯಿತು. ಡಿ.ಬಿ.ಮುದೂರ, ತಿಪ್ಪಣ್ಣ ದೊಡಮನಿ, ಚನ್ನಪ್ಪ ವಿಜಯಕರ್​, ಕೆ.ಬಿ.ದೊಡಮನಿ, ಬಸವರಾಜ ಪೂಜಾರಿ, ಪ್ರಶಾಂತ ಕಾಳೆ, ಪ್ರಕಾಶ ಸರೂರ, ಬಾಲಚಂದ್ರ ಹುಲ್ಲೂರ, ಆನಂದ ಮುದೂರ, ಶೇಖರ ಆಲೂರ ಇತರರಿದ್ದರು. 
ಜಿಲ್ಲೆ

ತಂಗಡಗಿಯಲ್ಲಿ ಒಳಮೀಸಲಾತಿ ಜನಜಾಗೃತಿ ಯಾತ್ರೆ ಆರಂಭ

ಗಿರೀಶ ಸಗರ

ತಂಗಡಗಿ: ಸುಪ್ರೀಂಕೋರ್ಟ್​ ಆದೇಶದಂತೆ ಒಳಮೀಸಲಾತಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಒಳಮೀಸಲಾತಿ ಐಕ್ಯತಾ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಇಲ್ಲಿನ ದುರ್ಗಾದೇವಿಗೆ ಪೂಜೆ ಸಲ್ಲಿಸಿ ಬೃಹತ್​ ಪ್ರತಿಭಟನಾ ರ್ಯಾಲಿ ಹಾಗೂ ಜನಜಾಗೃತಿ ಯಾತ್ರೆಗೆ ಚಾಲನೆ ನೀಡಲಾಯಿತು.

ಡಿಎಸ್​ಎಸ್​ ರಾಜ್ಯ ಸಂಟನಾ ಸಂಚಾಲಕ ಡಿ.ಬಿ.ಮುದೂರ ಮಾತನಾಡಿ, ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರೀಂಕೋರ್ಟ್​ ತೀರ್ಪು ಕೊಟ್ಟಿದೆ. ತೆಲಂಗಾಣ ಸೇರಿ ಹಲವು ರಾಜ್ಯಗಳಲ್ಲಿ ಒಳಮೀಸಲಾತಿ ಅನುಷ್ಠಾನಕ್ಕೆ ಬಂದಿದ್ದರೂ ಕರ್ನಾಟಕದಲ್ಲಿ ಮಾತ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಸರ್ಕಾರದ ಸಚಿವರೇ ಸಿಎಂ ಸಿದ್ದರಾಮಯ್ಯ ಅವರ ಹತ್ತಿರ ಹೋಗಿ ಅನುಷ್ಠಾನಕ್ಕೆ ಮನವಿ ಮಾಡಿದ್ದರೂ ಚುನಾವಣೆಯ ನೆಪವೊಡ್ಡಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ವಕೀಲ ಕೆ.ಬಿ.ದೊಡಮನಿ ಮಾತನಾಡಿ, ಜನಜಾಗೃತಿ ಮೂಡಿಸುವ ಈ ಯಾತ್ರೆ ಮುದ್ದೇಬಿಹಾಳ ತಾಲೂಕಿನ ಎಲ್ಲ ಹಳ್ಳಿಗಳಲ್ಲೂ ಸಂಚರಿಸಲಿದೆ. ಇದು ರಾಜಕೀಯ ಹೊರತಾದ ಸಂಟನೆಯಾಗಿದ್ದು ಯಾರೂ ರಾಜಕೀಯ ಮಾಡಬಾರದು. 30 ವರ್ಷಗಳ ಈ ಹೋರಾಟಕ್ಕೆ ಈಗ ಜಯ ಸಿಕ್ಕಿದ್ದು ಸರ್ಕಾರ ಕೂಡಲೇ ಒಳಮೀಸಲಾತಿ ಅನುಷ್ಠಾನಗೊಳಿಸಬೇಕು ಎಂದರು.

ವೈ.ಎಚ್​.ವಿಜಯಕರ್​ ಮಾತನಾಡಿ, ಚಲವಾದಿ ಸಮುದಾಯಕ್ಕೆ ಸೇರಿದ ಶಾಸಕರು, ಮಂತ್ರಿಗಳು ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹೇರಬೇಕು. ಇಲ್ಲದಿದ್ದರೆ ಅಂಥವರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದರು.

ದೇವಿಯ ಆರಾಧಕ ಶಾಂತಪ್ಪ ಪೂಜಾರಿ, ಹಿರಿಯ ಮುಖಂಡರಾದ ಡಿ.ಬಿ.ಮುದೂರ, ವಿವಿಧ ಪರಿಶಿಷ್ಟ ಸಂಟನೆಗಳ ಮುಖಂಡರಾದ ಬಸವರಾಜ ಪೂಜಾರಿ, ತಿಪ್ಪಣ್ಣ ದೊಡಮನಿ, ಪ್ರಶಾಂತ ಕಾಳೆ, ಪ್ರಕಾಶ ಚಲವಾದಿ ಸರೂರ, ಭೀಮಣ್ಣ ಹುಲ್ಲೂರ, ಬಾಲಚಂದ್ರ ಹುಲ್ಲೂರ, ಭಗವಂತ ಕಬಾಡೆ, ಶಿವಪ್ಪ ಮಾದರ, ಆನಂದ ಮುದೂರ, ಶೇಖರ ಆಲೂರ, ಗ್ರಾಪಂ ಸದಸ್ಯ ಮಂಜುನಾಥ ಪೂಜಾರಿ, ಸಿದ್ದಣ್ಣ ಚಲವಾದಿ ಹಾಗೂ ತಂಗಡಗಿ, ಮುದ್ದೇಬಿಹಾಳ, ನಾಲತವಾಡ ಭಾಗದಿಂದ ಸಮಿತಿಯ ಸದಸ್ಯರು ಭಾಗವಹಿಸಿದ್ದರು.

ತಂಗಡಗಿಯಿಂದ ಚಾಲನೆಗೊಂಡ ರ್ಯಾಲಿ ಅಮರಗೋಳ ಮಾರ್ಗವಾಗಿ ಆಲೂರು ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಚರಿಸಿ ಸಂಜೆ ಗರಸಂಗಿಯಲ್ಲಿ ವಾಸ್ತವ್ಯ ಮಾಡಿತು. ಅ.22 ರಂದು ರಕ್ಕಸಗಿ, ಬಿಜ್ಜೂರ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಚರಿಸಿ ನಾಲತವಾಡ ಪಟ್ಟಣದಲ್ಲಿ ಸಂಜೆ ವಾಸ್ತವ್ಯ ಮಾಡಲಿದೆ ಎಂದು ಮುಖಂಡರು ತಿಳಿಸಿದರು.